ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿಗೆ ಆಘಾತ; ಶಾಸಕರ ಸಭೆ ನಡೆಸಿದ ಮಧ್ಯಪ್ರದೇಶ ಸಿಎಂ

Update: 2022-12-25 03:06 GMT

ಭೋಪಾಲ್: ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ (BJP) ಶಾಸಕರ ಪೈಕಿ ಶೇಕಡ 40ರಷ್ಟು ಮಂದಿಯ ಸಾಧನೆ ತೀರಾ ಕಳಪೆ ಹಾಗೂ ಅಸಮಾಧಾನಕರ ಎಂಬ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan), ಪ್ರತ್ಯೇಕವಾಗಿ ಪ್ರತಿ ಶಾಸಕರ ಜತೆ ವೈಯಕ್ತಿಕ ಸಭೆ ನಡೆಸುವ ಕಸರತ್ತು ಆರಂಭಿಸಿದ್ದಾರೆ.

ಚುನಾವಣೆಗೆ ಸಾಕಷ್ಟು ಮುನ್ನವೇ, ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಕಳಪೆ ಸಾಧನೆ ಎಂಬ ಜನಭಾವನೆಗಳನ್ನು ಬದಲಿಸಿಕೊಳ್ಳಲು ಶಾಸಕರಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ. ಗುಜರಾತ್ ಮಾದರಿಯಲ್ಲಿ ಕಳಪೆ ಸಾಧನೆಯ ಶಾಸಕರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ" ಎಂದು ಪಕ್ಷದ ಚುನಾವಣಾ ಕಾರ್ಯತಂತ್ರದ ಬಗ್ಗೆ ಮಾಹಿತಿ ಇರುವ ಮುಖಂಡರೊಬ್ಬರು ಹೇಳಿದ್ದಾರೆ.

ಆಂತರಿಕ ಸಮೀಕ್ಷೆಯ ಪ್ರಕಾರ, ಪ್ರತಿ ಶಾಸಕರ ಸಾಧನೆ ಪಟ್ಟಿಯಲ್ಲಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪಟ್ಟಿ, ಸ್ಥಳೀಯ ಸಮಸ್ಯೆಗಳು, ಜನರಲ್ಲಿ ಶಾಸಕರ ಬಗೆಗಿನ ಭಾವನೆ ಹಾಗೂ ಪ್ರತಿಸ್ಪರ್ಧಿಗಳಿಂದ ಎದುರಾಗಿರುವ ಸವಾಲುಗಳು ಮತ್ತಿತರ ಅಂಶಗಳು ಒಳಗೊಂಡಿವೆ. ಸಾಧನೆ ವರದಿಯಲ್ಲಿ ಸ್ಥಳೀಯ ಶಾಸಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿರುವ ಬಿಜೆಪಿ ಮುಖಂಡರ ಪಟ್ಟಿಯಲ್ಲೂ ಸೇರಿಸಲಾಗಿದೆ.

ಮಾಳವ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಸೇರಿದ ಶಾಸಕರೊಬ್ಬರು ಸಿಎಂ ಅವರನ್ನು ಭೇಟಿ ಮಾಡಿದ ಬಗ್ಗೆ ವಿವರ ನೀಡಿ, "ಮೊದಲು ನಮಗೆ ನಮ್ಮ ದೌರ್ಬಲ್ಯಗಳು ಮತ್ತು ಮತದಾರರ ಭಾವನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ನಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹಾಗೂ ನಾಲ್ಕು ವರ್ಷಗಳಲ್ಲಿ ಸಾಧನೆ ಬಗ್ಗೆ ವಿವರಿಸಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಟಿಕೆಟ್‍ಗಾಗಿ ಪ್ರಯತ್ನಿಸುತ್ತಿರುವ ಇತರ ಪ್ರತಿಸ್ಪರ್ಧಿಗಳು ನಮ್ಮ ಬಗ್ಗೆ ನೀಡಿರುವ ದೂರುಗಳ ಬಗ್ಗೆಯೂ ವಿವರಿಸಲಾಗಿದೆ" ಎಂದು ಬಹಿರಂಗಪಡಿಸಿದ್ದಾರೆ.

Similar News