"ವಚನಗಳನ್ನು, ತತ್ವ ಪದಕಾರರ ಗೀತೆಗಳನ್ನು ಈಗಲಾದರೂ ಓದಿ. ನಿಮ್ಮ ತಲೆಯೊಳಗಿನ ಕಸ ಕರಗೀತು"

ಡಾ.ಎಸ್.ಎಲ್.ಭೈರಪ್ಪನವರಿಗೊಂದು ಬಹಿರಂಗ ಪತ್ರ

Update: 2023-01-08 05:32 GMT

"ಸಂಸ್ಕೃತ ಭಾಷೆ ಭಾರತದ ಶ್ರೀಮಂತ ಭಾಷೆ. ಅದರಿಂದ ಕನ್ನಡ ಭಾಷೆ ಶ್ರೀಮಂತಗೊಂಡಿದೆ ಹಾಗೂ ಶೇಕಡ ಅರವತ್ತರಷ್ಟು ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದಿವೆ" ಎಂದು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಓದಲಾದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪರ ಭಾಷಣಕ್ಕೆ ಲೇಖಕ, ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಸ್.ಎಲ್.ಭೈರಪ್ಪರಿಗೊಂದು ಬಹಿರಂಗ ಪತ್ರ ಬರೆದಿರುವ ಜಗದೀಶ್ ಕೊಪ್ಪ, ಕನ್ನಡ ಸಾಹಿತ್ಯದ ಕೃಷಿಯಲ್ಲಿ ನಿಮ್ಮಂತಹವರು ಶ್ರೇಷ್ಟತೆಯ ಹಂಗಿಗಾಗಿ ಸಂಸ್ಕೃತ ಭಾಷೆಯಿಂದ ಪ್ರಭಾವಿತರಾಗಿ ಕಥೆ, ಕಾದಂಬರಿ, ಕಾವ್ಯ ರಚಿಸಿದ್ದೀರಿ. ಪಂಡಿತರೆನಿಸಿಕೊಂಡಿದ್ದೀರಿ. ನೀವು ಎಂದಾದರೂ ನಮ್ಮ ಕನ್ನಡ ನೆಲದ ನಮ್ಮ ಜನಪದರ ಭಾಷೆಯನ್ನು ಗಮನಿಸಿದ್ದೀರಾ? ದಕ್ಷಿಣದ ಚಾಮರಾಜನಗರದಿಂದ ಉತ್ತರದ ಬೀದರ್ ವರೆಗೆ ಮತ್ತು ಪೂರ್ವದ ಕೋಲಾರದಿಂದ ಪಶ್ಚಿಮದ ಕರಾವಳಿ ಹಾಗೂ ಬೆಳಗಾವಿಯವರೆಗೆ ಎಷ್ಟೊಂದು ಬಗೆಯ ಕನ್ನಡ ಭಾಷೆ ಇದೆ ಎಂಬುದನ್ನು ಬಲ್ಲಿರಾ? ಎಂದು ಪ್ರಶ್ನಿಸಿದ್ದಾರೆ.

ಹನ್ನೊಂದು ಮತ್ತು ಹನ್ನೆರೆಡನೆಯ ಶತಮಾನದಲ್ಲಿ ಡೋಹರ ಕಕ್ಕಯ್ಯ, ದೇವರ ದಾಸಿಮಯ್ಯನಿಂದ ಹಿಡಿದು ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ ಮತ್ತು ಮುಕ್ತಾಯಕ್ಕರಂತಹ ಮಹನೀಯರ ವಚನಗಳಲ್ಲಿ ಎಷ್ಟು ಸಂಸ್ಕೃತ ಶಬ್ದಗಳಿವೆ ಹುಡುಕಿ ಹೇಳಬಲ್ಲಿರಾ? ಎಂದು ಪ್ರಶ್ನಿಸಿರುವ ಜಗದೀಶ್ ಕೊಪ್ಪ, ತತ್ವ ಪದಕಾರರ ಗೀತೆಗಳನ್ನು ಆಲಿಸಿದ್ದೀರಾ? ಅಥವಾ ಓದಿದ್ದೀರಾ? ಮೌಖಿಕ ಕಾವ್ಯಗಳಾದ ಮಲೆ ಮಹಾದೇಶ್ವರ, ಮೈಲಾರಲಿಂಗ, ಮಂಟೆ ಸ್ವಾಮಿ ಕಾವ್ಯ ಹೀಗೆ ನೂರಾರು ಕಥನ ಕಾವ್ಯಗಳಿವೆ. ಅವುಗಳು ಸಂಸ್ಕೃತ ಭಾಷೆಯಿಂದ ಪ್ರಭಾವಿತವಾದ ಕಾವ್ಯಗಳು ಎಂದು ಹೇಳಬಲ್ಲ ಧೈರ್ಯ ಇದೆಯಾ? ದಯವಿಟ್ಟು ಅವುಗಳನ್ನು ಈಗಲಾದರೂ ಓದಿ. ನಿಮ್ಮ ತಲೆಯೊಳಗಿನ ಕಸ ಕರಗೀತು ಎಂದು ಹೇಳಿದ್ದಾರೆ.

ಉತ್ತರದವರ ಹಂಗಿನಲ್ಲಿ ಈವರೆಗೆ ಬದುಕಿದ್ದು ಸಾಕು. ನೀವು ಹುಟ್ಟಿದ ಚೆನ್ನರಾಯ ಪಟ್ಟಣ ತಾಲೂಕಿನ ಅಥವಾ ಬದುಕುತ್ತಿರುವ ಮೈಸೂರು ಜಿಲ್ಲೆಯ ಗ್ರಾಮೀಣ ಭಾಷೆಯನ್ನು ಒಮ್ಮೆ ಅವಲೋಕಿಸಿ. ನಿಮ್ಮಂತಹವರ ಸಾಹಿತ್ಯ ನಾಟಕದ ಕಲಾವಿದನೊಬ್ಬ ರಾತ್ರಿ ಬಣ್ಣ ಬಳಿದುಕೊಂಡು ಬೆಳಕಾದ ನಂತರ ತೊಳೆದು ಹಾಕುತ್ತಾನಲ್ಲಾ ಅಂತಹದ್ದು. ಜನರ ಎದೆಗೆ ಕಿವಿಯಾಗಿ ಅವರ ನೋವಿಗೆ ಧ್ವನಿಯಾದವರ ಕನ್ನಡ ನುಡಿ ಅಥವಾ ಭಾಷೆಗೆ ಎಂದಿಗೂ ಸಾವಿಲ್ಲ. ಇದಕ್ಕೆ ನಮ್ಮ ಮುಂದಿರುವ ವಚನಗಳೇ ಸಾಕ್ಷಿಯಾಗಿವೆ ಎಂದು ಜಗದೀಶ್ ಕೊಪ್ಪ ಹೇಳಿದ್ದಾರೆ.

ಈ ಬಗ್ಗೆ ಜಗದೀಶ್ ಕೊಪ್ಪ ಅವರ Facebook ಪೋಸ್ಟ್ ಇಲ್ಲಿದೆ...

Full View

Similar News