ಸಿಎಎಫ್ ಕಾನ್ಸ್ಟೇಬಲ್ ಗುಂಡಿಗೆ ಹೆಡ್ ಕಾನ್ಸ್ಟೇಬಲ್ ಬಲಿ

Update: 2022-12-25 16:59 GMT

ಕಂಕೇರ್, ಡಿ.25: ಛತ್ತೀಸ್ಗಡ ಸಶಸ್ತ್ರ ಪಡೆ (ಸಿಎಎಫ್)ಯ ಕಾನ್ಸ್ಟೇಬಲ್ನೋರ್ವ ಗುಂಡು ಹಾರಿಸಿದ ಪರಿಣಾಮ ಹೆಡ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರವಿವಾರ ಇಲ್ಲಿ ಸಂಭವಿಸಿದೆ.

ಸಿಎಎಫ್ನ 11ನೇ ಬಟಾಲಿಯನ್ ಅನ್ನು ಭದ್ರತಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದ್ದ ಕಂಕೇರ್ನ ಸರಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಡಿ.5ರಂದು ನಡೆದಿದ್ದ ಕಂಕೇರ್ ಜಿಲ್ಲೆಯ ಭಾನುಪ್ರತಾಪ್ಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತಗಳ ಎಣಿಕೆ ಡಿ.8ರಂದು ನಡೆದಿದ್ದು,ಮತದಾನಕ್ಕಾಗಿ ಬಳಸಲಾಗಿದ್ದ ವಿದ್ಯುನ್ಮಾನ ಮತದಾನ ಯಂತ್ರಗಳನ್ನು ಮುಂದಿನ 45 ದಿನಗಳಿಗಾಗಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ.

ರವಿವಾರ ಬೆಳಿಗ್ಗೆ ಭದ್ರತಾ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ಪುರುಷೋತ್ತಮ ಸಿಂಗ್ ತನ್ನ ರೈಫಲ್ನಿಂದ 20 ಸುತ್ತು ಗುಂಡುಗಳನ್ನು ಹಾರಿಸಿದ್ದು,ಒಂದು ಗುಂಡು ಹೆಡ್ ಕಾನ್ಸ್ಟೇಬಲ್ ಸುರೇಂದ್ರ ಭಗತ್ ಅವರಿಗೆ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೃತ್ಯಕ್ಕೆ ಕಾರಣವಿನ್ನಷ್ಟೇ ಗೊತ್ತಾಗಬೇಕಿದೆ ಎಂದು ಎಸ್ಪಿ ಶಲಭ ಸಿನ್ಹಾ ತಿಳಿಸಿದರು.

ಗುಂಡು ಹಾರಾಟದ ಬಳಿಕ ಸಿಂಗ್ ರೈಫಲ್ ಸಹಿತ ಕೋಣೆಯೊಂದಕ್ಕೆ ನುಗ್ಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ. ಹಿರಿಯ ಅಧಿಕಾರಿಗಳು ಮನವೊಲಿಸಿದ ಬಳಿಕ ಹೊರಗೆ ಬಂದಿದ್ದ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು,ಕಂಕೇರ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ ಎಂದರು. ಸಿಂಗ್ ಕಳೆದ ತಿಂಗಳಷ್ಟೇ ರಜೆಯಿಂದ ಕರ್ತವ್ಯಕ್ಕೆ ಮರಳಿದ್ದ ಎಂದು ಅವರು ತಿಳಿಸಿದರು.

ಪ್ರಾಥಮಿಕ ಮಾಹಿತಿಯಂತೆ ಯಾವುದೋ ವಿಷಯದಲ್ಲಿ ಸಿಂಗ್ ಮತ್ತು ಭಗತ್ ನಡುವೆ ವಾಗ್ವಾದವುಂಟಾಗಿತ್ತು ಮತ್ತು ಸಿಂಗ್ ತನ್ನ ಇನ್ಸಾಸ್ ರೈಫಲ್ನಿಂದ ಗುಂಡುಗಳನ್ನು ಹಾರಿಸಿದ್ದ ಎಂದು ತಿಳಿದುಬಂದಿದೆ.

Similar News