ಆಗುಂಬೆ ಘಾಟಿಯಲ್ಲಿ ಲಾರಿಯ ಟೈಯರ್ ಸಿಡಿದು ಸಂಚಾರ ಅಸ್ತವ್ಯಸ್ತ

Update: 2022-12-08 07:33 GMT

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಲಾರಿ ಟೈಯರ್ ಸ್ಫೋಗೊಂಡು ಕೆಲವು ಹೊತ್ತು ವಾಹನ ಸಂಚಾರ ಸ್ಥಗಿತವಾದ ಘಟನೆ ನಡೆದಿದೆ.

ಘಾಟಿಯ 8ನೇ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ಕ್ಯಾಂಟರ್ ಲಾರಿಯ ಹಿಂಬದಿ ಟೈಯರ್ ಸ್ಪೋಟಗೊಂಡಿದೆ. ತಿರುವಿನಲ್ಲೇ ಲಾರಿ ನಿಂತಿದ್ದರಿಂದ ಇತರೆ ವಾಹನಗಳ ಸವಾರರು ಹರಸಾಹಸ ಪಡುವಂತಾಯಿತು.

ಪೊಲೀಸರು ಕ್ರೇನ್ ತರಿಸಿ ಲಾರಿಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಬಸ್ಸುಗಳು ಕೂಡ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಯಿತು. ಇದರಿಂದ ವಾಹನಗಳು ನಿಧಾನವಾಗಿ ಸಂಚರಿಸುತ್ತಿವೆ.

ತಿರುವಿನಲ್ಲಿ ಲಾರಿ ನಿಂತಿದ್ದರಿಂದ ಹಿಂಬದಿಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತೀರ್ಥಹಳ್ಳಿ ಕಡೆಯಲ್ಲೂ ದೊಡ್ಡ ಸಂಖ್ಯೆಯ ವಾಹನಗಳು ನಿಂತಿವೆ. ಸೋಮೇಶ್ವರದಲ್ಲಿ ಘಾಟಿಯ ಪ್ರವೇಶದಲ್ಲಿ ಪೊಲೀಸರು ವಾಹನಗಳನ್ನು ತಡೆ ಹಿಡಿದಿದ್ದಾರೆ. ಒಮ್ಮೆಗೆ ಕೆಲವು ವಾಹನಗಳನ್ನು ಘಾಟಿಯ ಮೇಲೆ ಬಿಡಲಾಗುತ್ತಿದೆ.

Similar News