ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಗನ್ ಜಪ್ತಿ ಮಾಡಿ: ಹಾಸನ ಜಿಲ್ಲಾಧಿಕಾರಿಗೆ ಮೇನಕಾ ಗಾಂಧಿ ಪತ್ರ

Update: 2022-12-24 07:21 GMT

ಹಾಸನ, ಡಿ.24: 'ನನ್ನ ಪ್ರಾಣ ತೆಗೆಯಲು ಬಂದಲ್ಲಿ ಆನೆಗಳ ಮೇಲೆ ಗುಂಡು ಹಾರಿಸುತ್ತೇನೆ' ಎಂದಿದ್ದ ಸಕಲೇಶಪುರ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರ ಗನ್ ಜಪ್ತಿ ಮಾಡಬೇಕು ಮತ್ತು ಅವರ ಬಂದೂಕು ಪರವಾನಗಿ ರದ್ದುಪಡಿಸಬೇಕು ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಸಂಸದೆ ಮೇನಕಾ ಗಾಂಧಿ ಅವರು ಹಾಸನ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. 

ಇತ್ತೀಚೆಗೆ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ಮಧು ಎಂಬ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದು, ಘಟನೆ ಖಂಡಿಸಿ ಆತನ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ ಜನರನ್ನುದ್ದೇಶಿಸಿ ಮಾತನಾಡಿದ ಎಚ್‌ಎಂ ವಿಶ್ವನಾಥ್ ಅವರು, ನನ್ನ ಪ್ರಾಣ ತೆಗೆಯಲು ಬಂದಲ್ಲಿ ಆನೆಗಳ ಮೇಲೆ ಗುಂಡು ಹಾರಿಸುತ್ತೇನೆ ಎಂದು ಹೇಳಿದ್ದರು. ಅಲ್ಲದೆ ಜನವಸತಿ ಪ್ರದೇಶಗಳಿಗೆ ನುಗ್ಗುವ ಆನೆಗಳನ್ನು ಕೊಲ್ಲಲು ತಂಡ ರಚಿಸುವಂತೆ ಒತ್ತಾಯಿಸಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮೇನಕಾ ಗಾಂಧಿ ಅವರು, ಎಚ್‌ಎಂ ವಿಶ್ವನಾಥ್‌ಗೆ ನೋಟಿಸ್ ಜಾರಿ ಮಾಡುವಂತೆ ಹಾಗೂ ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಪಿಸಿಸಿಎಫ್) ಕರ್ನಾಟಕ ಮತ್ತು ಹಾಸನ ಜಿಲ್ಲಾಧಿಕಾರಿಗಳಿಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. 

ಎಚ್.ಎಂ. ವಿಶ್ವನಾಥ್ ಸ್ಪಷ್ಟನೆ

ಮೇನಕಾ ಗಾಂಧಿ ಅವರ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್,  'ನನಗೆ ಜಿಲ್ಲಾಧಿಕಾರಿ ತಿಳಿವಳಿಕೆ ಪತ್ರವೊಂದನ್ನು ಕಳುಹಿಸಿದ್ದಾರೆ. ನನ್ನ ಪ್ರಾಣ ತೆಗೆಯಲು ಬಂದಲ್ಲಿ ಪ್ರಾಣ ರಕ್ಷಣೆಗೆ ಬಂದೂಕು ಬಳಸುತ್ತೇವೆಂದು ಹೇಳಿದ್ದೆ. ಈ ಮಾತನ್ನು ಆಡಬಾರದಿತ್ತೆಂದು ನನಗೆ ಅಂದೇ ಅನಿಸಿತು. ಸಮಸ್ಯೆಯ ಗಂಭೀರತೆಯನ್ನು ತಿಳಿಸುವ ಭರದಲ್ಲಿ ಮಾತನಾಡಿದ್ದೇನೆ. ಮೇನಕಾ ಗಾಂಧಿ ಪರಿಸರದ ಹಾಗೂ ವನ್ಯ ಜೀವಿಗಳ ಸಂರಕ್ಷಣೆ ಬಗ್ಗೆ ಇರುವ ಕಾಳಜಿಯ ಬಗ್ಗೆ ನನಗೆ ಅಪಾರ ಗೌರವ ಇದೆ. ನಮ್ಮ ಜಿಲ್ಲೆಯ ಕಾಡಾನೆಗಳ ಬಗ್ಗೆ ಅವರು ತೋರಿಸುವ ಕಾಳಜಿಯನ್ನು ನಾನು ಸ್ವಾಗತಿಸುತ್ತೇನೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ: VIDEO- ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿ, ಕುಮಾರಣ್ಣ ಅಧಿಕಾರಕ್ಕೆ ಬಂದು ಮನ್ನಾ ಮಾಡ್ತಾರೆ: ಅನಿತಾ ಕುಮಾರಸ್ವಾಮಿ

Similar News