ಶೀಘ್ರದಲ್ಲೇ ಕಾಂಗ್ರೆಸ್ ನ 10 ಮಂದಿ ಶಾಸಕರು ಬಿಜೆಪಿಗೆ: ಸಚಿವ ಆರ್. ಅಶೋಕ್

Update: 2022-12-12 14:11 GMT

ಬೆಂಗಳೂರು, ಡಿ. 12: ಹತ್ತು ಮಂದಿ ಕಾಂಗ್ರೆಸ್ ಪಕ್ಷದ ಶಾಸಕರು ಶೀಘ್ರದಲ್ಲೆ ಬಿಜೆಪಿಗೆ ಬರಲಿದ್ದು, ಅವರು ನಮ್ಮ ಪಕ್ಷಕ್ಕೆ ಬಂದ ಬಳಿಕ ಅವರು ಯಾರು ಎಂಬುದು ಎಲ್ಲರಿಗೂ ಗೊತ್ತಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಮುಖಂಡರ ನಡುವಿನ ಆಂತರೀಕ ಜಗಳ ಬೀದಿಗೆ ಬಂದಿದ್ದು, ಅದನ್ನು ಇತ್ಯರ್ಥಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಎಲ್ಲರನ್ನು ದಿಲ್ಲಿಗೆ ಕರೆಸಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಚುನಾವಣೆಗೆ ಮೊದಲೇ ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಲಿದ್ದು, ಎಚ್ಚರಿಕೆಯಿಂದ ಇರಿ ಎಂದು ಖರ್ಗೆ ರಾಜ್ಯದ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಆದರೆ, ಕಾಂಗ್ರೆಸಿಗರಿಗೆ ಈಗಾಗಲೇ ಸೋಲಿನ ಭೀತಿ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಕಾಂಗ್ರೆಸ್ ಮೂಲೆ ಗುಂಪಾಗಿದ್ದು, ಅಧಿಕಾರದಲ್ಲಿದ್ದ ಆ ಪಕ್ಷ ಕಳೆದ ಚುನಾವಣೆಯಲ್ಲಿ 77 ಸ್ಥಾನಕ್ಕೆ ಕುಸಿಯಿತು. ಹದಿನೈದು ಮಂದಿ ಶಾಸಕರು ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾದರು. ತಮ್ಮ ಶಾಸಕರನ್ನೇ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ. ಹೀಗಿರುವಾಗ ಅವರು ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣಬೇಕಷ್ಟೇ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

Similar News