ಅಕ್ರಮ ನಿಧಿಗಳನ್ನು ಸೃಷ್ಟಿಸಲು ಆಪ್ ನಾಯಕರಿಂದ ದಿಲ್ಲಿ ಅಬಕಾರಿ ನೀತಿ ರಚನೆ: ಜಾರಿ ನಿರ್ದೇಶನಾಲಯ

Update: 2022-12-21 17:37 GMT

ಹೊಸದಿಲ್ಲಿ, ಡಿ. 21: ಅಕ್ರಮ ನಿಧಿಗಳನ್ನು ಸೃಷ್ಟಿಸಲು ಆಮ್ ಆದ್ಮಿ ಪಕ್ಷದ ನಾಯಕರು ನೂತನ ಅಬಕಾರಿ ನೀತಿಯನ್ನು ರೂಪಿಸಿದರು ಎಂದು ಜಾರಿ ನಿರ್ದೇಶನಾಲಯ ಅಕ್ರಮ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ತಿಳಿಸಿದೆ.

ಕೇಂದ್ರದ ತನಿಖಾ ಸಂಸ್ಥೆ ಈ ಪ್ರಕರಣವನ್ನು ಹಣ ಅಕ್ರಮ ವರ್ಗಾವಣೆಯ ಆಯಾಮದಲ್ಲಿ ತನಿಖೆ ನಡೆಸುತ್ತಿದೆ. ಈಗ ತಡೆ ಹಿಡಿಯಲಾದ ನೀತಿ ಸರಕಾರದ ಬೊಕ್ಕಸಕ್ಕೆ 2,873 ಕೋ.ರೂ. ನಷ್ಟ ಉಂಟು ಮಾಡಿದೆ ಎಂದು ಅದು ಆರೋಪಿಸಿದೆ. ಅಬಕಾರಿ ನಿಯಮಗಳ ಭಾಗವಾಗಿರುವ ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಆರೋಪಿಸಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಹಾಗೂ ಇತರ 14 ಮಂದಿಯ ವಿರುದ್ಧ ಆಗಸ್ಟ್ 17ರಂದು ಸಿಬಿಐ ಪ್ರಕರಣ ದಾಖಲಿಸಿತ್ತು.

‘‘ಉದ್ದೇಶಪೂರ್ವಕ ಲೋಪದೋಷಗಳು, ಕಾನೂನು ಬಾಹಿರ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅಂತರ್ಗತ ಕಾರ್ಯ ವಿಧಾನದೊಂದಿಗೆ ನೀತಿಯನ್ನು ರೂಪಿಸಲಾಗಿದೆ. ಕೂಲಂಕಷವಾಗಿ ನೋಡಿದಾಗ ನೀತಿ ನಿರೂಪಕರ ದುರುದ್ದೇಶಗಳನ್ನು ಪ್ರತಿಬಿಂಬಿಸುವ ಅಸಂಗತತೆಗಳಿಂದ ಕೂಡಿದೆ’’ ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪ ಪಟ್ಟಿಯಲ್ಲಿ ಹೇಳಿದೆ.

ಆಮ್ ಆದ್ಮಿ ಪಕ್ಷದ ಸಂವಹನ ಉಸ್ತುವಾರಿ ಹಾಗೂ ಸಹ ಆರೋಪಿ ವಿಜಯ್ ನಾಯರ್(Vijay Nair) ಈ ಸಂಪೂರ್ಣ ಹಗರಣವನ್ನು ಸಂಯೋಜಿಸಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯ ತಿಳಿಸಿದೆ.

Similar News