ಕೃಷಿಗೆ ಒತ್ತು ನೀಡಿದ್ದೇವೆ ಎನ್ನುವುದು ಡೋಂಗಿತನ: ಬಿಜೆಪಿ ಸರಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Update: 2022-12-28 16:04 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.28: ನಮ್ಮ ಸರಕಾರದ 800ಕೋಟಿ ರೂ.ಮೊತ್ತದ ಕೃಷಿ ಭಾಗ್ಯ ಯೋಜನೆ, ಅರಿವು ಯೋಜನೆಗಳನ್ನು ನಿಲ್ಲಿಸಿರುವ ಬಿಜೆಪಿ ಸರಕಾರ, ರೈತರ ಮಕ್ಕಳಿಗೆ 600 ಕೋಟಿ ರೂ.ಅನುದಾನದಲ್ಲಿ ವಿದ್ಯಾರ್ಥಿವೇತನ ನೀಡಿ ಕೃಷಿಗೆ ಒತ್ತು ನೀಡಿದ್ದೇವೆ ಎನ್ನುವುದು ಡೋಂಗಿತನವಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ರಾಜ್ಯದಲ್ಲಿ ಕುಂಠಿತಗೊಳ್ಳುತ್ತಿರುವ ಕೃಷಿ ಚಟುವಟಿಕೆಗಳು, ನಷ್ಟದಲ್ಲಿರುವ ರೈತರು, ಸಾಂಕ್ರಾಮಿಕ ರೋಗಗಳಿಂದ ಹಾನಿಗೀಡಾದ ಬೆಳೆಗಳು ಮತ್ತು ಅವುಗಳ ಬಗ್ಗೆ ಸರಕಾರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಮಾತನಾಡಿದರು.

ನಮ್ಮ ಸರಕಾರದ ಕೊನೆಯ ಬಜೆಟ್ ಗಾತ್ರ 2.02 ಲಕ್ಷ ಕೋಟಿ, ನಾವು ಕೃಷಿಗಾಗಿ ಶೇ.4.7ರಷ್ಟು ಹಣವನ್ನು ಮೀಸಲಿಟ್ಟಿದ್ದೆವು. ಈಗಿನ ಬಜೆಟ್ ಗಾತ್ರ 2,65,720 ಕೋಟಿ ರೂ., ಇದರಲ್ಲಿ ಕೃಷಿಗೆ ಇಟ್ಟಿರುವ ಅನುದಾನ ಶೇ.4.2. 2001ರಲ್ಲಿ ಹಿಡುವಳಿದಾರರ ಸಂಖ್ಯೆ 62 ಲಕ್ಷ ಕುಟುಂಬಗಳು. 2016ರಲ್ಲಿ ಅದು 87 ಲಕ್ಷ ಕುಟುಂಬಗಳಾಗಿವೆ. ಹಿಡುವಳಿಯ ಗಾತ್ರ ಕಡಿಮೆಯಾದಂತೆ ಅದರಿಂದ ಬರುವ ಆದಾಯದ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತಿದೆ ಎಂದು ಅವರು ಹೇಳಿದರು.

ಕೃಷಿ ಕುಟುಂಬವೊಂದರ ಸರಾಸರಿ ವಾರ್ಷಿಕ ಆದಾಯ 10,208 ರೂ. ಒಂದು ಕುಟುಂಬದಲ್ಲಿ ನಾಲ್ಕು ಮಂದಿಯಿದ್ದರೆ ಪ್ರತಿಯೊಬ್ಬನ ಮಾಸಿಕ ತಲಾ ಆದಾಯ 2550 ರೂ. ಅಂದರೆ ಒಬ್ಬನ ನಿತ್ಯದ ಆದಾಯ 85 ರೂ. ಅಂತರ್‍ರಾಷ್ಟ್ರೀಯ ಮಾನದಂಡಗಳ ಪ್ರಕಾರ ಒಬ್ಬನ ದೈನಂದಿನ ಆದಾಯ 1.90 ಡಾಲರ್ ಗಿಂತ ಕಡಿಮೆ ಇದ್ದರೆ ಅವರು ಕಡುಬಡವರು ಎಂದು ಅವರು ಹೇಳಿದರು.

ರಾಜ್ಯದ ಜಿಎಸ್‍ಡಿಪಿಗೆ ಪ್ರತಿ ವರ್ಷ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ ಮತ್ತು ರೇಷ್ಮೆ ಎಲ್ಲವೂ ಸೇರಿ ಎರಡೂವರೆ ಲಕ್ಷ ಕೋಟಿ ರೂ.ಕೊಡುಗೆ ನೀಡುತ್ತಿವೆ. ಪ್ರತಿ ವರ್ಷ ಗೊಬ್ಬರ, ಬೀಜ, ಕೀಟನಾಶಕಗಳಿಗೆ ರಾಜ್ಯದ ರೈತರು ಖರ್ಚು ಮಾಡುವ ಹಣ 20 ಸಾವಿರ ಕೋಟಿ ರೂ. ಎಂದು ಅವರು ತಿಳಿಸಿದರು.

ಚರ್ಮಗಂಟು ರೋಗದಿಂದ 21,305 ಜಾನುವಾರು ಬಲಿಯಾಗಿವೆ. ಈ ರಾಸುಗಳಿಗೆ ತತ್ ಕ್ಷಣ ಪರಿಹಾರ ನೀಡಬೇಕು. ಸುಮಾರು 15 ಲಕ್ಷ ಹೆಕ್ಟೇರ್ ಗಳಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಾರೆ, ಸುಮಾರು 25 ಲಕ್ಷ ರೈತ ಕುಟುಂಬಗಳು ಇದರ ಮೇಲೆ ಅವಲಂಬಿತರಾಗಿದ್ದಾರೆ. ರಾಜ್ಯದಲ್ಲಿ 6.5 ಕೋಟಿ ಟನ್ ಕಬ್ಬು ಉತ್ಪಾದನೆಯಾಗುತ್ತದೆ ಎಂದು ಅವರು ತಿಳಿಸಿದರು.

2022-23ರಲ್ಲಿ ಎಫ್‍ಆರ್‍ಪಿ ಬೆಲೆ 3050 ರೂ. ಆಗಿದೆ. ಇಳುವರಿ 10.25 ಎಂದು ನಿಗದಿ ಮಾಡಲಾಗಿದೆ. ಒಂದು ಕಡೆ ಇಳುವರಿಯನ್ನು ಹೆಚ್ಚಿಸಿ, ಮತ್ತೊಂದು ಕಡೆ ಸರಕಾರ 150 ರೂ.ಹೆಚ್ಚಿಗೆ ನೀಡಿದೆ ಎಂದು ಪ್ರಚಾರ ಪಡೆಯುತ್ತಿದೆ. ಒಂದು ಟನ್ ಕಬ್ಬಿನಿಂದ 300 ಕೆ.ಜಿ.ಸಿಪ್ಪೆ ಸಿಗುತ್ತದೆ, ಕೋ ಜನರೇಷನ್ ಇದ್ದರೆ 140 ಯುನಿಟ್ ವಿದ್ಯುತ್ ಉತ್ಪಾದನೆ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರತಿ ಯುನಿಟ್ ವಿದ್ಯುತ್ ಅನ್ನು 4.5 ರಿಂದ 5 ರೂ.ಗೆಮಾರಲಾಗುತ್ತದೆ. 40 ರಿಂದ 45 ಲೀಟರ್ ಮೊಲಾಸಿಸ್ ತಯಾರಾಗುತ್ತದೆ. 25 ಲೀಟರ್ ಎಥೆನಾಲ್ ತಯಾರಾಗುತ್ತದೆ. ಒಂದು ಲೀಟರ್ ಎಥೆನಾಲ್ ಗೆ 65 ರೂ. ಬೆಲೆ ಇದೆ. ಇದರಲ್ಲಿ ನಮಗೆ ಪಾಲು ಬೇಕು ಎಂದು ರೈತರು ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್ ಜೊತೆಗೆ ಶೇ.25ರಷ್ಟು ಎಥೆನಾಲ್ ಬ್ಲೆಂಡ್ ಮಾಡಲು ಅವಕಾಶ ನೀಡಿದೆ. ಈ ಅವಕಾಶ 2030ರ ವರೆಗೆ ಇದೆ. ಸರಕಾರ ಪ್ರತಿ ಟನ್ ಗೆ ಎಫ್‍ಆರ್‍ಪಿ ಬೆಲೆ 3500 ಮಾಡಬೇಕು ಮತ್ತು ಹೋರಾಟ ಮಾಡುತ್ತಿರುವ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯ ಮಾಡಿದರು.

ಭೂತಾನ್, ಬರ್ಮಾ, ವಿಯಟ್ನಾಂ ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ 55 ಸಾವಿರ ರೂ.ಒಂದು ಕ್ವಿಂಟಾಲ್ ಗೆ ಇದ್ದ ಬೆಲೆ ಇಂದು 35 ಸಾವಿರ ದಿಂದ 40 ಸಾವಿರ ರೂ.ಗಳಿಗೆ ಇಳಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಎಲೆಚುಕ್ಕಿ ರೋಗದಿಂದ ಭಾದಿತವಾಗಿರುವ ಅಡಿಕೆ ಬೆಳೆಗಾರರಿಗೆ ಸರಕಾರ ಪರಿಹಾರ ನೀಡಬೇಕು. ಕಾಳು ಮೆಣಸು ಕೆ.ಜಿ 800 ರಿಂದ 500 ರೂ.ಗಳಿಗೆ ಇಳಿದಿದೆ. ಇದನ್ನು ವಿಯೆಟ್ನಾಂ ಇಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಅದನ್ನು ಇದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆ ಬಂದ ನಂತರ ರೈತರು ಸಂತೆಗಳಲ್ಲಿ ಜಾನುವಾರುಗಳನ್ನು ಮಾರಾಟ ಮಾಡದಂತಾಗಿದೆ. ಕೇಂದ್ರ ಸರಕಾರ 3 ಕೃಷಿ ಕಾಯ್ದೆಗಳನ್ನು ವಾಪಾಸ್ ತೆಗೆದುಕೊಂಡಿದೆ. ಆದರೆ ರಾಜ್ಯದಲ್ಲಿ ಎ.ಪಿ.ಎಂ.ಸಿ ಕಾಯ್ದೆಯನ್ನು ರಾಜ್ಯ ಸರಕಾರ ವಾಪಾಸ್ ಪಡೆದುಕೊಂಡಿಲ್ಲ. ಇದರಿಂದ ಎ.ಪಿ.ಎಂ.ಸಿ ಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರೋಗಗಳಿಂದ ನಷ್ಟಕ್ಕೀಡಾದ ತೊಗರಿ, ಅಡಿಕೆ, ರಾಗಿ, ಮೆಕ್ಕೆಜೋಳ ಮುಂತಾದ ಬೆಳೆಗಾರರಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು. ಬೆಂಬಲ ಬೆಲೆ ಅಡಿ ಖರೀದಿಸುವ ಕೃಷಿ ಉತ್ಪನ್ನಗಳ ಪ್ರಮಾಣವನ್ನು ಹೆಚ್ಚು ಮಾಡಬೇಕು. ಸ್ವಾಮಿನಾಥನ್ ವರದಿಯನ್ನು ಯಥಾವತ್ತು ಜಾರಿ ಮಾಡಬೇಕು ಎಂದು ಅವರು ತಿಳಿಸಿದರು.

Similar News