ದತ್ತಜಯಂತಿ ಮುಗಿದರೂ ಅರ್ಚಕರಿಂದ ಪೂಜೆ ಮುಂದುವರಿಕೆ: ಆರೋಪ

ಅರ್ಚಕರು, ವ್ಯವಸ್ಥಾಪನಾ ಸಮಿತಿ ಸದಸ್ಯರಿಗೆ ಗನ್ ಮ್ಯಾನ್

Update: 2022-12-11 17:04 GMT

ಚಿಕ್ಕಮಗಳೂರು, ಡಿ.11: ಗುರುದತ್ತಾತ್ರೇಯ ಸ್ವಾಮಿ ಬಾಬಾ ಬುಡಾನ್ ದರ್ಗಾ ಹಾಗೂ ದತ್ತಪೀಠಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಇತ್ತೀಚೆಗೆ ಇಬ್ಬರು ಅರ್ಚಕರನ್ನು ನೇಮಿಸಿ ಮೂರು ದಿನಗಳವರೆಗೆ ಪೂಜಾ ವಿಧಾನಗಳನ್ನು ಕೈಗೊಳ್ಳಲು ಆದೇಶ ಹೊರಡಿತ್ತು. ಆದರೆ ದತ್ತಜಯಂತಿ ಪೂರ್ಣಗೊಂಡರೂ ತಾತ್ಕಾಲಿಕವಾಗಿ ನೇಮಕಗೊಂಡ ಅರ್ಚಕರು ಸ್ಥಳದಲ್ಲೇ ವಾಸ್ತವ್ಯ ಹೂಡಿರುವುದಲ್ಲದೇ ಪ್ರತಿದಿನ ತ್ರಿಕಾಲ ಪೂಜೆ ಸಲ್ಲಿಸುತ್ತಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ಗುರುದತ್ತಾತ್ರೇಯ ಸ್ವಾಮಿ ಬಾಬಾ ಬುಡಾನ್ ದರ್ಗಾ ಹಾಗೂ ದತ್ತಪೀಠ ವಿವಾದ ಸಂಬಂಧ ರಾಜ್ಯ ಸರಕಾರ ಇತ್ತೀಚೆಗೆ ನ್ಯಾಯಾಲಯದ ಆದೇಶದ ಮೇರೆಗೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿ 8 ಮಂದಿ ಸದಸ್ಯರನ್ನು ನೇಮಕ ಮಾಡಿದೆ. ಈ ಸಮಿತಿಯ ಮೇಲ್ವಿಚಾರಣೆಯಲ್ಲಿ ದತ್ತಜಯಂತಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ಅರ್ಚಕರು ಗುಹೆಯ ಹೊರ ಭಾಗದಲ್ಲಿ ಪೂಜಾವಿಧಾನಗಳನ್ನು ನಡೆಸಬೇಕೆಂದು ಸರಕಾರದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದರು. ಆದರೆ ಇತ್ತೀಚೆಗೆ ನಡೆದ ದತ್ತಜಯಂತಿ ಸಂದರ್ಭ ಡಿ.8ರಂದು ಗುರುದತ್ತಾತ್ರೇಯ ಸ್ವಾಮಿ ಬಾಬಾ ಬುಡಾನ್ ದರ್ಗಾ ಹಾಗೂ ದತ್ತಪೀಠದ ಆವರಣದಲ್ಲಿರುವ ಗುಹೆಯೊಳಗೆ ಅರ್ಚಕರು ಪೂಜೆ ಸಲ್ಲಿಸಿರುವ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಈ ವಿಚಾರವಾಗಿ ಕೆಲ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರೊಂದಿಗೆ ಚರ್ಚಿಸಿದ್ದು, ಈ ವೇಳೆ ಜಿಲ್ಲಾಧಿಕಾರಿ, ನನ್ನದು ಪೋಸ್ಟ್ ಮ್ಯಾನ್ ಕೆಲಸ, ವ್ಯವಸ್ಥಾಪನ ಸಮಿತಿಗೂ ತನಗೂ ಸಂಬಂಧವಿಲ್ಲ. ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ವ್ಯವಸ್ಥಾಪನ ಸಮಿತಿ ಸದಸ್ಯರು ಅಲ್ಲಿನ ಪೂಜಾ ವಿಧಾನಗಳನ್ನು ನೆರವೇರಿಸುತ್ತಿದ್ದಾರೆ. ಗುಹೆಯೊಳಗೆ ಸರಕಾರದಿಂದ ನೇಮಕವಾದ ಅರ್ಚಕರ ಹೊರತಾಗಿ ಬೇರೆಯವರು ಪೂಜೆ ಮಾಡಿರುವ ಬಗ್ಗೆಯೂ ತನಗೆ ಮಾಹಿತಿ ಇಲ್ಲ ಎಂದು ಹೇಳಿರುವುದಾಗಿ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಸರಕಾರ ಅರ್ಚಕರನ್ನು ಮೂರು ದಿನಗಳ ಪೂಜೆಗಾಗಿ ಮಾತ್ರ ನೇಮಿಸಿದ್ದು, ದತ್ತಜಯಂತಿ ಮುಗಿದ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ತೆರಳಬೇಕಿತ್ತು. ಆದರೆ ದತ್ತಜಯಂತಿ ಪೂರ್ಣಗೊಂಡು ಮೂರು ದಿನ ಕಳೆದರೂ ಸರಕಾರ ವ್ಯವಸ್ಥಾಪನ ಸಮಿತಿ ಪ್ರಸ್ತಾವದ ಮೇರೆಗೆ ನೇಮಿಸಿರುವ ಅರ್ಚಕರು ಸ್ಥಳದಿಂದ ಕದಲಿಲ್ಲ. ವ್ಯವಸ್ಥಾಪನ ಸಮಿತಿಯವರು ಅರ್ಚಕರಿಂದ ನಿತ್ಯ ಪೂಜೆಗೆ ಅವಕಾಶ ನೀಡಿದ್ದಾರೆ. ಇದೇ ವೇಳೆ ಮುಝಾವರ್ ಗಳಿಂದ ಪೂಜೆಗೆ ಅವಕಾಶ ನೀಡಿದರೇ ಮೈಲಿಗೆ ಆಗುತ್ತದೆ ಎಂದು ಪೂಜೆಗೂ ಅವಕಾಶ ನೀಡುತ್ತಿಲ್ಲ' ಎಂದು ಕೆಲ ಸಂಘಟನೆಗಳು ಆರೋಪಿಸಿವೆ.

ಸದ್ಯ ಸರಕಾರದಿಂದ ನೇಮಕವಾಗಿರುವ ಇಬ್ಬರು ಅರ್ಚಕರು ಸ್ಥಳದಲ್ಲಿಯೇ ವಾಸ್ತವ್ಯ ಹೂಡಿದ್ದು, ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಮತ್ತೊಂದೆಡೆ ಮುಝಾವರ್ ಅವರಿಗೂ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹೇಮಂತ್ ವಾರ್ತಾಭಾರತಿಗೆ ತಿಳಿಸಿದ್ದು, ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಅರ್ಚಕರನ್ನು ನಿತ್ಯ ಪೂಜೆ ಸಲ್ಲಿಸಲು ಮುಂದುವರಿಸುವ ಅಧಿಕಾರ ವ್ಯವಸ್ಥಾಪನ ಸಮತಿಗೆ ಇದೆಯೇ? ಎಂಬ ಪ್ರಶ್ನೆ ಪ್ರಗತಿಪರ ಸಂಘಟನೆಗಳದ್ದಾಗಿದ್ದು, ಇದು ಜಿಲ್ಲೆಯಲ್ಲಿನ ಸೌಹಾರ್ದವನ್ನು ಹಾಳುಗೆಡವಲು ಬಿಜೆಪಿ, ಸಂಘಪರಿವಾರ ಮಾಡಿರುವ ಹುನ್ನಾರ ಎಂದು ಆರೋಪಿಸಲಾಗುತ್ತಿದೆ.

ಅರ್ಚಕರು, ವ್ಯವಸ್ಥಾಪನಾ ಸಮಿತಿ ಸದಸ್ಯರಿಗೆ ಗನ್ ಮ್ಯಾನ್: ಹಿಂದೂ ಅರ್ಚಕರನ್ನು ನಿತ್ಯ ಪೂಜೆಗೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅರ್ಚಕರಿಗೆ ಗನ್ ಮ್ಯಾನ್‍ಗಳನ್ನು ಒದಗಿಸಿದೆ. ಅಲ್ಲದೇ ವ್ಯವಸ್ಥಾಪನ ಸಮಿತಿಯ ಸತೀಶ್ ಹಾಗೂ ಬಾಷ ಎಂಬವರಿಗೂ ಗನ್ ಮ್ಯಾನ್ ನೀಡಲಾಗಿದೆ. ಈ ಪೈಕಿ ಅಲ್ಪಸಂಖ್ಯಾತ ಸಮುದಾಯದವರಾಗಿರುವ ಬಾಷ ಅವರ ಮನೆಗೆ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿದೆ. ಒಟ್ಟಾರೆ ವಿವಾದಿತ ಕೇಂದ್ರವಾಗಿದ್ದ ಗುರುದತ್ತಾತ್ರೇಯ ಸ್ವಾಮಿ ಬಾಬಾ ಬುಡನ್ ದರ್ಗಾ ಹಾಗೂ ದತ್ತಪೀಠದ ವಿಚಾರದಲ್ಲಿ ಮತ್ತೊಂದು ವಿವಾದ ಸೃಷ್ಟಿಯಾದಂತಾಗಿದ್ದು, ಚುನಾವಣೆ ಸಂದರ್ಭವೇ ಈ ವಿವಾದ ಮತ್ತಷ್ಟು ಕಾವು ಪಡೆಯುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

''ದತ್ತಪೀಠಕ್ಕೆ ಖಾಯಂ ಅರ್ಚಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಖಾಯಂ ಅರ್ಚಕರ ನೇಮಕವಾಗುವ ತನಕ ದತ್ತಪೀಠದಲ್ಲಿ ಪೂಜೆ ನಿಲ್ಲಿಸಬಾರದೆಂಬ ಉದ್ದೇಶದಿಂದ ವ್ಯವಸ್ಥಾಪನ ಸಮಿತಿ ತಾತ್ಕಾಲಿಕ ಅರ್ಚಕರಿಂದಲೇ ನಿತ್ಯ ಪೂಜೆ ಸಲ್ಲಿಸಲು ನಿರ್ಣಯಕೈಗೊಂಡಿದೆ. ಈ ಅಧಿಕಾರ ವ್ಯವಸ್ಥಾಪನ ಸಮಿತಿಗಿದೆ. ಅರ್ಚಕರಂತೆ ಮುಝಾವರ್ ಗಳಿಂದಲೂ ಪೂಜೆಗೆ ಅವಕಾಶ ನೀಡಲಾಗಿದೆ. ಎಲ್ಲವೂ ಸರಕಾರ ಹಾಗೂ ನ್ಯಾಯಾಲಯದ ಆದೇಶದಂತೆಯೇ ಕ್ರಮ ವಹಿಸಲಾಗಿದೆ. ದತ್ತಜಯಂತಿ ವೇಳೆ ಪೂಜೆಯನ್ನು ಗುಹೆಯೊಳಗೆ ಮಾಡಲಾಗಿದೆ. ಪಾದುಕೆ ಎಲ್ಲಿರುತ್ತೋ ಅಲ್ಲೇ ಪೂಜೆ ಮಾಡಲಾಗಿದೆ. ಇಬ್ಬರು ಅರ್ಚಕರಲ್ಲದೇ ಬೇರೆ ಅರ್ಚಕರಿಂದ ಪೂಜೆ ಸಲ್ಲಿಸಿಲ್ಲ. ಕೆಲವರು ಅರ್ಚಕರಿಗೆ ಸೇವಕರಾಗಿ ಕೆಲಸ ಮಾಡಿದ್ದಾರೆ. ಕ್ರಿಮಿನಲ್ ಹಿನ್ನೆಲೆಯವರು ಪೂಜೆ ಮಾಡಿದ್ದಾರೆಂಬ ಬಗ್ಗೆ ಮಾಹಿತಿ ಇಲ್ಲ''

 - ಹೇಮಂತ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ

----------------------------------------------------

''ದತ್ತಜಯಂತಿ ಸಂದರ್ಭದಲ್ಲಿ ಸರಕಾರ ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪೂಜೆ ಸಲ್ಲಿಸಲಾಗಿದೆ. ಗುಹೆಯ ಹೊರ ಭಾಗದಲ್ಲಿ ಪೂಜೆ ಸಲ್ಲಿಸಲು ಸರಕಾರ ಅವಕಾಶ ನೀಡಿದ್ದರೇ, ಗುಹೆಯೊಳಗೆ ಪೂಜೆ ಸಲ್ಲಿಸಲಾಗಿದೆ. ಅರ್ಚಕರಲ್ಲದವರು, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳಿಂದಲೂ ಪೂಜೆ ಸಲ್ಲಿಸಲಾಗಿದೆ. ವ್ಯವಸ್ಥಾಪನ ಸಮಿತಿಗೂ ತನಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ಗುರುದತ್ತಾತ್ರೇಯ ಸ್ವಾಮಿ ಬಾಬಾ ಬುಡಾನ್ ದರ್ಗಾವನ್ನು ಮತ್ತೊಂದು ಅಯೋಧ್ಯೆಯನ್ನಾಗಿಸುವ ಹುನ್ನಾರವಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುವುದು.''

 - ಗೌಸ್ ಮೊಹಿದ್ದೀನ್, ಕೋಮುಸೌಹಾರ್ದ ವೇದಿಕೆ ಸಂಚಾಲಕ

Full View

Similar News