ಕ್ಷಣಕ್ಷಣಕ್ಕೂ ಮುಳುಗುತ್ತಿರುವ ಜೋಶಿಮಠ

► ಎನ್ಟಿಪಿಸಿ ಯೋಜನೆಯನ್ನು ನಿಲ್ಲಿಸದಿದ್ದೆ ರಕ್ಷಣೆ ಅಸಾಧ್ಯ: ತಜ್ಞರ ಎಚ್ಚರಿಕೆ ► ರಕ್ಷಣೆಗೆ ಕಾರ್ಯತಂತ್ರ ರೂಪಿಸಲು ಕೇಂದ್ರದ ಸಭೆ

Update: 2023-01-08 16:58 GMT

ಹೊಸದಿಲ್ಲಿ, ಜ.8: ಸರಣಿ ಭೂಕುಸಿತಗಳಿಂದಾಗಿ ಉತ್ತರಾಖಂಡದ ‘ಮುಳುಗುತ್ತಿರುವ ಪಟ್ಟಣ’ ಜೋಶಿಮಠದಲ್ಲಿ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಕೇವಲ ಬೆಟ್ಟಗುಡ್ಡಗಳಲ್ಲ, ಇಡೀ ಊರೇ ಕುಸಿಯುವ ಭೀತಿ ಸೃಷ್ಟಿಯಾಗಿದೆ. ಬದರಿಕುಂಡ ಮತ್ತು ಹೇಮಕುಂಡ ಸಾಹಿಬ್ನಂತಹ ಪ್ರಸಿದ್ಧ ಯಾತ್ರಾಸ್ಥಳಗಳಿಗೆ ಹೆಬ್ಬಾಗಿಲಾಗಿರುವ ಜೋಶಿಮಠದಲ್ಲಿ ನೂರಾರು ಮನೆಗಳು ಬಿರುಕು ಬಿಟ್ಟಿವೆ. ಪ್ರಸಿದ್ಧ ಶಂಕರಾಚಾರ್ಯ ಮಠದಲ್ಲಿ 15 ದಿನಗಳಿಂದ ಬಿರುಕುಗಳು ಉಂಟಾಗಿದ್ದು, ಮಠವು ಯಾವಾಗ ಬೇಕಾದರೂ ಕುಸಿಯಬಹುದು.

ಜೋಶಿಮಠವನ್ನು ಭೂಕುಸಿತ ವಲಯವೆಂದು ಘೋಷಿಸಲಾಗಿದೆ ಮತ್ತು ಬೀಳುವ ಸ್ಥಿತಿಯಲ್ಲಿರುವ ಮನೆಗಳಿಂದ 60ಕ್ಕೂ ಅಧಿಕ ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ರವಾನಿಸಲಾಗಿದೆ ಎಂದು ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನಾ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು. ಹಾನಿಯ ವ್ಯಾಪ್ತಿಯನ್ನು ಪರಿಗಣಿಸಿ ಇನ್ನೂ ಕನಿಷ್ಠ 90 ಕುಟುಂಬಗಳನ್ನು ಆದಷ್ಟು ಶೀಘ್ರ ತೆರವುಗೊಳಿಸಬೇಕಿದೆ. ಜೋಶಿಮಠದಲ್ಲಿ ಒಟ್ಟು 4,500 ಕಟ್ಟಡಗಳಿದ್ದು,ಈ ಪೈಕಿ 610 ಕಟ್ಟಡಗಳಲ್ಲಿ ಭಾರೀ ಬಿರುಕುಗಳು ಉಂಟಾಗಿದ್ದು ವಾಸಯೋಗ್ಯವಾಗಿಲ್ಲ ಎಂದರು.

ಜೋಶಿಮಠದ ರಕ್ಷಣೆಗೆ ಕಾರ್ಯತಂತ್ರವನ್ನು ರೂಪಿಸಲು ಪ್ರಧಾನಿ ಕಚೇರಿಯು ರವಿವಾರ ಪುನರ್ಪರಿಶೀಲನಾ ಸಭೆಯನ್ನು ನಡೆಸಿದೆ. ಈ ನಡುವೆ ಜೋಶಿಮಠದ ಸಮೀಪ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಉಷ್ಣ ವಿದುತ್ ನಿಗಮ (ಎನ್ಟಿಪಿಸಿ)ದ ಯೋಜನೆಯ ನಿರ್ಮಾಣವನ್ನು ನಿಲ್ಲಿಸದಿದ್ದರೆ ಈ ಐತಿಹಾಸಿಕ ಪಟ್ಟಣ ಕಣ್ಮರೆಯಾಗಲಿದೆ ಎಂದು ಭೂವಿಜ್ಞಾನಿ ನವೀನ ಜುಯಲ್ ಎಚ್ಚರಿಕೆ ನೀಡಿದ್ದಾರೆ.

ಜೋಶಿಮಠವನ್ನು ಉಳಿಸಲು ಕಾರ್ಯತಂತ್ರಗಳನ್ನು ರೂಪಿಸಲು ಕೇಂದ್ರೀಯ ಏಜೆನ್ಸಿಗಳು ಉತ್ತರಾಖಂಡ ಸರಕಾರಕ್ಕೆ ನೆರವಾಗುತ್ತಿವೆ ಮತ್ತು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಬಲ್ಲ ಮೂಲಗಳು ಪುನರ್ಪರಿಶೀಲನಾ ಸಭೆಯ ಬಳಿಕ ಸುದ್ದಿಸಂಸ್ಥೆಗೆ ತಿಳಿಸಿದವು.

ಬಿಕ್ಕಟ್ಟನ್ನು ನಿಭಾಯಿಸಲು ತಜ್ಞರು ಅಲ್ಪಾವಧಿ,ಮಧ್ಯಮಾವಧಿ ಮತ್ತು ದೀರ್ಘಾವಧಿಯ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
ಎನ್ಡಿಆರ್ಎಫ್ನ ಒಂದು ಮತ್ತು ಎಸ್ಡಿಆರ್ಎಫ್ನ ನಾಲ್ಕು ತಂಡಗಳನ್ನು ಜೋಶಿಮಠದಲ್ಲಿ ನಿಯೋಜಿಸಲಾಗಿದೆ. ಪೀಡಿತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ.

ಗಡಿ ನಿರ್ವಹಣೆ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯರು ಸೋಮವಾರ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪುನರ್ಪರಿಶೀಲಿಸಲಿದ್ದಾರೆ. ಪೀಡಿತ ಪ್ರದೇಶಗಳಿಗೆ ರವಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿಯವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಾರ್ಯಾಚರಣೆಗಳನ್ನು ತ್ವರಿತಗೊಳಿಸಲು ನಿಯಮಗಳನ್ನು ಸಡಿಲಿಸುವಂತೆ ಸೂಚಿಸಿದರು.

ನಿವಾಸಿಗಳ ಬೇಡಿಕೆಯ ಮೇರೆಗೆ ಚಾರ್ಧಾಮ ಸರ್ವ ಋತು ರಸ್ತೆ ಮತ್ತು ಎನ್ಟಿಪಿಸಿಯ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆ ಸೇರಿದಂತೆ ಜೋಷಿಮಠ ಮತ್ತು ಸುತ್ತುಮುತ್ತಲಿನ ಎಲ್ಲ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಜೋಶಿಮಠವು ದೇಶದಲ್ಲಿಯ ಅತ್ಯಂತ ಭೂಕಂಪನ ಕ್ರಿಯಾಶೀಲ ಪ್ರದೇಶಗಳಲ್ಲಿ ಒಂದಾಗಿದ್ದು,ಅದನ್ನು ಅಧಿಕೃತವಾಗಿ ವಲಯ-5 (ಅತ್ಯಂತ ತೀವ್ರ ಭೂಕಂಪ ಪ್ರದೇಶ) ಎಂದು ವರ್ಗೀಕರಿಸಲಾಗಿದೆ.

ತಜ್ಞರ ಎಚ್ಚರಿಕೆ
ಜೋಶಿಮಠದ ಸಮೀಪ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ)ದ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಯನ್ನು ಮತ್ತು ಚಾರ್ಧಾಮ ಸರ್ವ ಋತು ರಸ್ತೆ ನಿರ್ಮಾಣವನ್ನು ಕೈಬಿಡದಿದ್ದರೆ ಈ ಐತಿಹಾಸಿಕ ಪಟ್ಟಣ ಕಣ್ಮರೆಯಾಗಲಿದೆ ಎಂದು ಭೂವಿಜ್ಞಾನಿ ನವೀನ ಜುಯಲ್ ಎಚ್ಚರಿಕೆ ನೀಡಿದ್ದಾರೆ.
ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗಾಗಿ ತಪೋವನದಿಂದ ಮತ್ತು ಸೆಲಾಂಗ್ನಿಂದ ಎರಡು ಸುರಂಗಗಳನ್ನು ಕೊರೆಯಲಾಗುತ್ತಿದೆ.

ಇದಕ್ಕಾಗಿ ಒಂದು ಕಡೆಯಿಂದ ಸ್ಫೋಟಕಗಳನ್ನು ಸಿಡಿಸುತ್ತ ಸುರಂಗ ನಿರ್ಮಾಣಗೊಳ್ಳುತ್ತಿದ್ದರೆ ಸೆಲಾಂಗ್ ಕಡೆಯಿಂದ ಟನೆಲ್ ಬೋರಿಂಗ್ ಮಷಿನ್ (ಟಿಬಿಎಂ) ಬಳಸಿ ಸುರಂಗವನ್ನು ಕೊರೆಯಲಾಗುತ್ತಿದೆ. ಟಿಬಿಎಂ ಈಗಲೂ ಸೆಲಾಂಗ್ನಲ್ಲಿ ಸಿಕ್ಕಿಹಾಕಿಕೊಂಡಿದೆ. ಖಾಸಗಿ ಕಂಪನಿಯು ಈ ಕಾಮಗಾರಿಯನ್ನು ನಡೆಸುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ವೆಬಿನಾರ್ನಲ್ಲಿ ಮಾತನಾಡಿದ ಜುಯಲ್ ಹೇಳಿದರು.

ಸ್ಯಾಟಲೈಟ್ ಇಮೇಜರಿ ಮೂಲಕ ಜೋಶಿಮಠದ ಅಧ್ಯಯನ ನಡೆಸುವಂತೆ ಮತ್ತು ಚಿತ್ರಗಳ ಸಹಿತ ವಿವರವಾದ ವರದಿಯನ್ನು ಸಲ್ಲಿಸುವಂತೆ ಹೈದರಾಬಾದ್ನ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ ಮತ್ತು ಡೆಹ್ರಾಡೂನ್ನ ಭಾರತೀಯ ದೂರ ಸಂವೇದಿ ಸಂಸ್ಥೆಗೆ ಸೂಚಿಸಲಾಗಿದೆ.

ಜೋಶಿಮಠದ ಇಂದಿನ ದುಃಸ್ಥಿತಿಗೆ ಹವಾಮಾನ ಬದಲಾವಣೆ ಮತ್ತು ನಿರಂತರ ಮೂಲಸೌಕರ್ಯ ಅಭಿವೃದ್ಧಿಯನ್ನು ದೂಷಿಸಬೇಕು ಸ್ಥಳೀಯರು.

ಜೋಶಿಮಠದಲ್ಲಿ ಮತ್ತು ಸುತ್ತುಮುತ್ತಲೂ ಜಲವಿದ್ಯುತ್ ಯೋಜನೆಗಳು ಸೇರಿದಂತೆ ಬೃಹತ್ ನಿರ್ಮಾಣ ಕಾಮಗಾರಿಗಳು ಭೂಕುಸಿತಗಳಿಗೆ ಕಾರಣವಾಗಬಹುದು ಮತ್ತು ಇಡೀ ಪಟ್ಟಣವು ಮುಳುಗಬಹುದು ಎಂದು ತಜ್ಞರು ವರ್ಷಗಳಿಂದಲೇ ಎಚ್ಚರಿಕೆಗಳನ್ನು ನೀಡುತ್ತಲೇ ಬಂದಿದ್ದರು.

ಕುಸಿಯುತ್ತಿರುವ ಜೋಷಿಮಠ ಭೂಕುಸಿತ ವಲಯವೆಂದು ಘೋಷಣೆ, 
60 ಕುಟುಂಬಗಳ ಸ್ಥಳಾಂತರ: 

ಉತ್ತರಾಖಂಡದ ಜೋಷಿ ಮಠವನ್ನು ಭೂ ಕುಸಿತದ ವಲಯ ಎಂದು ಘೋಷಿಸಲಾಗಿದ್ದು, ಇಲ್ಲಿನ ಹಾನಿಗೀಡಾದ ಮನೆಯಲ್ಲಿ ವಾಸಿಸುತ್ತಿದ್ದ 60ಕ್ಕೂ ಅಧಿಕ ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿ ರವಿವಾರ ತಿಳಿಸಿದ್ದಾರೆ. 

ಈ ನಡುವೆ ಚಮೋಲಿ ಜಿಲ್ಲಾಧಿಕಾರಿ ಹಿಮಾಂಶು ಖುರಾನ ಅವರು ಹಾನಿಯ ಪ್ರಮಾಣವನ್ನು ಅಂದಾಜಿಸಲು ಸಂತ್ರಸ್ತ ಪ್ರದೇಶಗಳ ಮನೆ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಬಿರುಕು ಮೂಡಿದ ಮನೆಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. ವಾಸಯೋಗ್ಯವಲ್ಲದ ಮನೆಗಳಲ್ಲಿ ವಾಸಿಸುತ್ತಿದ್ದ 60ಕ್ಕೂ ಅಧಿಕ ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 

ಹಾನಿಯ ಪ್ರಮಾಣವನ್ನು ಅಂದಾಜಿಸಿದ ಬಳಿಕ ಕನಿಷ್ಠ 90 ಕುಟುಂಬಗಳನ್ನು ಆದಷ್ಟು ಶೀಘ್ರದಲ್ಲಿ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಜೋಷಿಮಠದಲ್ಲಿ ಒಟ್ಟು 4,500 ಕಟ್ಟಡಗಳಿವೆ. ಇವುಗಳಲ್ಲಿ 610 ಕಟ್ಟಡಗಳಲ್ಲಿ ದೊಡ್ಡ ಬಿರುಕು ಉಂಟಾಗಿದೆ. ಇದರಿಂದ ಈ ಕಟ್ಟಡಗಳು ಜನವಾಸಕ್ಕೆ ಯೋಗ್ಯವಾಗಿಲ್ಲ. ಸಮೀಕ್ಷೆ ನಡೆಯುತ್ತಿದೆ. 

ಹಾನಿಗೀಡಾದ ಕಟ್ಟಡಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಜೋಷಿಮಠದ ನಾಲ್ಕೈದು ಸುರಕ್ಷಿತ ಸ್ಥಳಗಳಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ. ಸುಮಾರು 1,500 ಜನರಿಗೆ ವಾಸ್ತವ್ಯ ಕಲ್ಪಿಸಲು ಇನ್ನೂ ಕೆಲವು ಹೊಟೇಲ್ಗಳು, ಗುರುದ್ವಾರ, ಕಾಲೇಜುಗಳು ಸೇರಿದಂತೆ ಕೆಲವು ಕಟ್ಟಡಗಳನ್ನು ತಾತ್ಕಾಲಿಕ ಆಶ್ರಯ ತಾಣಗಳನ್ನಾಗಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ‘‘ಜೋಷಿ ಮಠದಲ್ಲಿ ಕೆಲವು ಸಮಯದಿಂದ ಭೂಮಿ ನಿಧಾನವಾಗಿ ಕುಸಿಯುತ್ತಿದೆ. ಆದರೆ, ಕಳೆದ ವಾರ ಮನೆಗಳು, ಹೊಲ, ರಸ್ತೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ. ನೆಲದ ಅಡಿಯಲ್ಲಿ ಕಳೆದ ವಾರ ನೀರಿನ ಕಾಲುವೆಯನ್ನು ರೂಪಿಸಿದ ಬಳಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ಹಿಮಾಂಶು ಖುರಾನ ತಿಳಿಸಿದ್ದಾರೆ.

Similar News