ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ: ಲಿಂಗಾಯತ ಪಂಚಮಸಾಲಿ, ಒಕ್ಕಲಿಗರ ಸೇರ್ಪಡೆ

ಹಿ. ವರ್ಗದ ಪ್ರವರ್ಗ 2 ‘ಸಿ’, 2 ‘ಡಿ’ ಸೃಷ್ಟಿ: ಸಚಿವ ಸಂಪುಟ ನಿರ್ಧಾರ

Update: 2022-12-29 17:33 GMT

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.29: ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯುಎಸ್) ನೀಡಿರುವ ಶೇ.10ರಷ್ಟು ಮೀಸಲಾತಿಯಲ್ಲಿ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳಿಗೂ ಹಂಚಿಕೆ ಮಾಡಲು ಹೊಸದಾಗಿ 2 'ಸಿ' ಮತ್ತು 2 'ಡಿ' ಪ್ರವರ್ಗಗಳನ್ನು ಸೃಷ್ಟಿಸಿ ಮರು ವಿಂಗಡಣೆ ಮಾಡಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿನ ಸಂಪುಟ ಸಭಾ ಮಂದಿರದಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ) ಹಾಗೂ ಹಿಂದುಳಿದ ವರ್ಗಗಳ(ಒಬಿಸಿ) ಪಟ್ಟಿಯಲ್ಲಿ ಇಲ್ಲದ ಆರ್ಥಿಕವಾಗಿ ದುರ್ಬಲರಾಗಿರುವ ಸಮುದಾಯಗಳನ್ನು ಹೊರತುಪಡಿಸಿ ಉಳಿದವರಿಗೆ ಶೇ.10ರ ಇಡಬ್ಲ್ಯೂಎಸ್ ಮೀಸಲಾತಿಯಲ್ಲಿ ಉಳಿಯುವ ಮೀಸಲಾತಿ ಪ್ರಮಾಣದಲ್ಲಿ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮಾತ್ರ ಮೀಸಲಾತಿ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಹಿಂ.ವರ್ಗದ ಪ್ರವರ್ಗ 2 ‘ಸಿ’, 2 ‘ಡಿ’ ಸೃಷ್ಟಿ: ಹಿಂದುಳಿದ ವರ್ಗಗಳ ಪ್ರವರ್ಗ-3 ‘ಎ’ನಲ್ಲಿರುವ ಒಕ್ಕಲಿಗ ಸಮುದಾಯವನ್ನು ಹೊಸದಾಗಿ ವಿಂಗಡಿಸುವ ಪ್ರವರ್ಗ-2 ‘ಸಿ’ಗೆ ಸೇರ್ಪಡೆ ಮಾಡಲಾಗುವುದು. ಅದೇ ರೀತಿಯಲ್ಲಿ ಪ್ರವರ್ಗ-3 ‘ಬಿ’ಯಲ್ಲಿರುವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹೊಸದಾಗಿ ವಿಂಗಡಿಸುವ ಪ್ರವರ್ಗ-2 ‘ಡಿ’ ಅಡಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಅವರು ವಿವರಿಸಿದರು.

ಈ ಮರುವಿಂಗಡಣೆ ಮಾಡಲಿರುವ ಸಮುದಾಯಗಳಿಗೆ ಇಡಬ್ಲ್ಯೂಎಸ್‌ನಲ್ಲಿ ಉಳಿಯುವ ಮೀಸಲಾತಿ ಪ್ರಮಾಣದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರವಷ್ಟೇ ಮೀಸಲಾತಿ ಕಲ್ಪಿಸಲು ನಿರ್ಧರಿಸಿದೆ. 

2011ರ ಜನಗಣತಿ ಅನ್ವಯ ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಅವರ ಜಾತಿ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಕಲ್ಪಿಸಲು ಉದ್ದೇಶಿಸಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾತ್ರ ಈ ಮೀಸಲಾತಿ ಅನ್ವಯವಾಗಲಿದೆ. ಈ ಮೀಸಲಾತಿ ಕಲ್ಪಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇನ್ನೂ ಮರ‍್ನಾಲ್ಕು ತಿಂಗಳಲ್ಲಿ ತನ್ನ ಅಂತಿಮ ವರದಿಯನ್ನು ನೀಡಲಿದ್ದು, ಆ ಬಳಿಕ ಪರಿಶೀಲಿಸಿ ಉಭಯ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯ ಸರಕಾರ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೀಡಿರುವ ಮಧ್ಯಂತರ ವರದಿಯನ್ನು ಒಪ್ಪಿದ್ದು, ಆ ವರದಿಯನ್ನು ಆಧರಿಸಿ ಸಚಿವ ಸಂಪುಟದಲ್ಲಿ ಈ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದ ಮಾಧುಸ್ವಾಮಿ, ಹಿಂದುಳಿದ ಜಾತಿಗಳಿಗೆ ಮೀಸಲಾತಿಗೆ 8.50ಲಕ್ಷ ರೂ. ಆದಾಯದ ಮಿತಿ ವಿಧಿಸಿದೆ ಎಂದರು.

ಲಿಂಗಾಯತ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಗಳು ತಮ್ಮ ತಮ್ಮ ಜಾತಿ ಜನಸಂಖ್ಯೆ ಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಆ ವರ್ಗಗಳನ್ನು ಸಮಾಧಾನಪಡಿಸಲು ಈ ತೀರ್ಮಾನ ಕೈಗೊಂಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಎರಡೂ ಸಮುದಾಯಗಳಿಗೆ ಒಟ್ಟಾರೆ ಶೇ.2 ರಷ್ಟು ಪ್ರಮಾಣದ ಮೀಸಲಾತಿ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದ್ದು, ಇಡಬ್ಲ್ಯೂ ಎಸ್ ಮೀಸಲಾತಿಯಲ್ಲಿನ ಆರ್ಥಿಕ ವಾಗಿ ಹಿಂದುಳಿದ ಬ್ರಾಹ್ಮಣ, ವೈಶ್ಯ ಸೇರಿದಂತೆ ಇನ್ನಿತರ ಸಮುದಾಯಗಳಿಗೆ ನೀಡಿ ಉಳಿಯುವ ಶೇ. 4 ರಷ್ಟು ಪ್ರಮಾಣದ ಮೀಸಲಾತಿಯನ್ನು ಉಭಯ ಸಮುದಾಯಗಳಿಗೆ ಹಂಚಿಕೆ ಮಾಡುವ ಸಾಧ್ಯತೆಗಳಿವೆ.

'ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹೆಚ್ಚುವರಿಯಾಗಿ ಪ್ರವರ್ಗ 2 'ಸಿ' ಮತ್ತು 2 'ಡಿ' ಎಂಬ ಎರಡು ವರ್ಗಗಳನ್ನು ರಚಿಸಲಿದೆ. 2 ಎ ಮತ್ತು 2 ಬಿ ಪ್ರವರ್ಗಗಳು ಹಾಗೂ ಅದರಲ್ಲಿ ಇರುವ ಸಮುದಾಯಗಳಿಗೆ ಯಾವುದೇ ಬಗೆಯ ಅನ್ಯಾಯವಾಗದಂತೆ ಮೀಸಲಾತಿ ಸೌಲಭ್ಯವನ್ನು ಮೇಲ್ಕಂಡ ವರ್ಗಗಳಿಗೆ ಕಲ್ಪಿಸಲಾಗುವುದು. ಈ ಕೋಟಾವನ್ನು ಇಡಬ್ಲ್ಯೂ ಎಸ್ ಅಡಿಯಲ್ಲಿ ಲಭ್ಯವಾಗುವ ಮೀಸಲಾತಿ ಪ್ರಮಾಣದಲ್ಲಿ ಸರಿದೂಗಿಸಲಾಗುವುದು'

- ಮಾಧುಸ್ವಾಮಿ ಕಾನೂನು ಸಚಿವ

Similar News