ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ: ಬಿಜೆಪಿ ಟಿಕೆಟ್ ಬಯಸಿ ಶಾಸಕ ಸಿ.ಟಿ.ರವಿ ಆಪ್ತನಿಂದಲೇ ಅರ್ಜಿ

Update: 2023-01-02 15:22 GMT

ಚಿಕ್ಕಮಗಳೂರು, ಜ.2:  ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದಂತೆ 4 ವಿಧಾನಸಭೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಬಿಜೆಪಿ ಅಭ್ಯರ್ಥಿಗಳು ಎಂಬುದನ್ನು ಪಕ್ಷದ ಜಿಲ್ಲಾ ಮುಖಂಡರೇ ಖಚಿತ ಪಡಿಸಿದ್ದರು. ಆದರೆ ಸೋಮವಾರ ಶಾಸಕ ಸಿ.ಟಿ.ರವಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ದಿಢೀರ್ ಬೆಳವಣಿಗೆಯೊಂದರಲ್ಲಿ ಸಿ.ಟಿ.ರವಿ ಅವರು ತನ್ನ ಆಪ್ತನಿಂದಲೇ ಸವಾಲು ಎದುರಿಸುವಂತಹ ಘಟನೆಗೆ ನಗರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿ ಸಾಕ್ಷಿಯಾಯಿತು. 

4 ಬಾರಿ ಚಿಕ್ಕಮಗಳೂರು ನಗರಸಭೆ ಸದ್ಯರಾಗಿ ಆಯ್ಕೆಯಾಗಿರುವ, ಸದ್ಯ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿರುವ ಸಿ.ಟಿ.ರವಿ ಆಪ್ತರಾಗಿರುವ ಎಚ್.ಡಿ.ತಮ್ಮಯ್ಯ ಅವರೇ ಶಾಸಕ ಸಿ.ಟಿ.ರವಿ ಅವರು ಪ್ರತಿನಿಧಿಸುತ್ತಿರುವ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು,  ಸೋಮವಾರ ಬೆಳಗ್ಗೆ ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ ಜಿಲ್ಲಾ ಕಚೇರಿ ಎದುರು ನಡೆದ ಹೈಡ್ರಾಮದಲ್ಲಿ ಎಚ್.ಡಿ.ತಮ್ಮಯ್ಯ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಅವರಿಗೆ ಮನವಿ ಸಲ್ಲಿಸಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.

ಸೋಮವಾರ ದಿಢೀರ್ ನಡೆದ ಬೆಳವಣಿಗೆಯಲ್ಲಿ ಸಿ.ಟಿ.ರವಿ ಆಪ್ತ ಎಚ್.ಡಿ.ತಮ್ಮಯ್ಯ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿ ಎದುರು ಜಮಾಯಿಸಿದ್ದರು. ಈ ವೇಳೆ ಭಾರೀ ಸಂಖ್ಯೆಯಲ್ಲಿ ತಮ್ಮಯ್ಯ ಬೆಂಬಲಿಗರು ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ಅವರು ಕಾರ್ಯಕ್ರಮದ ನಿಮಿತ್ತ ಕಚೇರಿಯಲ್ಲಿರದ ಹಿನ್ನೆಲೆಯಲ್ಲಿ ತಮ್ಮಯ್ಯ ಸುಮಾರು 2 ಗಂಟೆಗಳ ಕಾಲ ಬಿಜೆಪಿ ಕಚೇರಿಯಲ್ಲಿ ಕಾಯಲಾರಂಭಿಸಿದ್ದರು. ನಂತರ ಕಚೇರಿಗೆ ಆಗಮಿಸಿದ ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ ತಮ್ಮಯ್ಯ, ತಾನು ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ತಮ್ಮನ್ನು ಪರಿಗಣಿಸಬೇಕೆಂದು ಜಿಲ್ಲಾಧ್ಯಕ್ಷರ ಬಳಿ ತಮ್ಮ ನಿಲುವು ವ್ಯಕ್ತಪಡಿಸಿದರು.

ಎಚ್.ಡಿ.ತಮ್ಮಯ್ಯ- ಟಿಕೆಟ್ ಆಕಾಂಕ್ಷಿ

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ಬಿಜೆಪಿ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ಪದ್ಧತಿ ಇಲ್ಲ. ಟಿಕೆಟ್ ಆಕಾಂಕ್ಷಿಯಾಗಿರುವ ವಿಚಾರವನ್ನು ಕೋರ್ ಕಮಿಟಿ ಗಮನಕ್ಕೆ ತರಲಾಗುವುದು. ಟಿಕೆಟ್ ನೀಡುವ ಸಂಬಂಧ ಕೇಂದ್ರದ ಸಂಸದೀಯ ಸಮಿತಿ ನಿರ್ಣಯಕೈಗೊಳ್ಳಲಿದೆ. ಬಿಜೆಪಿ ಶಿಸ್ತುಬದ್ಧ ಪಕ್ಷ ಮತ್ತು ಕಾರ್ಯಕರ್ತರ ಆಧಾರಿತವಾಗಿರುವ ಪಕ್ಷ. ಪಕ್ಷದ ಮುಖಂಡ ಎಚ್.ಡಿ.ತಮ್ಮಯ್ಯ ಅವರು ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಕೋರ್ ಕಮಿಟಿ ಮುಂದೆ ಚರ್ಚೆ ಮಾಡಲಾಗುವುದು ಎಂದರು.

ಎಚ್.ಡಿ.ತಮ್ಮಯ್ಯ ಅವರು ತಮ್ಮ ಅಭಿಪ್ರಾಯವನ್ನು ಪಕ್ಷದ ಮುಂದಿಟ್ಟಿದ್ದು, ಇದರ ಅಂತಿಮ ತೀರ್ಮಾನವನ್ನು ಬಿಜೆಪಿ ಕೇಂದ್ರ ಮುಖಂಡರು ತೀರ್ಮಾನಿಸಲಿದ್ದಾರೆ. ಇಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆಂದು ತಿಳಿಸಿದ ಅವರು, ಪಕ್ಷದ ಅಭ್ಯರ್ಥಿ ಯಾರೇ ಆದರೂ ಉತ್ಸಾಹದಿಂದ ಕಲಸ ಮಾಡೋಣ ಎಂದರು.

ಪಕ್ಷದಲ್ಲಿ ಅನೇಕ ಜವಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಈ ಹಿಂದೆ ನಗರಸಭೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಎಲ್ಲಾ ವಿಚಾರಗಳು ಪಕ್ಷಕ್ಕೆ ತಿಳಿದಿದೆ. ಕಾರ್ಯಕರ್ತರ ಒತ್ತಾಸೆಯಂತೆ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇನೆ.

- ಎಚ್.ಡಿ.ತಮ್ಮಯ್ಯ, ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ
 

Similar News