ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ಇಂದಿನಿಂದ 'ಕನ್ನಡ ನುಡಿ ಜಾತ್ರೆ' ಆರಂಭ

Update: 2023-01-06 05:46 GMT

ಹಾವೇರಿ, ಜ.6: ಸಾಹಿತ್ಯದ ‘ನುಡಿಜಾತ್ರೆ’ ಎಂಬ ಹೆಗ್ಗಳಿಗೆ ಪಾತ್ರವಾಗಿರುವ ‘86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'ಕ್ಕೆ  ಹಾವೇರಿ ನಗರದ ಕನಕ-ಶರೀಫ ಮತ್ತು ಸರ್ವಜ್ಞ ವೇದಿಕೆಯ ಮುಂಭಾಗ  ರಾಷ್ಟ್ರ, ನಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.  

ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಸಾಹಿತ್ಯ ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಹೇಶ್ ಜೋಶಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಬಿ ಹೀರೇಮಠ ಧ್ವಜಾರೋಹಣ ನೆರವೇರಿಸಿದರು.  ನಂತರ ಸಮ್ಮೇಳನಾಧ್ಯಕ್ಷ ಪದ್ಮಶ್ರೀ ಡಾ. ದೊಡ್ಡರಂಗೇಗೌಡರನ್ನು ಭವ್ಯ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, 'ಹಾವೇರಿಗೆ ಆಗಮಿಸಿದ ಸಮ್ಮೇಳಾನಾಧ್ಯಕ್ಷರನ್ನು ಉದ್ದೇಶಿಸಿ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಸಮ್ಮೇಳನದ ಕಾರ್ಯಗಳು ಸುಗಮವಾಗಿ ನಡೆಯಲಿವೆ ಎಂಬ ಉದ್ದೇಶದಿಂದ, ನಿಗದಿತ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನಡೆಸಲಾಗಿದೆ. ಸಮ್ಮೇಳನದಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಉತ್ತಮ ಚರ್ಚೆ ನಡೆಯಲಿವೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಘೋಷಣೆಯನ್ನು ಅರ್ಥಗರ್ಭಿತವಾಗಿ ಜಾರಿಗೆ ತರಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಈ ಸಾಹಿತ್ಯ ಸಮ್ಮೇಳನದ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ನಾಡು ನುಡಿಯ ವಿಚಾರವಾಗಿ ಭಿನ್ನತೆಗಳನ್ನು ಮರೆತು ಎಲ್ಲರೂ ಒಗ್ಗಟ್ಟು ಪ್ರದರ್ಶಸಬೇಕು' ಎಂದರು.

ಪೊಲೀಸ್, ಎನ್.ಸಿ.ಸಿ, ಸೇವಾದಾಳ, ಸ್ಕೌಟ್ ಮತ್ತು ಗೈಡ್ಸ್ ತಂಡಗಳು ಗೌರವ ವಂದನೆ ಸಲ್ಲಿಸಿದವು. ಹೇಮಂತ್ ಎಸ್.ಕೆ. ಸ್ವಾಗತಿಸಿದರು. ನಾಗರಾಜ ಇಚ್ಚಂಗಿ ನಿರೂಪಿಸಿದರು. ಎ.ಎಲ್.ಶೇಖಸುರನುಗಿ. ಅರುಣ್ ಕಾಳಪ್ಪನವರು ಕಾರ್ಯಕ್ರಮ ನಿರ್ವಹಿಸಿದರು.

‘ಸಾಮರಸ್ಯದ ಭಾವ-ಕನ್ನಡದ ಜೀವ’ ವಿಚಾರ ಗೋಷ್ಠಿ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ, ಪುಸ್ತಕ ಮೇಳ ಉದ್ಘಾಟನೆ ಸೇರಿದಂತೆ ಜ.6, 7 ಮತ್ತು 8 ರಂದು ಮೂರು ದಿನಗಳ ಕಾಲ ಹಲವು ಕಾರ್ಯಕ್ರಮಗಳು ನಡೆಯಲಿವೆ. ಸಾಹಿತ್ಯಾಸಕ್ತರಿಗೆ ಸಾಹಿತ್ಯದ ಜೊತೆಗೆ ಉತ್ತರ ಕರ್ನಾಟಕ ಭಾಗದ ಶೇಂಗಾ ಹೋಳಿಗೆ, ಗೋಧಿಹುಗ್ಗಿ ಸೇರಿದಂತೆ ಹತ್ತು ಹಲವು ಭಕ್ಷ್ಯಗಳನ್ನು ಉಣಬಡಿಸಲು ಸಮ್ಮೇಳನ ಸರ್ವ ಸನ್ನದ್ಧವಾಗಿದೆ. 

ಸಾಹಿತ್ಯ ಸಮ್ಮೇಳನವು ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.  

Similar News