ಹೊಸ ಜಾಗತಿಕ ದಾಖಲೆ ಸೃಷ್ಟಿಸಿದ ಬಂಧಿತ ಪತ್ರಕರ್ತರ ಸಂಖ್ಯೆ; ಭಾರತದಲ್ಲಿ ಬಂಧಿತ ಪತ್ರಕರ್ತರೆಷ್ಟು?

Update: 2022-12-15 18:19 GMT

ಹೊಸದಿಲ್ಲಿ: ವಿಶ್ವಾದ್ಯಂತ ಜೈಲುಗಳಲ್ಲಿ ಕೊಳೆಯುತ್ತಿರುವ ಪತ್ರಕರ್ತರ ಸಂಖ್ಯೆ ಈ ವರ್ಷ ದಾಖಲೆಯ ಎತ್ತರವನ್ನು ತಲುಪಿದೆ. ಭಾರತದಲ್ಲಿ ಏಳು ಪತ್ರಕರ್ತರು ಬಂಧನದಲ್ಲಿದ್ದು, ಇದು ದೇಶದ ಪಾಲಿಗೆ ದಾಖಲೆಯಾಗಿದೆ ಎಂದು ಪತ್ರಕರ್ತರ ಹಕ್ಕುಗಳ ರಕ್ಷಣೆಗಾಗಿರುವ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (CPJ) ಹೇಳಿದೆ. 

ತನ್ನ ವಾರ್ಷಿಕ ಜೈಲು ಗಣತಿ ವರದಿಯನ್ನು ಬುಧವಾರ ಬಿಡುಗಡೆಗೊಳಿಸಿರುವ ಸಿಪಿಜೆ, 2022, ಡಿ.1ಕ್ಕೆ ಇದ್ದಂತೆ ವಿಶ್ವಾದ್ಯಂತ 363 ಮಾಧ್ಯಮ ವರದಿಗಾರರು ತಮ್ಮ ಸ್ವಾತಂತ್ರ್ಯದಿಂದ ವಂಚಿತರಾಗಿದ್ದಾರೆ. ಇದು ಹೊಸ ಜಾಗತಿಕ ದಾಖಲೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಅಧಿಕವಾಗಿದೆ ಎಂದಿರುವ ಸಿಪಿಜೆ, ಇದು ಹದಗೆಡುತ್ತಿರುವ ಮಾಧ್ಯಮ ಚಿತ್ರಣದಲ್ಲಿ ಇನ್ನೊಂದು ಕರಾಳ ಮೈಲಿಗಲ್ಲಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಏಳು ಪತ್ರಕರ್ತರು ಬಂಧನದಲ್ಲಿದ್ದು, ಇದು ಸಿಪಿಜೆ 1992ರಲ್ಲಿ ತನ್ನ ಜೈಲು ಗಣತಿಯನ್ನು ಆರಂಭಿಸಿದಾಗಿನಿಂದ ಸತತ ಎರಡನೇ ವರ್ಷ ಸಾರ್ವಕಾಲಿಕ ದಾಖಲೆಯಾಗಿದೆ. ಆಸಿಫ್ ಸುಲ್ತಾನ್, ಸಿದ್ದಿಕ್ ಕಪ್ಪನ್, ಗೌತಮ್ ನವ್ಲಾಖಾ, ಮನ್ನಾನ್ ದಾರ್, ಸಜ್ಜಾದ್ ಗುಲ್, ಫಹದ್ ಶಾ ಮತ್ತು ರೂಪೇಶ‌ ಕುಮಾರ ಸಿಂಗ್ ಈ ಏಳು ಪತ್ರಕರ್ತರಾಗಿದ್ದಾರೆ.

ಸಿಪಿಜೆ ಗಣತಿ ವರದಿಯಂತೆ ಇರಾನ್, ಚೀನಾ, ಮ್ಯಾನ್ಮಾರ್, ಟರ್ಕಿ ಮತ್ತು ಬೆಲಾರುಸ್ ಪತ್ರಕರ್ತರನ್ನು ಜೈಲಿಗೆ ತಳ್ಳಿರುವ ಐದು ಅಗ್ರದೇಶಗಳಾಗಿವೆ. ಮಾಧ್ಯಮಗಳ ಧ್ವನಿಯನ್ನಡಗಿಸುವ ನಿರಂಕುಶ ಸರಕಾರಗಳ ದಮನಕಾರಿ ಪ್ರಯತ್ನಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್  ಮೇಲೆ ರಶ್ಯದ ಆಕ್ರಮಣದ ಅವಳಿ ಬಿಕ್ಕಟ್ಟಿನ ನಡುವೆ ಉರಿಯುತ್ತಿರುವ ಅಸಮಾಧಾನವನ್ನು ತಣ್ಣಗಾಗಿಸುವ ಹುನ್ನಾರವಿದೆ ಎಂದು ಸಿಪಿಜೆ ಹೇಳಿದೆ.

ಭಾರತವು ಮಾಧ್ಯಮಗಳನ್ನು ತಾನು ನಡೆಸಿಕೊಳ್ಳುತ್ತಿರುವ ರೀತಿಗಾಗಿ, ವಿಶೇಷವಾಗಿ ಅವರ ವಿರುದ್ಧ ಜಮ್ಮು-ಕಾಶ್ಮೀರ ಸಾರ್ವಜನಿಕ ಭದ್ರತಾ ಕಾಯ್ದೆ (ಪಿಎಸ್ಎ)ಯ ಬಳಕೆಗಾಗಿ ನಿರಂತರ ಟೀಕೆಗಳಿಗೆ ಗುರಿಯಾಗುತ್ತಲೇ ಇದೆ. ಕಾಶ್ಮೀರಿ ಪತ್ರಕರ್ತರಾದ ಆಸಿಫ್ ಸುಲ್ತಾನ್, ಫಹದ್ ಶಾ ಮತ್ತು ಸಜ್ಜಾದ್ ಗುಲ್ ಅವರಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ ಅವರನ್ನು ಜೈಲಿನಲ್ಲಿಯೇ ಮುಂದುವರಿಸಲು ಈ ಕಾಯ್ದೆಯನ್ನು ಬಳಸಲಾಗಿದೆ ಎಂದು ಸಿಪಿಜೆ ಹೇಳಿದೆ.

ಬಂಧಿತ ಏಳು ಭಾರತೀಯ ಪತ್ರಕರ್ತರ ಪೈಕಿ ಆರು ಜನರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನಾಗಿರುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ತನಿಖೆ ನಡೆಸಲಾಗುತ್ತಿದೆೆ ಅಥವಾ ಆರೋಪಗಳನ್ನು ಹೊರಿಸಲಾಗಿದೆ. ಈ ಏಳು ಪತ್ರಕರ್ತರ ಪೈಕಿ ಮೂವರು ಒಂದು ವರ್ಷಕ್ಕೂ ಅಧಿಕ ಸಮಯದಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಸಿಪಿಜೆ ತನ್ನ ವರದಿಯಲ್ಲಿ ಬೆಟ್ಟು ಮಾಡಿದೆ.

Similar News