ಗಡಿ ವಿವಾದ: ಚುನಾವಣೆಯ ಸನಿಹದಲ್ಲಿ ರಾಜಕೀಯ ಗೊಂದಲ

Update: 2022-12-09 06:07 GMT

ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿನ ಬಿಜೆಪಿ ಸರಕಾರಗಳು ಪರಸ್ಪರ ವಿರುದ್ಧವಾಗಿ ನಿಂತಿವೆ. ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಮಹಾರಾಷ್ಟ್ರದ ವಾದವನ್ನು ವಿರೋಧಿಸುತ್ತವೆ. ಅತ್ತ ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕವು ಬೆಳಗಾವಿಯು ಮಹಾರಾಷ್ಟ್ರದೊಂದಿಗೆ ಏಕೀಕರಣವಾಗಬೇಕೆಂಬ ವಾದವನ್ನು ಬೆಂಬಲಿಸುತ್ತದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಾಗ ಉಂಟಾಗಿರುವ ಈ ಗೊಂದಲವು ಕುತೂಹಲ ಕೆರಳಿಸಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ಗದ್ದಲ ತಾರಕಕ್ಕೇರುತ್ತಿದೆ. ಕರ್ನಾಟಕದ ಗಡಿ ಪಟ್ಟಣವಾದ ಬೆಳಗಾವಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಪ್ರಯತ್ನಿಸುತ್ತಿರುವ ಮಹಾರಾಷ್ಟ್ರ ಈಗ ಮತ್ತೆ ವಿವಾದ ಭುಗಿಲೇಳುವುದಕ್ಕೆ ಕಾರಣವಾಗಿದೆ. ಎರಡೂ ರಾಜ್ಯಗಳ ಗಡಿಯಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಉಂಟಾಗಿದೆ.

ಎಲ್ಲವೂ ಶುರುವಾಗಿದ್ದು ಮಹಾರಾಷ್ಟ್ರ ನಾಯಕರು ಕರ್ನಾಟಕದೊಳಗಿನ ನೆಲದ ಮೇಲೆ ಹಕ್ಕು ಸಾಧಿಸುವ ಮಾತನ್ನು ಮತ್ತೆ ಅಡಿದ್ದರೊಂದಿಗೆ. ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳು, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮರಾಠಿ ಭಾಷಿಕರು ಇರುವ ಹಿನ್ನೆಲೆಯಲ್ಲಿ ಅದು ತನಗೆ ಸೇರಬೇಕಿರುವುದೆಂದು ಮಹಾರಾಷ್ಟ್ರ ಹೇಳುತ್ತಲೇ ಬಂದಿದೆ. ಆದರೆ ಇತ್ತೀಚೆಗೆ ಮಹಾರಾಷ್ಟ್ರ ಸಿಎಂ ಶಿಂದೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಮೊದಲಾದವರು ಮಹಾರಾಷ್ಟ್ರದ ಒಂದೇ ಒಂದು ಹಳ್ಳಿಯೂ ಕರ್ನಾಟಕಕ್ಕೆ ಹೋಗಲು ಬಿಡುವುದಿಲ್ಲ ಎಂದು ವಿವಾದವೆಬ್ಬಿಸಿದರು. ಇದೇ ಹೊತ್ತಲ್ಲಿ ಗಡಿ ವಿವಾದ ಕುರಿತ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಬರಲಿದ್ದ ಹಿನ್ನೆಲೆಯಲ್ಲಿ ತ್ವೇಷಮಯ ವಾತಾವರಣ ಏರ್ಪಟ್ಟಿತು.

ಅಂತರ್‌ರಾಜ್ಯ ಗಡಿಯ ಸಮೀಪವಿರುವ ಮಹಾರಾಷ್ಟ್ರದ ಜಾಟ್ ತೆಹಸಿಲ್‌ನ ಪಂಚಾಯತ್‌ಗಳು ಈ ಹಿಂದೆ ಕರ್ನಾಟಕದೊಂದಿಗೆ ವಿಲೀನಗೊಳ್ಳಲು ನಿರ್ಣಯವನ್ನು ಅಂಗೀಕರಿಸಿದ್ದು, ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತಿಗೆ ಪ್ರತಿಕ್ರಿಯಿಸಿದ ಫಡ್ನವೀಸ್, ಬೆಳಗಾವಿ-ಕಾರವಾರ-ನಿಪ್ಪಾಣಿ ಸೇರಿದಂತೆ ಮರಾಠಿ ಭಾಷಿಕ ಗ್ರಾಮಗಳನ್ನು ಪಡೆಯಲು ಮಹಾರಾಷ್ಟ್ರ ಹೋರಾಟ ನಡೆಸಲಿದೆ ಎಂದರು. ಗಡಿ ವಿಚಾರವನ್ನು ಮಹಾರಾಷ್ಟ್ರದ ಎಲ್ಲ ಪಕ್ಷಗಳು ರಾಜಕೀಯಗೊಳಿಸುತ್ತವೆ, ಆದರೆ ಅವರೆಂದೂ ಇದರಲ್ಲಿ ಯಶಸ್ವಿಯಾಗಲಾರರು ಎಂದು ಬೊಮ್ಮಾಯಿ ಹೇಳಿದರು.

ಇದರ ನಡುವೆಯೇ, ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರುಗಳಾದ ಶಂಭುರಾಜ್ ದೇಸಾಯಿ ಮತ್ತು ಚಂದ್ರಕಾಂತ್ ಪಾಟೀಲ್ ಕರ್ನಾಟಕಕ್ಕೆ ಬರುವುದಾಗಿ ಹೇಳಿದ್ದು ಆತಂಕಕ್ಕೆ ಎಡೆ ಮಾಡಿಕೊಟ್ಟಿತು. ತಮ್ಮ ರಾಜ್ಯಕ್ಕೆ ಸೇರಬೇಕಾದವೆಂದು ಅವರು ಹೇಳುವ ಗ್ರಾಮಗಳಿಗೆ ಭೇಟಿ ನೀಡಿ, ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರನ್ನು ಕಾಣಲು ಮತ್ತು ಜೂನ್ ೧೯೮೬ರಲ್ಲಿ ಅಲ್ಲಿನ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿ ಮಾಡಬೇಕೆಂದು ಪ್ರತಿಭಟಿಸುತ್ತಿರುವಾಗ ಪೊಲೀಸರ ಗುಂಡಿಗೆ ಬಲಿಯಾದವರ ಕುಟುಂಬದವರನ್ನು ಮಾತನಾಡಿಸಲು ಅವರು ಉದ್ದೇಶಿಸಿದ್ದು ಉದ್ವಿಗ್ನತೆಗೆ ಎಡೆ ಮಾಡಿಕೊಡುವಂತಿತ್ತು. ಮಹಾರಾಷ್ಟ್ರ ಏಕೀಕರಣ ಸಮಿತಿಯು ಮರಾಠಿ ಪರವಾದ ಸಾಮಾಜಿಕ-ರಾಜಕೀಯ ಸಂಘಟನೆ. ೮೬೦ಕ್ಕೂ ಹೆಚ್ಚು ಮರಾಠಿ ಭಾಷಿಕ ಹಳ್ಳಿಗಳನ್ನು ಆಗಿನ ಪ್ರಸ್ತಾವಿತ ಸಂಯುಕ್ತ ಮಹಾರಾಷ್ಟ್ರ ರಾಜ್ಯದಲ್ಲಿ ವಿಲೀನಗೊಳಿಸಲು ೧೯೪೮ರಲ್ಲಿ ಸ್ಥಾಪಿಸಲಾಯಿತು.

ಮಹಾರಾಷ್ಟ್ರ ಸಚಿವರ ಭೇಟಿ ವಿಚಾರದಲ್ಲಿ ಉಂಟಾದ ಉದ್ವಿಗ್ನತೆ ಹಿಂಸಾಚಾರಕ್ಕೂ ಕಾರಣವಾಯಿತು. ಡಿಸೆಂಬರ್ ೧ರಂದು ಖಾಸಗಿ ಕಾಲೇಜು ಉತ್ಸವದಲ್ಲಿ ಕರ್ನಾಟಕ ರಾಜ್ಯ ಧ್ವಜ ಪ್ರದರ್ಶಿಸಿದ್ದಕ್ಕಾಗಿ ವಿದ್ಯಾರ್ಥಿಗೆ ಥಳಿಸಿದ ಆರೋಪದ ವಿರುದ್ಧ ಕನ್ನಡ ಪರ ಸಂಘಟನೆಗಳು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದವು. ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ರಾಷ್ಟ್ರವಾದಿ ಸಂಘಟನೆಯ ಕಾರ್ಯಕರ್ತರು ಬೆಳಗಾವಿ ಬಳಿ ಮಹಾರಾಷ್ಟ್ರದಿಂದ ಬಂದ ಬಸ್‌ಗಳು ಮತ್ತು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ದೇಸಾಯಿ ಮತ್ತು ಪಾಟೀಲ್ ಅವರ ಯೋಜಿತ ಭೇಟಿಯನ್ನು ವಿರೋಧಿಸುವ ಉದ್ದೇಶದಿಂದ ಈ ಪ್ರದರ್ಶನಗಳು ನಡೆದವು. ಮಹಾರಾಷ್ಟ್ರದಲ್ಲಿ ನೋಂದಣಿಯಾದ ವಾಹನಗಳ ಮೇಲಿನ ದಾಳಿಗೆ ಪ್ರತೀಕಾರವಾಗಿ, ಮಹಾರಾಷ್ಟ್ರದ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಪುಣೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ ಮಸಿ ಬಳಿದರು.ಇದರ ನಡುವೆ ರಾಜ್ಯಕ್ಕೆ ತನ್ನ ಬಸ್ ಸೇವೆಯನ್ನೂ ಮಹಾರಾಷ್ಟ್ರ ಸ್ಥಗಿತಗೊಳಿಸಿತು. ಕಡೆಗೂ ಬೊಮ್ಮಾಯಿಯವರ ಒತ್ತಡಕ್ಕೆ ಮಣಿದ ಮಹಾರಾಷ್ಟ್ರ ಸಚಿವರುಗಳು ತಮ್ಮ ಭೇಟಿಯನ್ನು ರದ್ದುಗೊಳಿಸಿದರು. ಇದೆಲ್ಲದರ ನಡುವೆ ಮಹಾರಾಷ್ಟ್ರ ನಾಯಕರು ಸುಮ್ಮನಿಲ್ಲ. ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಶರದ್ ಪವಾರ್ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಸಂಸತ್ ಚಳಿಗಾಲದ ಅಧಿವೇಶನದಲ್ಲಿಯೂ ಮಹಾರಾಷ್ಟ್ರ ಸಂಸದರು ಗಡಿವಿವಾದ ವಿಚಾರವನ್ನು ಎತ್ತಿದ್ದು, ಕೇಂದ್ರ ಗೃಹ ಸಚಿವರ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಎರಡೂ ರಾಜ್ಯಗಳ ನಡುವಿನ ಗಡಿ ವಿವಾದ ಆರು ದಶಕಗಳಷ್ಟು ಹಳೆಯದು. ತನ್ನ ಭಾಗವಾಗಬೇಕಿದ್ದ ಹಲವಾರು ಮರಾಠಿ ಭಾಷಿಕ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಲಾಗಿದೆ ಎಂಬುದು ಮಹಾರಾಷ್ಟ್ರದ ವಾದ. ಬೆಳಗಾವಿ ಮತ್ತು ಕಾರವಾರ ಮತ್ತು ನಿಪ್ಪಾಣಿ ಮೊದಲಾದ ಗಡಿ ಪ್ರದೇಶಗಳ ನೂರಾರು ಹಳ್ಳಿಗಳ ವಿಚಾರದಲ್ಲಿ ಮಹಾರಾಷ್ಟ್ರ ತಗಾದೆ ತೆಗೆಯಿತು. ಆದರೆ ಆ ಪ್ರದೇಶಗಳನ್ನು ಬಿಟ್ಟುಕೊಡಲು ಕರ್ನಾಟಕ ನಿರಾಕರಿಸಿತು. ಮಹಾರಾಷ್ಟ್ರದ ಒತ್ತಾಯದ ಮೇರೆಗೆ, ಕೇಂದ್ರ ಸರಕಾರವು ೧೯೬೬ರಲ್ಲಿ ಮಹಾಜನ್ ಆಯೋಗವನ್ನು ರಚಿಸಿತು. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ನೇತೃತ್ವದ ಆಯೋಗವು ಬೆಳಗಾವಿ ಕರ್ನಾಟಕದಲ್ಲಿ ಉಳಿಯಬೇಕೆಂದು ಶಿಫಾರಸು ಮಾಡಿತು. ಮಹಾರಾಷ್ಟ್ರ ಸರಕಾರವು ಆಯೋಗದ ವರದಿಯನ್ನು ತಿರಸ್ಕರಿಸಿತು ಮತ್ತು ಬೆಳಗಾವಿಯ ಏಕೀಕರಣದ ಬೇಡಿಕೆಯನ್ನು ಮುಂದುವರಿಸಿತು. ಕರ್ನಾಟಕ ಸರಕಾರವು ಮಹಾಜನ್ ಆಯೋಗದ ವರದಿಯನ್ನು ಒಪ್ಪಿತು.

ನಂತರದ ದಶಕಗಳಲ್ಲಿ, ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿ ಜಿಲ್ಲೆ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದುತ್ತ ಬಂದಿದೆ. ಇದರೊಂದಿಗೆ ಈ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಅಭಿಯಾನವನ್ನು ಅದು ಜೀವಂತವಾಗಿರಿಸಿದೆ. ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆಯಂತಹ ಸಂಘಟನೆಗಳು ಯಥಾಸ್ಥಿತಿ ಕಾಯ್ದುಕೊಳ್ಳಲು ಒತ್ತಾಯಿಸುತ್ತಿವೆ. ಬೆಳಗಾವಿಯಲ್ಲಿ ಕನ್ನಡ ಮಾತನಾಡುವವರು ಹೆಚ್ಚಿದ್ದಾರೆ ಎಂಬುದು ಕನ್ನಡ ಸಂಘಟನೆಗಳ ಪ್ರತಿಪಾದನೆ. ಈ ನಡುವೆ ಮಹಾರಾಷ್ಟ್ರ ಸರಕಾರವು ೨೦೦೪ರಲ್ಲಿ ಸಲ್ಲಿಸಿರುವ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿಯಿದೆ.

ಬೆಳಗಾವಿ ವಿವಾದವು ಎರಡೂ ರಾಜ್ಯಗಳಲ್ಲಿ ಒಂದು ಭಾವನಾತ್ಮಕ ವಿಷಯವಾಗಿದೆ. ರಾಜಕೀಯ ಪಕ್ಷಗಳು ಈ ವಿವಾದವನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವುದು ಕೂಡ ನಡೆದುಬಂದಿದೆ. ಮಹಾರಾಷ್ಟ್ರದ ಎಲ್ಲಾ ರಾಜಕೀಯ ಪಕ್ಷಗಳು, ತಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಬೇಕೆಂಬ ವಿಚಾರದಲ್ಲಿ ಒಗ್ಗಟ್ಟಾಗುತ್ತವೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ ನಾಯಕ ದೀಪಕ್ ದಳವಿ ಬೆಳಗಾವಿಯನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸಿರುವುದು ಮರಾಠಿ ಜನರಿಗೆ ಮಾಡಲಾದ ಗಂಭೀರ ಅನ್ಯಾಯ ಎಂದು ಕರ್ನಾಟಕದ ೨೦೧೮ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದರು. ಕರ್ನಾಟಕದಲ್ಲಿಯೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಬೆಳಗಾವಿಯ ವಿಚಾರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಮತ್ತು ಉಳಿಸಿಕೊಳ್ಳಲು ಬಯಸುತ್ತವೆ. ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಎಂದು ಪರಿಗಣಿಸುವಷ್ಟರ ಮಟ್ಟಿಗೆ ಬೆಳಗಾವಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ದೃಢವಾಗಿದೆ.

ವಿವಾದವು ಭಾಷಾ ಆಧಾರದ ಮೇಲೆ ಇದ್ದರೂ, ಅದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಬೆಳಗಾವಿಯಲ್ಲಿ ಮರಾಠಿ ಪ್ರಬಲ ಭಾಷೆ ಎಂದು ಮಹಾರಾಷ್ಟ್ರ ಸರಕಾರ ಹೇಳಿಕೊಂಡರೆ, ಕರ್ನಾಟಕ ಸರಕಾರ ಅಲ್ಲಿ ಕನ್ನಡವೇ ಹೆಚ್ಚು ಮಾತನಾಡುವ ಭಾಷೆ ಎನ್ನುತ್ತಿದೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವ ಪರವಾಗಿ ರಾಜಕಾರಣಿಗಳು ೧೯೪೦ ಮತ್ತು ೧೯೫೦ರ ದಶಕಗಳಲ್ಲಿ ಭಾರತ ಸ್ವತಂತ್ರವಾದಾಗ ಮತ್ತು ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನು ಮರುವಿಂಗಡಿಸಿದಾಗ, ಮರಾಠಿ ಮಾತನಾಡುವ ಜನರು ಅಲ್ಲಿ ಕನ್ನಡ ಮಾತನಾಡುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದ್ದರು.

ಗಡಿ ವಿವಾದದ ಸುತ್ತಲಿನ ಉದ್ವಿಗ್ನತೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ರಾಜಕೀಯ ಗೊಂದಲವನ್ನುಂಟು ಮಾಡಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿನ ಬಿಜೆಪಿ ಸರಕಾರಗಳು ಪರಸ್ಪರ ವಿರುದ್ಧವಾಗಿ ನಿಂತಿವೆ. ಕರ್ನಾಟಕದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಮಹಾರಾಷ್ಟ್ರದ ವಾದವನ್ನು ವಿರೋಧಿಸುತ್ತವೆ. ಅತ್ತ ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕವು ಬೆಳಗಾವಿಯು ಮಹಾರಾಷ್ಟ್ರದೊಂದಿಗೆ ಏಕೀಕರಣವಾಗಬೇಕೆಂಬ ವಾದವನ್ನು ಬೆಂಬಲಿಸುತ್ತದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಾಗ ಉಂಟಾಗಿರುವ ಈ ಗೊಂದಲವು ಕುತೂಹಲ ಕೆರಳಿಸಿದೆ.

Similar News