'ಚಂದಮಾಮದಲ್ಲಿ ಇಂತಹ ಕತೆ ಬರುತ್ತಿತ್ತು...': ಚಿರತೆ, ಆನೆ ದಾಳಿ ವಿಧಾನಸಭೆಯಲ್ಲಿ ಪ್ರತಿಧ್ವನಿ

Update: 2022-12-22 15:33 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.22: ರಾಜ್ಯದಲ್ಲಿ ಇತ್ತೀಚಿನ ದಿಗಳಲ್ಲಿ ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಚಿರತೆ ಮತ್ತು ಆನೆ ದಾಳಿ ತಡೆಗೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪಕ್ಷಬೇಧ ಮರೆತು ಆಗ್ರಹಿಸಿದ ಪ್ರಸಂಗ ನಡೆಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಅಶ್ವಿನ್ ಕುಮಾರ್, ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಮಂಜುನಾಥ್ ಅನ್ನುವ ವ್ಯಕ್ತಿಯನ್ನು ನಂತರ ಮೇಘನಾ ಎಂಬ ಬಾಲಕಿ, ಸತೀಶ್ ಎಂಬ ಬಾಲಕ ಹಾಗೂ ನಿನ್ನೆ ನಿಂಗೇಗೌಡ ಎಂಬ ರೈತನ ಮೇಲೆ ದಾಳಿ ನಡೆಸಿದೆ.ಆ ಭಾಗದಲ್ಲಿನ ಜನತೆ ಆತಂಕದಲ್ಲಿದ್ದು ಚಿರತೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ತುಕರಾಂ, ನಮ್ಮ ಕ್ಷೇತ್ರದಲ್ಲಿಯೂ ಚಿರತೆ ಜನವಸತಿ ಕಟ್ಟಡ, ಕ್ಯಾಂಪಸ್‍ಗೂ ಬಂದಿದೆ. ಕ್ಷೇತ್ರದಲ್ಲಿ ಗಣಿ ಚಟುವಟಿಕೆ ನಡೆದಿದ್ದು, ಕರಡಿ ಧಾಮದ ಮಾದರಿಯಲ್ಲೇ ಚಿರತೆ ಧಾಮವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಪಕ್ಕದ ಕ್ಷೇತ್ರ ಬಿಡುವುದು ಸಲ್ಲ: ಇದೇ ವೇಳೆ ಮಾತನಾಡಿದ ಜೆಡಿಎಸ್‍ನ ಮಂಜುನಾಥ್, ಚಿರತೆಯನ್ನು ಹಿಡಿಯುತ್ತಾರೆ.ಆದರೆ ಎಲ್ಲಿ ಅದನ್ನು ಬಿಡುತ್ತಾರೆ ಎಂದು ಹೇಳುವುದಿಲ್ಲ ಎಂದು ಆಕ್ಷೇಪಿಸಿದರು.

ಈ ಹಂತದಲ್ಲಿ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕಾಗೇರಿ,  ಹಿಡಿದ ಚಿರತೆಯನ್ನು ಪಕ್ಕದ ಕ್ಷೇತ್ರಕ್ಕೆ ಬಿಡ್ತಾರೆಂದು ಕಾಲೆಳೆದರು.

ಆನೆ, ಹುಲಿ, ಚಿರತೆ, ತೋಳ, ನರಿ, ಮಂಗ ಇಷ್ಟು ಲಿಸ್ಟ್ ಮಾಡೋಣ. ನಾವು ಒಂದು ಸರ್ವ ಪಕ್ಷದ ನಿಯೋಗ ಮಾಡೋಣ.ನೀವು ಮಾಡುವ ಎಲ್ಲ ಕೆಲಸಗಳನ್ನು ನಾವು ಇಲ್ಲಿ ಮಾಡ್ತಿದ್ದೇವೆ. ನೀವು ಇಲ್ಲಿ ಬಂದು ತೊಂದರೆ ಕೊಡಬೇಡಿ ಎಂದು ಮನವಿ ಮಾಡೋಣ. ನೀವು ಒಂದು ಸರ್ವ ಪಕ್ಷದ ನಿಯೋಗ ರಚನೆ ಮಾಡಿ ಎಂದು ಸದಸ್ಯರೊಬ್ಬರು ಹೇಳಿದ್ದು ನಡೆಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್,  ಚಂದಮಾಮದಲ್ಲಿ ಇಂತಹ ಕತೆ ಬರುತ್ತಿತ್ತು ಎಂದು ನುಡಿದರು.

Similar News