ಮುಳುಗಡೆ ಸಂತ್ರಸ್ತರಿಗೆ ‘ಬದಲಿ ಜಮೀನು’: ಸಚಿವ ಆರ್.ಅಶೋಕ್ ಭರವಸೆ

Update: 2022-12-26 14:31 GMT

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ. 26: ‘ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಜಮೀನು ಬಿಟ್ಟುಕೊಟ್ಟ ರೈತರಿಗೆ ಬದಲಿ ಜಮೀನು ನೀಡುವ ಬಗ್ಗೆ ಅಗತ್ಯವೆನಿಸಿದರೆ ಕಾನೂನು ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಸದನಕ್ಕೆ ಭರವಸೆ ನೀಡಿದ್ದಾರೆ.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್, ‘ಜಮೀನು ಕಳೆದುಕೊಂಡ ರೈತರ ಬಳಿ ನೈಜ ದಾಖಲೆಗಳಿದ್ದರೆ ಕೂಡಲೇ ಅವರಿಗೆ ಬದಲಿ ಜಮೀನು ನೀಡಲು ಸಮಸ್ಯೆ ಇಲ್ಲ. ಕೆಲ ರೈತರ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ ಕಾರಣ ಸಮಸ್ಯೆ ಆಗಿದೆ. ನಿಜವಾದ ರೈತರಿಗೆ ನ್ಯಾಯ ದೊರಕಿಸಿಕೊಡಲು ಕಾನೂನಿಗೆ ತಿದ್ದುಪಡಿ ಮಾಡಲು ಪರಿಶೀಲನೆ ನಡೆಸಲಾಗುವುದು ಎಂದರು.

ಹೇಮಾವತಿ ಜಲಾಶಯ ಯೋಜನೆಗೆ ಜಮೀನು ಕಳೆದುಕೊಂಡ 234 ಮುಳುಗಡೆ ಸಂತ್ರಸ್ತರಿಗೆ ಬದಲಿ ಜಮೀನು ಮಂಜೂರು ಮಾಡಲಾಗಿದೆ. ಏಕ ವ್ಯಕ್ತಿ ಕೋರಿಕೆ ಮೇರೆಗೆ ಈಗಾಗಲೇ 58 ಜನರಿಗೆ ಜಮೀನು ನೀಡಲಾಗಿದೆ. ಉಳಿದವರು ದಾಖಲೆಗಳನ್ನು ಒದಗಿಸಿದರೆ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

‘ಮುಳುಗಡೆ ಸಂತ್ರಸ್ತರು ತ್ಯಾಗ ಮಾಡಿ ನೀರಾವರಿ ಯೋಜನೆಗಳಿಗೆ ಜಮೀನು ನೀಡಿದ್ದಾರೆ. ಅವರಿಗೆ ಬದಲಿ ಜಮೀನು ನೀಡಲು ತಕರಾರುಗಳಿದ್ದರೆ ಅವುಗಳನ್ನು ಪರಿಶೀಲಿಸಿ ಸರಿಪಡಿಸಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಿ ಜವಾಬ್ದಾರಿ ಕೊಡಿ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

‘ಹೆಗ್ಗಣಗಳು’ ದಾಖಲೆಗಳನ್ನು ತಿಂದು ಹಾಕಿವೆ: ‘ಮುಳುಗಡೆ ಸಂತ್ರಸ್ತರಿಗೆ ಜಮೀನು ಮಂಜೂರು ಮಾಡಿದ ಮೇಲೆ ಅವರು ಅನುಭವದಲ್ಲಿದ್ದಾರೆ. ಅವರು ದುರಸ್ತಿ ಮಾಡಿಸಿಕೊಟ್ಟಿಲ್ಲ. ಹಕ್ಕುಪತ್ರ ನೀಡಲು ಮೂಲ ದಾಖಲೆ ಕೊಡಿ ಎಂದು ಅಧಿಕಾರಿಗಳು ಕೇಳಿದರೆ ಆ ದಾಖಲೆಗಳು ಕಂದಾಯ ಇಲಾಖೆಯಲ್ಲೇ ಇರಬೇಕಲ್ಲವೇ? ಇಲಾಖೆಯಲ್ಲಿನ ‘ಹೆಗ್ಗಣಗಳು’ ದಾಖಲೆಗಳನ್ನು ತಿಂದು ಹಾಕಿವೆ.ಮಾತೃ ಇಲಾಖೆಯಲ್ಲಿ ದಾಖಲೆಗಳಿದ್ದರೆ ಮತ್ತೆ ಯಾರನ್ನು ಕೇಳಬೇಕು’

-ಎ.ಟಿ.ರಾಮಸ್ವಾಮಿ ಜೆಡಿಎಸ್ ಹಿರಿಯ ಸದಸ್ಯ

Similar News