‘ಗೋ ರಕ್ಷಣೆ’ ಪ್ರಚಾರಕ್ಕೆ ಮಾತ್ರ ಸೀಮಿತವೇ: ಸಿದ್ದರಾಮಯ್ಯ ಪ್ರಶ್ನೆ

''2 ವರ್ಷಗಳಲ್ಲಿ 15 ಲಕ್ಷ ರಾಸುಗಳು ಎಲ್ಲಿ ಹೋದವು?''

Update: 2022-12-22 12:57 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.22: ರಾಜ್ಯದಲ್ಲಿ 1,29 ಲಕ್ಷ ಜಾನುವಾರುಗಳಿವೆ ಎಂದು 2019ರ ಮಾ.25ರಂದು ಪಶುಸಂಗೋಪನಾ ಇಲಾಖೆಯ ನಿರ್ದೇಶಕರು ಮಾಹಿತಿ ನೀಡಿದ್ದರು. 2022ರ ಡಿ.19ರಂದು ನೀಡಿರುವ ಮಾಹಿತಿಯಲ್ಲಿ 1.14 ಲಕ್ಷ ಜಾನುವಾರುಗಳಿರುವುದಾಗಿ ತಿಳಿಸಿದ್ದಾರೆ. ಎರಡು ವರ್ಷಗಳಲ್ಲಿ 15 ಲಕ್ಷ ರಾಸುಗಳು ಎಲ್ಲಿ ಹೋದವು? ಗೋರಕ್ಷಣೆ ಮಾಡಲು ಗೋ ಹತ್ಯೆ ನಿಷೇಧ ಕಾಯ್ದೆ ತಂದಿರುವುದಾಗಿ ಹೇಳಿದ್ದರು. ಹಾಗಾದರೆ, ಈ 15 ಲಕ್ಷ ರಾಸುಗಳು ಮಾಯವಾದವೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಗುರುವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಚರ್ಮಗಂಟು ರೋಗದಿಂದ ರಾಜ್ಯದಲ್ಲಿ ಈವರೆಗೆ 21,305 ಜಾನುವಾರುಗಳು ಸಾವನ್ನಪ್ಪಿವೆ. 2.38 ಲಕ್ಷ ಜಾನುವಾರುಗಳಿಗೆ ರೋಗ ಬಂದಿದೆ. ಈವರೆಗೆ 69 ಸಾವಿರ ಜಾನುವಾರುಗಳಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಉಳಿದ 1.69 ಲಕ್ಷ ಜಾನುವಾರುಗಳಿಗೂ ಲಸಿಕೆ ಹಾಕಬೇಕು. ಅಲ್ಲದೆ, ಎತ್ತು, ಹಸು, ಕೋಣ, ಆಕಳು ಸಾವನ್ನಪ್ಪಿದರೆ ಕನಿಷ್ಠ ಒಂದು ಲಕ್ಷ ರೂ.ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಹಸುಗಳನ್ನು ಮುಂದಿಟ್ಟುಕೊಂಡು, ಫೋಟೋ ಹಿಡಿದುಕೊಂಡು, ಪೂಜೆ ಮಾಡಿದರೆ ಹಸುಗಳ ರಕ್ಷಣೆ ಸಾಧ್ಯವೇ? ರಾಜ್ಯದಲ್ಲಿ ಪಶುಸಂಗೋಪನೆ ಇಲಾಖೆ ಬದುಕಿದೆಯೋ? ಸತ್ತಿದೆಯೋ? ಈ ರೋಗಗಳನ್ನು ಹೋಗಲಾಡಿಸುವ ಕೆಲಸ ಪಶುಸಂಗೋಪನಾ ಇಲಾಖೆ ಮಾಡಬೇಕಲ್ಲವೇ? ಈ ಇಲಾಖೆಗೆ ಮಂಜೂರಾಗಿರುವುದು 3253 ಹುದ್ದೆಗಳು. ಭರ್ತಿಯಾಗಿರುವುದು 2042 ಹುದ್ದೆಗಳು ಮಾತ್ರ. ವೆಟರ್ನರಿ ಇನ್ಸ್‍ಪೆಕ್ಟರ್ ಹುದ್ದೆಗಳು ಶೇ.28 ಮಾತ್ರ ಭರ್ತಿಯಾಗಿವೆ. ಪರಿಸ್ಥಿತಿ ಹೀಗಿರುವಾಗ ಗೋ ರಕ್ಷಣೆ ಹೇಗೆ ಸಾಧ್ಯ? ಪ್ರಚಾರಕ್ಕೆ ಮಾತ್ರ ಗೋ ರಕ್ಷಣೆಯೇ? ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಪ್ರತಿದಿನ 96 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಈಗ 78 ಲಕ್ಷ ಲೀಟರ್ ಗೆ ಕುಸಿದಿದೆ. ಇದಕ್ಕೆ ಚರ್ಮಗಂಟು ರೋಗವು ಒಂದು ಕಾರಣ. ಹಾಲಿನ ಬೆಲೆ ಪ್ರತಿ ಲೀಟರ್ 32 ರೂ. ಹಾಗೂ ಪ್ರೋತ್ಸಾಹ ಧನ 5 ರೂ.ಸೇರಿ 37 ರೂ.ಆಗುತ್ತದೆ. ಪ್ರತಿದಿನ 18 ಲಕ್ಷ ಲೀಟರ್ ಕುಸಿತ ಆದರೆ ಒಂದು ದಿನಕ್ಕೆ 6.66 ಕೋಟಿ ರೂ.ಗಳು ರಾಜ್ಯದ ರೈತರಿಗೆ ನಷ್ಟವಾಗುತ್ತಿದೆ. ಇದಕ್ಕೆ ಯಾರು ಹೊಣೆ? ರಾಜಕೀಯಕ್ಕಾಗಿ ಗೋ ರಕ್ಷಣೆ ಮಾಡುತ್ತೀರಾ? 16 ಲಕ್ಷ ರೈತ ಕುಟುಂಬಗಳು ಹಾಲು ಉತ್ಪಾದನೆ ಮೇಲೆ ಅವಲಂಬಿತವಾಗಿವೆ. ದೇಶ, ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.

ಕೊರೋನ ಸಂದರ್ಭದಲ್ಲಿ ಯಾವ ರೀತಿ ಸಮರೋಪಾದಿಯಲ್ಲಿ ಲಸಿಕೆ ನೀಡುವ ಕೆಲಸವನ್ನು ನಾವು ಮಾಡಿದ್ದೇವೆ. ಇವು ಮೂಕ ಪ್ರಾಣಿಗಳು ಅವುಗಳ ಸಮಸ್ಯೆಗಳಿಗೂ ನಾವು ಸ್ಪಂದಿಸಬೇಕು ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Similar News