2017-2021 ನಡುವೆ 6,677 ಎನ್‍ಜಿಒಗಳ ವಿದೇಶಿ ದೇಣಿಗೆ ರದ್ದುಗೊಳಿಸಿದ ಕೇಂದ್ರ : ಸಂಸತ್ತಿಗೆ ಮಾಹಿತಿ

Update: 2022-12-08 11:13 GMT

ಹೊಸದಿಲ್ಲಿ: ಕೇಂದ್ರ ಸರ್ಕಾರ 2017 ಹಾಗೂ 2021 ನಡುವೆ 6,677 ಎನ್‍ಜಿಒಗಳ (NGO) ವಿದೇಶಿ ದೇಣಿಗೆ ಪಡೆಯುವ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.

ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾದ ದಿಗ್ವಿಜಯ್ ಸಿಂಗ್ ಮತ್ತು ಅಮೀ ಯಜ್ಞಿಕ್ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದರು.

ವಿದೇಶಿ ದೇಣಿಗೆ ಪಡೆಯುವ ಪರವಾನಗಿ ರದ್ದುಗೊಂಡ ಗರಿಷ್ಠ, ಅಂದರೆ 755 ಎನ್‍ಜಿಒಗಳು ತಮಿಳುನಾಡು ರಾಜ್ಯದ ಸಂಸ್ಥೆಗಳಾಗಿದ್ದರೆ,  ಮಹಾರಾಷ್ಟ್ರದ 734 ಎನ್‍ಜಿಒಗಳು, ಉತ್ತರ ಪ್ರದೇಶದ 635 ಎನ್‍ಜಿಒಗಳು, ಆಂಧ್ರಪ್ರದೇಶದ 622 ಮತ್ತು ಪಶ್ಚಿಮ ಬಂಗಾಳದ 611 ಎನ್‍ಜಿಒಗಳು ಈ ಪಟ್ಟಿಯಲ್ಲಿ ಸೇರಿವೆ.

ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದ ಎರಡು ಎನ್‍ಜಿಒಗಳ ವಿದೇಶಿ ದೇಣಿಗೆ ಪಡೆಯುವ ಪರವಾನಗಿ ರದ್ದತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಸಂಸ್ಥೆಗಳು ವಿದೇಶಿ ದೇಣಿಗೆ(ನಿಯಂತ್ರಣ) ಕಾಯಿದೆ ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದರು.

ರಾಜೀವ್ ಗಾಂಧಿ ಫೌಂಡೇಶನ್ ಹಾಗೂ ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇವುಗಳ ಪರವಾನಗಿಯನ್ನು ಕೇಂದ್ರ ಸರ್ಕಾರ ಅಕ್ಟೋಬರ್ ತಿಂಗಳಿನಲ್ಲಿ ರದ್ದುಗೊಳಿಸಿತ್ತು.

Similar News