ರಾಜ್ಯದಲ್ಲಿ ಚರ್ಮಗಂಟು ರೋಗದಿಂದ 21 ಸಾವಿರಕ್ಕೂ ಅಧಿಕ ಜಾನುವಾರುಗಳ ಸಾವು: ಸಚಿವ ಪ್ರಭು ಚೌಹಾಣ್

Update: 2022-12-21 18:02 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.21: ಕರ್ನಾಟಕ ರಾಜ್ಯದಲ್ಲಿ ‘ಚರ್ಮ ಗಂಟು ರೋಗ’ದಿಂದ ಒಟ್ಟು 21,305 ಜಾನುವಾರುಗಳು ಸಾವನ್ನಪ್ಪಿವೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಲಿಖಿತ ಉತ್ತರ ನೀಡಿರುವ ಅವರು, ‘ರಾಜ್ಯದಲ್ಲಿ ಜಾನುವಾರು ಗಣತಿ ಪ್ರಕಾರ 1.14 ಕೋಟಿ ದನ ಮತ್ತು ಎಮ್ಮೆ ಸೇರಿದಂತೆ ಜಾನುವಾರುಗಳಿದ್ದು, ಈ ಪೈಕಿ ಚರ್ಮಗಂಟು ರೋಗದಿಂದ 21,305 ಜಾನುವಾರುಗಳು ಸಾವನ್ನಪ್ಪಿವೆ. ಇನ್ನೂ, 1.64 ಲಕ್ಷ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖ ಹೊಂದಿವೆ. ಹಾಗೇ, 69ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ ಎಂದು ವಿವರಿಸಿದರು.

ಚರ್ಮಗಂಟು ರೋಗದಿಂದ ಮೃತಪಟ್ಟ ಪ್ರತಿ ಕರುವೊಂದಕ್ಕೆ 5 ಸಾವಿರ ರೂ., ದನವೊಂದಕ್ಕೆ 20 ಸಾವಿರ ಹಾಗೂ ಎತ್ತುವೊಂದಕ್ಕೆ 30 ಸಾವಿರ ರೂ. ಪರಿವಾರ ನಿಗದಿ ಮಾಡಲಾಗಿದ್ದು, ಇದುವರೆಗೂ 7 ಕೋಟಿ ರೂ.ಗಳನ್ನು ಪರಿಹಾರ ಧನ ಮಾಲಕರಿಗೆ ತಲುಪಿಸಲಾಗಿದೆ ಎಂದರು.

Similar News