ದಿಲ್ಲಿಯಲ್ಲಿ ಸಾರ್ವಜನಿಕ ಸೇವೆಗಳ ನಿಯಂತ್ರಣ ಕೇಂದ್ರ ಸರ್ಕಾರದ್ದು: ದಿಲ್ಲಿ ಹೈಕೋರ್ಟ್

Update: 2022-12-27 09:21 GMT

ಹೊಸದಿಲ್ಲಿ: ಸಾರ್ವಜನಿಕ ಸೇವಾ ನೇಮಕಾತಿ ಸಂಬಂಧ ಕೇಂದ್ರ ಸರ್ಕಾರ ಮತ್ತು ದಿಲ್ಲಿ ಸರ್ಕಾರದ ನಡುವೆ ನಡೆಯುತ್ತಿರುವ ಜಟಾಪಟಿ ಕುರಿತು ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠದ ಮುಂದೆ ಇರುವ ಪ್ರಕರಣದ ವಿಚಾರಣೆಗೆ ಒಂದು ದಿನ ಬಾಕಿ ಇರುವಾಗಲೇ, ಈ ಕುರಿತು ಕಳೆದ ಮಧ್ಯರಾತ್ರಿ ತೀರ್ಪು ನೀಡಿರುವ ದಿಲ್ಲಿ ಹೈಕೋರ್ಟ್, ದಿಲ್ಲಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಸಾರ್ವಜನಿಕ ಸೇವಾ ನೇಮಕಾತಿ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಹೇಳಿದೆ ಎಂದು timesofindia ವರದಿ ಮಾಡಿದೆ.

2002ರಲ್ಲಿ ವ್ಯಕ್ತಿಯೊಬ್ಬರಿಗೆ ವಿಧಾನಸಭೆಯಲ್ಲಿ ಹುದ್ದೆಯೊಂದನ್ನು ಸೃಷ್ಟಿಸಿ, 2013ರಲ್ಲಿ ಆ ಹುದ್ದೆ ಹೊಂದಿದ್ದ ವ್ಯಕ್ತಿಯನ್ನು ವಜಾಗೊಳಿಸಿದ ಪ್ರಕರಣದ ಕುರಿತು ತೀರ್ಪು ನೀಡಿದ ನ್ಯಾ. ಚಂದ್ರಧಾರಿ ಸಿಂಗ್, 1991ರಲ್ಲಿ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಗಿರುವ 239ಎಎ ವಿಧಿಯನ್ವಯ ವಿಧಾನಸಭೆಯ ರಚನೆಯೊಂದಿಗೆ ದಿಲ್ಲಿ ಸರ್ಕಾರವನ್ನು ರಚಿಸಲಾಗಿದೆ. ಇದರ ಪರಿಣಾಮವಾಗಿ ಜಾರಿಗೊಂಡಿರುವ ಎನ್‌ಸಿಟಿ ದಿಲ್ಲಿಯ ಸರ್ಕಾರಿ ವ್ಯವಹಾರಗಳ ವಹಿವಾಟು ನಿಯಮಗಳಡಿ, ಎನ್‌ಸಿಟಿ ದಿಲ್ಲಿಯಲ್ಲಿನ ಸಾರ್ವಜನಿಕ ಸೇವಾ ನೇಮಕಾತಿಗಳು ಕೇಂದ್ರ ಸರ್ಕಾರದ ಅಗತ್ಯ ಸೇವಾ ವ್ಯಾಪ್ತಿಗೆ ಒಳಪಟ್ಟಿವೆ ಮತ್ತು ಪಟ್ಟಿ 1ರಲ್ಲಿ ನಮೂದಾಗಿರುವ 70 ಸೇವಾ ನೇಮಕಾತಿಗಳು ಈ ನಿಯಮಗಳಡಿ ಬರುತ್ತವೆ" ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಇದಲ್ಲದೆ ಇತರೆ ರಾಜ್ಯಗಳಲ್ಲಿರುವಂತೆ ದಿಲ್ಲಿಯಲ್ಲಿ ಲೋಕಸೇವಾ ಆಯೋಗ ಇಲ್ಲದಿರುವುದನ್ನೂ ದಿಲ್ಲಿ ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿದೆ.

ಈ ಕುರಿತು 54 ಪುಟಗಳ ತೀರ್ಪು ನೀಡಿರುವ ನ್ಯಾ. ಚಂದ್ರಧಾರಿ ಸಿಂಗ್, ರಾಜ್ಯಗಳ ಪಟ್ಟಿಯಡಿಯಲ್ಲಿನ ಪಟ್ಟಿ 1, 2, ಮತ್ತು 18 ಹಾಗೂ ಕೇಂದ್ರ ಪಟ್ಟಿಯಡಿಯಲ್ಲಿನ 70 ನಮೂದುಗಳಿಗೆ ಸಂಬಂಧಿಸಿದಂತೆ ದಿಲ್ಲಿ ರಾಜ್ಯ ವಿಧಾನಸಭೆ ಯಾವುದೇ ಶಾಸನಾತ್ಮಕ ಅಧಿಕಾರ ಹೊಂದಿಲ್ಲ. 1991ರ ರಾಷ್ಟ್ರ ರಾಜಧಾನಿ ದಿಲ್ಲಿ ಸರ್ಕಾರ ಆಡಳಿತ ಕಾಯ್ದೆಯ ಸೆಕ್ಷನ್ 41ರ ಅನ್ವಯ ಇಂತಹ ವಿಷಯಗಳ ಕುರಿತು ಲೆಫ್ಟಿನೆಂಟ್ ಗವರ್ನರ್ ತಮ್ಮ ವಿವೇಚನೆಯನ್ವಯ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆಯೇ ಹೊರತು ಸಚಿವ ಸಂಪುಟದ ಶಿಫಾರಸ್ಸಿನಂತಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಇದರೊಂದಿಗೆ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧೀನ ಅಧಿಕಾರಿಗಳಾಗಿದ್ದು, ಇದು ದಿಲ್ಲಿ, ಚಂಡೀಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಡಾಮನ್ ಮತ್ತು ಡಿಯು, ದಾದ್ರಾ ಮತ್ತು ಹವೇಲಿ, ಪುದುಚೇರಿಯಂಥ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಾದ ಅರುಣಾಚಲ ಪ್ರದೇಶ, ಗೋವಾ ಮತ್ತು ಮಿಜೋರಾಂಗಳಿಗೂ ಸಾಮಾನ್ಯವಾಗಿ ಅನ್ವಯವಾಗುವ ಸಂಗತಿಯಾಗಿದೆ. ಇಲ್ಲಿನ ಆಡಳಿತವನ್ನು ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಮೂಲಕ ನಿಯಂತ್ರಿಸುತ್ತದೆ ಎಂದು ಹೈಕೋರ್ಟ್ ಹೇಳಿದೆ.

"ಹೀಗಾಗಿ ದಿಲ್ಲಿ ವಿಧಾನಸಭೆಯು ಸಂವಿಧಾನದ ಪಟ್ಟಿ 2ರ 41 ನಮೂದುಗಳಡಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಸೇವಾ ನೇಮಕಾತಿಗಳು, ವಿಶೇಷವಾಗಿ ಕಾರ್ಯದರ್ಶಿ ಹುದ್ದೆಯಂಥ ಕ್ಷಿಪ್ರ ನೇಮಕಾತಿಗಳು ದಿಲ್ಲಿ ವಿಧಾನಸಭೆಯ ಅಧಿಕಾರ ವ್ಯಾಪ್ತಿಯಿಂದ ಹೊರಗಿವೆ" ಎಂದು ನ್ಯಾ. ಚಂದ್ರಧಾರಿ ಸಿಂಗ್ ತೀರ್ಪು ನೀಡಿದ್ದಾರೆ.

Similar News