ಹುಬ್ಬಳ್ಳಿ: ಹೈಕೋರ್ಟ್ ಆದೇಶದ ಮೇರೆಗೆ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

Update: 2022-12-21 07:12 GMT

ಹುಬ್ಬಳ್ಳಿ: ಹೈಕೋರ್ಟ್ ಆದೇಶದ ಮೇರೆಗೆ ಭೈರಿದೇವರಕೊಪ್ಪ ಹಝ್ರತ್ ಸೈಯದ್ ಮಹಮ್ಮೂದ್‌ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಬುಧವಾರ ಬೆಳಿಗ್ಗೆ ಆರಂಭವಾಗಿದ್ದು, ಭೈರಿದೇವರಕೊಪ್ಪ ಸುತ್ತ ಮುತ್ತ 144 ಸೆಕ್ಷನ್ ಜಾರಿ ಮಾಡಿರುವುದಾಗಿ ವರದಿಯಾಗಿದೆ.

ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲೆ ಇರುವ ದರ್ಗಾವನ್ನು ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ನೇತೃತ್ವದಲ್ಲಿ 5 ಡಿವೈಎಸ್‌ಪಿ,13 ಪಿಐ, 15 ಪಿಎಸ್‌ಐ, 250 ಕಾನ್ ಸ್ಟೇಬಲ್ , ಆರ್‌ಎ‌ಎಫ್, ಕೆಎಸ್‌ಆರ್‌ಪಿ, ಸಿಎಆರ್ ತುಕಡಿಗಳನ್ನು‌ ನಿಯೋಜನೆ ಮಾಡಲಾಗಿದೆ.

ಮೌಲ್ವಿಗಳ ಮನವಿ: ತೆರವು ಕಾರ್ಯಾಚರಣೆಯ ವೇಳೆ ದರ್ಗಾವನ್ನು ಸುರಕ್ಷಿತವಾಗಿ ತೆರವುಗೊಳಿಸುವಂತೆ ಮೌಲ್ವಿಗಳ ಮನವಿ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿಯ ದರ್ಗಾದ ಇಬ್ಬರು, ಕಸಬಾಪೇಟೆ ದರ್ಗಾದ ಓರ್ವ ಮೌಲ್ವಿಯ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ತೆರವು ಕಾರ್ಯ ಕೈಗೊಂಡಿರುವುದಾಗಿ ತಿಳಿದುಬಂದಿದೆ.

Full View

Similar News