ಕೇವಲ ಶೇ. 3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರಾರೂ ಭಿಕ್ಷುಕರಲ್ಲ: ಡಿ.ಕೆ.ಶಿವಕುಮಾರ್ ಆಕ್ರೋಶ

''ಬೇರೆಯವರ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ನೀಡುವುದು ಬೇಡ''

Update: 2022-12-26 15:39 GMT

ಹುಬ್ಬಳ್ಳಿ, ಡಿ.26: 'ಕೇವಲ ಶೇ.3ರಷ್ಟು ಮೀಸಲಾತಿ ಪಡೆಯಲು ಒಕ್ಕಲಿಗರು ಭಿಕ್ಷುಕರಲ್ಲ. ಜನಸಂಖ್ಯೆ ಅನುಗುಣವಾಗಿ ಈ ಸಮುದಾಯಕ್ಕೆ ಶೇ.12 ರಷ್ಟು ಮೀಸಲಾತಿ ಸಿಗಬೇಕು. ಬೇರೆ ಸಮುದಾಯದವರು ತಮ್ಮ ಹಕ್ಕು ಕೇಳುವುದರಲ್ಲಿ ತಪ್ಪಿಲ್ಲ. ನಾವು ಅದನ್ನು ವಿರೋಧಿಸುವುದಿಲ್ಲ. ಒಕ್ಕಲಿಗರಿಗೆ ಸಿಗಬೇಕಾದ ಹಕ್ಕನ್ನು ಆಗ್ರಹಿಸುತ್ತಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಒಕ್ಕಲಿಗರಾರೂ ಭಿಕ್ಷುಕರಲ್ಲ. ಅವರು ಒಕ್ಕಲುತನ ಮಾಡಿಕೊಂಡು, ಅನ್ನದಾತರಾಗಿದ್ದಾರೆ. ಒಕ್ಕಲುತನ ಮಾಡುವವರು ಶ್ರಮಪಟ್ಟು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. 3 % ಮೀಸಲಿಗೆ ಯಾರೂ ಭಿಕ್ಷೆ ಬೇಡುತ್ತಿಲ್ಲ.  ನಮ್ಮ ಸಮುದಾಯದ ಸ್ವಾಮೀಜಿಗಳ ಮುಖಂಡತ್ವದಲ್ಲಿ ಸಚಿವರಾದ ಅಶೋಕ್ ಅವರನ್ನು ಕರೆಸಿ ಅವರಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ನಮ್ಮ ಸಮುದಾಯದ ಜನಸಂಖ್ಯೆ ಶೇ.15-16 ರಷ್ಟು ಇದ್ದರೂ ನಾವು ಶೇ.12 ರಷ್ಟು ಮೀಸಲಾತಿ ಕೇಳಿದ್ದೇವೆ. ಬೇರೆಯವರ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ಮೀಸಲಾತಿ ನೀಡುವುದು ಬೇಡ' ಎಂದು .

'ಬೇರೆಯವರಿಗೆ ಅನ್ಯಾಯ ಮಾಡಲು ನಾವು ಬಯಸುವುದಿಲ್ಲ. ಅಲ್ಪಸಂಖ್ಯಾತರಿಗೆ ಏನು ಸಿಗಬೇಕೋ ಸಿಗಲಿ, ವೀರಶೈವರು, ಪಂಚಮಸಾಲಿಗಳು, ಬ್ರಾಹ್ಮಣರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳಿಗೆ ಏನು ಸಿಗಬೇಕೊ ಸಿಗಲಿ. ಅದಕ್ಕೆ ನಮ್ಮ ತಕರಾರಿಲ್ಲ. ನಮ್ಮ ಸಮಾಜದ ಜನಸಂಖ್ಯೆ ಆಧಾರದಲ್ಲಿ ನಾವು ಶೇ.12 ರಷ್ಟು ಕೇಳಿದ್ದು, ಸಚಿವರು ಸರ್ಕಾರಕ್ಕೆ ತಿಳಿಸಿ ಇದನ್ನು ನೀಡುವುದಾಗಿ ಹೇಳಿದ್ದರು. ಆದರೆ ಈಗ ಶೇ. 3 ರಷ್ಟು ಮೀಸಲಾತಿಗೆ ಏರಿಕೆ ಮಾಡಲು ನಮ್ಮ ಸ್ವಾಮಿಗಳನ್ನು ಒಪ್ಪಿಸುತ್ತೇವೆ ಎಂದು ಹೇಳಿದ್ದಾರೆ. ಶೇ.3 ರಷ್ಟು ಮೀಸಲಾತಿ ಪಡೆಯಲು ನಾವೇನು ಭಿಕ್ಷುಕರಲ್ಲ. ಶೇ.12 ರಷ್ಟು ಮೀಸಲಾತಿ ನಮ್ಮ ಹಕ್ಕು ನಾವದನ್ನು ಆಗ್ರಹಿಸುತ್ತೇವೆ' ಎಂದರು.

Similar News