ಮಂಡ್ಯ: ಸಿಎಂ ಬೊಮ್ಮಾಯಿ ಪುತ್ಥಳಿಗೆ ರಕ್ತಾಭಿಷೇಕ ಮಾಡಿ ಪ್ರತಿಭಟನೆ ನಡೆಸಿದ ರೈತರ ಬಂಧನ

ಕಬ್ಬುದರ ನಿಗದಿಗೆ ಪಟ್ಟು; ಧರಣಿ ಸ್ಥಳದಿಂದ ಪೆಂಡಾಲ್ ತೆರವುಗೊಳಿಸಿದ ಪೊಲೀಸರು

Update: 2022-12-28 13:56 GMT

ಮಂಡ್ಯ, ಡಿ.28: ಕಬ್ಬುದರ ನಿಗದಿ, ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ 52 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಧರಣಿ ಸ್ಥಳದಿಂದ ಪೆಂಡಾಲ್ ತೆರವುಗೊಳಿಸಿದ ಘಟನೆ ನಡೆಯಿತು.

ಹೋರಾಟಕ್ಕೆ ರಾಜ್ಯ ಸರಕಾರ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಬುಧವಾರ ಧರಣಿ ಸ್ಥಳದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ಥಳಿಯಿಟ್ಟು ರಕ್ತಾಭಿಷೇಕ ಮಾಡುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿದ್ದ ಪೊಲೀಸರು ರೈತರನ್ನು ಬಂಧಿಸಿ, ಪೊಲೀಸ್ ಪೆರೇಡ್ ಮೈದಾನಕ್ಕೆ ಕರೆದೊಯ್ದರು. ಅಲ್ಲದೆ, ಅಹೋರಾತ್ರಿ ಧರಣಿಗೆ ಹಾಕಿದ್ದ ಪೆಂಡಾಲ್ ಕಿತ್ತೆಸೆದರು. ಗಾಂಧೀಜಿ, ಅಂಬೇಡ್ಕರ್, ಪ್ರೊ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ಎನ್.ಡಿ.ಸುಂದರೇಶ್ ಭಾವಚಿತ್ರಗಳು ಚೆಲ್ಲಾಪಿಲ್ಲಿಯಾದವು. ಈ ವೇಳೆ ರಾಷ್ಟ್ರ ನಾಯಕರ ಭಾವಚಿತ್ರಗಳಿಗೆ ಪೊಲೀಸರು ಅಪಮಾನ ಮಾಡಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಬಳಿಕ ಶಾಮಿಯಾನ ಮತ್ತು ಭಾವಚಿತ್ರಗಳನ್ನು ಗೂಡ್ಸ್ ವಾಹನಕ್ಕೆ ಹಾಕಿಕೊಂಡು ಪೊಲೀಸ್ ಸಿಬ್ಬಂದಿ ಸ್ಥಳದಿಂದ ತೆರಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಎಸ್.ಸಿ.ಮಧುಚಂದನ್, ಪ್ರಸನ್ನ ಎನ್ ಗೌಡ, ಲಿಂಗಪ್ಪಾಜಿ, ಬಾಲರಾಜು, ವಿಜಯ್‍ಕುಮಾರ್, ಚಿದಾನಂದ, ಚಂದ್ರು, ವೆಂಕಟೇಶ್, ಎಂ.ವಿ.ಜಗದೀಶ್ ಸೇರಿದಂತೆ ಹಲವು ಕಾರ್ಯತರ್ಕರನ್ನು ಪೊಲೀಸರು ಬಂಧಿಸಿ, ಪೊಲೀಸ್ ಪೆರೇಡ್ ಮೈದಾನದಲ್ಲಿ ಬಿಡುಗಡೆ ಮಾಡಿದರು.

► ಸಿಪಿಐ ಅಮಾನತಿಗೆ ಆಗ್ರಹ

ಬಿಡುಗಡೆಯಾದರೂ ಪೊಲೀಸ್ ಪೆರೇಡ್ ಮೈದಾನದಲ್ಲೇ ಪ್ರತಿಭಟನೆ ಮುಂದುವರಿಸಿದ ರೈತರು, ಪೊಲೀಸರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿದರು. ಸರ್ಕಲ್ ಇನ್ಸ್‍ಪೆಕ್ಟರ್ ಸಂತೋಷ್‍ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತುಪಡಿಸಬೇಕು ಎಂದು ಪಟ್ಟುಹಿಡಿದರು.

ಪೆಂಡಾಲ್ ಜತೆಗೆ ಗಾಂಧೀಜಿ, ಅಂಬೇಡ್ಕರ್, ರೈತ ನಾಯಕರಾದ ಪ್ರೊ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ಎನ್.ಡಿ.ಸುಂದರೇಶ್ ಅವರ ಫೋಟೋಗಳನ್ನು ಕಿತ್ತೆಸೆದು ಅಪಮಾನ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಡಿ.30ರಂದು ಮಂಡ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಬರುತ್ತಿರುವ ಹಿನ್ನೆಲೆಯಲ್ಲಿ ಧರಣಿ ನಡೆಯಬಾರದೆಂದು ಪೊಲೀಸರು ಪೆಂಡಾಲ್ ಕಿತ್ತುಹಾಕಿದ್ದಾರೆ. ರೈತರ ಬಂಧನದ ಫೋಟೋ, ವಿಡೀಯೋ ಮಾಡುತ್ತಿದ್ದ ರೈತರ ಮೇಲೆ ಲಾಠಿ ಬೀಸಿ ಹಲ್ಲೆ ನಡೆಸಿದ್ದಾರೆ ಎಂದು ರೈತರು ಆರೋಪಿಸಿದರು.

ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದೇವೆ. ಹಾಗೆಯೇ ನಗರದಲ್ಲಿ ಡಿ.30ರಂದು ಆಯೋಜಿಸಿರುವ ಬಿಜೆಪಿ ಸಮಾವೇಶಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ರೈತಸಂಘದ ಮುಖಂಡರು ಹೇಳಿದರು.

► ಕಿಸಾನ್ ಕಾಂಗ್ರೆಸ್, ಕರವೇ ಖಂಡನೆ

ಧರಣಿನಿರತ ರೈತರನ್ನು ಬಂಧಿಸಿ ಶಾಮಿಯಾನ ತೆರವುಗೊಳಿಸಿದ ಪೊಲೀಸರ ಕ್ರಮವನ್ನು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್. ಮೋಹನ್‍ಕುಮಾರ್ ಖಂಡಿಸಿದ್ದು, ರಾಜ್ಯ ಸರಕಾರ ದೌರ್ಜನ್ಯದ ಪರಮಾವಧಿ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರಾಯುಧ ಚಳುವಳಿಗಾರರ ಮೇಲೆ ಯಾವುದೇ ದೌರ್ಜನ್ಯ ಮಾಡಲು, ಬಂಧಿಸಲು, ಚಳವಳಿಯನ್ನು  ಹತ್ತಿಕ್ಕಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಸತ್ಯಾಗ್ರಹ ಮಾಡುತ್ತಿದ್ದ ರೈತರನ್ನು ಬಂಧಿಸಿ ಅವರ ಶಾಮಿಯಾನ ಕಿತ್ತು ತುಂಬಿಕೊಂಡು ಹೋಗಿರುವುದು ಸರಕಾರದ ದುರಾಡಳಿತ ಹಾಗೂ ದೌರ್ಜನ್ಯದ ಪ್ರತೀಕವಾಗಿದೆ. ಪೊಲೀಸರು ಸರಕಾರದ ಕೈಗೊಂಬೆಯಂತೆ ವರ್ತಿಸುವುದನ್ನು ಬಿಡಬೇಕು ಎಂದು ಅವರು ಕಿಡಿಕಾರಿದ್ದಾರೆ.

ರೈತರ ಮೇಲೆ ದೌರ್ಜನ್ಯ ಮಾಡಿದ ಸರಕಾರಗಳಿಗೆ ಪಾಠ ಕಲಿಸಿರುವುದನ್ನು ಇತಿಹಾಸ ಹೇಳತ್ತದೆ. ಈ ಸರಕಾರಕ್ಕೂ ಬುದ್ಧಿ ಕಲಿಸಲು ಹಾಗೂ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಶಾಶ್ವತವಾಗಿ ಮನೆಗೆ ಕಳಿಸುವಣತಹ ಕೆಲಸವನ್ನು ರಾಜ್ಯದ ಸ್ವಾಭಿಮಾನಿ ರೈತರು ಮಾಡಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

52 ದಿನದಿಂದ ಹಗಲು ರಾತ್ರಿ, ಬಿಸಿಲು ಮಳೆ ಚಳಿ ಲೆಕ್ಕಿಸದೆ ಕಬ್ಬು ದರ ನಿಗದಿ, ಹಾಲು ದರ ಹೆಚ್ಚಳಕ್ಕೆ ಧರಣಿ ನಡೆಸುತ್ತಿರುವ ರೈತರ ಮೇಲೆ ಪೊಲೀಸರ ದೌರ್ಜನ್ಯ ಖಂಡನೀಯ. ಕೇಂದ್ರ ಸಚಿವರ ಅಮಿತ್ ಶಾ ಮಂಡ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ರೈತರು ನಡೆಸುತ್ತಿರುವ ಹೋರಾಟವನ್ನು ದಮನ ಮಾಡಲಾಗುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮ ಆರೋಪಿಸಿದ್ದಾರೆ.

ಧರಣಿ ಸ್ಥಳದಲ್ಲಿದ್ದ ಅಂಬೇಡ್ಕರ್ ಫೋಟೋಗೆ ಅಪಮಾನ ಮಾಡುವ ಮೂಲಕ ದೇಶದ ಸಂವಿಧಾನಕ್ಕೂ ಬಿಜೆಪಿ ಸರಕಾರ ಅಪಮಾನ ಮಾಡಿದೆ. ಸರಕಾರ ತನ್ನ ಉದ್ಧಟತನ ಬಿಟ್ಟು ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹಾಗೆಯೇ ನಾಡಿನ ಜನರು ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.

“ಮಂಡ್ಯದಲ್ಲಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಏಕಾಏಕಿ ದೌರ್ಜನ್ಯ ನಡೆಸಿ ಬಂಧಿಸಿ, ಪೆಂಡಾಲ್ ಕಿತ್ತೆಸೆದಿದ್ದಾರೆ. ಇದನ್ನು ಖಂಡಿಸಿ ಮಂಡ್ಯದಲ್ಲಿ ಮುಂದುವರಿದಿರುವ ರೈತರ ಪ್ರತಿಭಟನೆಯಲ್ಲಿ ಮೈಸೂರು, ಚಾಮರಾಜನಗರ, ಕೊಡಗು, ರಾಮನಗರ ಸೇರಿದಂತೆ ಇತರ ಜಿಲ್ಲೆಗಳ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಮುಂಖಂಡರು ಭಾಗವಹಿಸಬೇಕು.”

-ಬಡಗಲಪುರ ನಾಗೇಂದ್ರ, ರೈತಸಂಘದ ರಾಜ್ಯಾಧ್ಯಕ್ಷರು.

Similar News