ಸರಕಾರಿ ಪಿಯು ಕಾಲೇಜುಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ ಶೇ.50ಕ್ಕೂ ಅಧಿಕ ಕುಸಿತ

ಹಿಜಾಬ್ ಪ್ರತಿಭಟನೆಗೆ ನಾಂದಿ ಹಾಡಿದ್ದ ಉಡುಪಿ ಜಿಲ್ಲೆ

Update: 2023-01-09 06:26 GMT

ಬೆಂಗಳೂರು, ಜ.8: ಉನ್ನತ ಶಾಲಾ ಶಿಕ್ಷಣದಲ್ಲಿ ಹಿಜಾಬ್‌ಗಳನ್ನು ನಿಷೇಧಿಸಿ ರುವ ಕರ್ನಾಟಕ ಸರಕಾರದ ನಿರ್ಧಾರವು ಪರೀಕ್ಷೆಗಳಿಗೆ ಹಾಜರಾತಿ ಅಥವಾ ವಿದ್ಯಾರ್ಥಿನಿಯರ ದಾಖಲಾತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಬಹುದು, ಅದರೆ ಹಿಜಾಬ್ ಪರ ಮತ್ತು ವಿರೋಧಿ ಪ್ರತಿಭಟನೆಗಳ ಕೇಂದ್ರಬಿಂದುವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಸರಕಾರಿ ಪದವಿಪೂರ್ವ ಕಾಲೇಜುಗಳನ್ನು ತೊರೆದು ಖಾಸಗಿ ಪ.ಪೂ.ಕಾಲೇಜುಗಳಿಗೆ ಸೇರಿದ್ದಾರೆ ಎಂದು indianexpress.com ವರದಿ ಮಾಡಿದೆ.

ಲಭ್ಯ ದತ್ತಾಂಶಗಳಂತೆ ಉಡುಪಿ ಜಿಲ್ಲೆಯಾದ್ಯಂತದ ಎಲ್ಲ ಪ.ಪೂ.ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗೆ ಪ್ರವೇಶ ಪಡೆದಿರುವ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ 2021-22ರಲ್ಲಿ (1,296) ಮತ್ತು 2022-23 (1,320) ಹೆಚ್ಚುಕಡಿಮೆ ಒಂದೇ ಆಗಿದ್ದರೆ ಸರಕಾರಿ ಪ.ಪೂ.ಕಾಲೇಜುಗಳಲ್ಲಿ ಅವರ ಪ್ರವೇಶಾತಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಕುಸಿದಿದೆ,ಸಂಖ್ಯೆಯು ಕಳೆದ ಐದು ವರ್ಷಗಳಲ್ಲಿಯೇ ಕನಿಷ್ಠವಾಗಿದೆ.

2021-22ನೇ ಸಾಲಿನಲ್ಲಿ 388 ಮುಸ್ಲಿಮ್ ವಿದ್ಯಾರ್ಥಿಗಳು ಉಡುಪಿಯ ಸರಕಾರಿ ಪ.ಪೂ.ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶವನ್ನು ಪಡೆದಿದ್ದರೆ 2022-23ನೇ ಸಾಲಿನಲ್ಲಿ ಅವರ ಸಂಖ್ಯೆ 186ಕ್ಕೆ ಕುಸಿದಿದೆ. ಲಿಂಗವಾರು ಹೇಳುವುದಾದರೆ 2021-22ನೇ ಸಾಲಿನಲ್ಲಿ 178 ಮುಸ್ಲಿಮ್ ಬಾಲಕಿಯರು ಸರಕಾರಿ ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಸೇರಿದ್ದರೆ 2022-23ರಲ್ಲಿ ಅವರ ಸಂಖ್ಯೆ 91ಕ್ಕೆ ಇಳಿದಿದೆ. ಇದೇ ರೀತಿ ಮುಸ್ಲಿಮ್ ಬಾಲಕರ ಸಂಖ್ಯೆ 210ರಿಂದ 95ಕ್ಕೆ ಇಳಿದಿದೆ.

ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಖಾಸಗಿ (ಅಥವಾ ಅನುದಾನರಹಿತ) ಪ.ಪೂ.ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಮುಸ್ಲಿಮ್ ವಿದ್ಯಾರ್ಥಿಗಳ ಪ್ರವೇಶದಲ್ಲಿ ಏರಿಕೆಯಾಗಿದೆ. 2021-22ರಲ್ಲಿ 662 ವಿದ್ಯಾರ್ಥಿಗಳು ಅನುದಾನರಹಿತ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೆ ಸೇರಿದ್ದರೆ 2022-23ರಲ್ಲಿ ಈ ಸಂಖ್ಯೆ 927ಕ್ಕೆ ಏರಿಕೆಯಾಗಿದೆ. ಲಿಂಗವಾರು ವಿಭಜನೆಯಂತೆ ಮುಸ್ಲಿಮ್ ಬಾಲಕರ ಪ್ರವೇಶಗಳು 334ರಿಂದ 440ಕ್ಕೆ ಏರಿದ್ದರೆ, ಬಾಲಕಿಯರ ಸಂಖ್ಯೆ 328ರಿಂದ 487ಕ್ಕೆ ಏರಿಕೆಯಾಗಿದೆ.

ಉದಾಹರಣೆಗೆ ಉಡುಪಿಯು ಸಾಲಿಹಾತ್ ಪಿಯು ಕಾಲೇಜಿನಲ್ಲಿ 2021-22ರಲ್ಲಿ 30 ಮತ್ತು 2022-23ರಲ್ಲಿ 57 ಮುಸ್ಲಿಮ್ ಬಾಲಕಿಯರು ಪ್ರಥಮ ಪಿಯುಸಿಗೆ ಸೇರಿದ್ದಾರೆ. ‘ಇದೇ ಮೊದಲ ಬಾರಿಗೆ ನಮ್ಮ ಪಿಯು ಕಾಲೇಜಿನಲ್ಲಿ ಮುಸ್ಲಿಮ್ ಬಾಲಕಿಯರ ದಾಖಲಾತಿ ದ್ವಿಗುಣಗೊಂಡಿದೆ.

ಹಿಜಾಬ್ ಸಮಸ್ಯೆಯು ಅವರನ್ನು ಹೇಗೆ ವೈಯಕ್ತಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಭಾವಿಸಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ’ಎಂದು ಸಾಲಿಹಾತ್ ಗ್ರೂಪ್ ಆಫ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಅಸ್ಲ್ಲಮ್ ಹೈಕಾಡಿ ಹೇಳಿದರು.

ಬಾಲಕರಲ್ಲಿಯೂ ಈ ಪ್ರವೃತ್ತಿ ಕಂಡು ಬಂದಿದೆ. ತಮ್ಮ ಮಕ್ಕಳು ಹಿಜಾಬ್ ಕುರಿತು ಯಾವುದೇ ಪ್ರತಿಭಟನೆಯಿಂದ ದೂರವಿರಬೇಕು ಎಂದು ಪೋಷಕರು ಬಯಸಿರುವುದು ಇದಕ್ಕೆ ಕಾರಣವಾಗಿರಬಹುದು. ಉಡುಪಿಯ ಸರಕಾರಿ ಪಿಯು ಕಾಲೇಜುಗಳಲ್ಲಿ ಹಿಜಾಬ್ ಕೋಮುವಾದ ಮತ್ತು ರಾಜಕೀಯಕರಣಕ್ಕೆ ತುತ್ತಾಗಿರುವುದನ್ನು ಪರಿಗಣಿಸಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಮ್ಮ ಮಕ್ಕಳು ಖಾಸಗಿ ಪಿಯು ಕಾಲೇಜುಗಳಲ್ಲಿ ಶಿಕ್ಷಣ ಮತ್ತು ಶಿಸ್ತಿನ ಮೇಲೆ ಗಮನ ಕೇಂದ್ರೀಕರಿಸಲಿ ಎಂದು ಪೋಷಕರು ನಿರ್ಧರಿಸಿರಬಹುದು ಎಂದು ಇನ್ನೊಂದು ಖಾಸಗಿ ಶಿಕ್ಷಣ ಸಂಸ್ಥೆ ಅಲ್-ಇಹ್ಸಾನ್ ಪಿಯು ಕಾಲೇಜಿನ ಪ್ರಾಂಶುಪಾಲ ಹಬೀಬ್ ರಹಮಾನ್ ಹೇಳಿದರು. 

ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಂಪರ್ಕಿಸಿದಾಗ, ‘ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಾವು ಅವರ ಧರ್ಮ, ಜಾತಿ ಅಥವಾ ಜನಾಂಗವನ್ನು ನೋಡದೆ ಒಟ್ಟಾರೆ ವಿದ್ಯಾರ್ಥಿಗಳ ಪ್ರವೃತ್ತಿಯನ್ನು ನೋಡುತ್ತೇವೆ. ನಾವು ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ವಿಭಾಗದ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವುದಿಲ್ಲ ಮತ್ತು ಅವರಿಗೆ ಪ್ರವೇಶ ಸಂಖ್ಯೆಗಳನ್ನು ನಿರ್ಧರಿಸುವುದಿಲ್ಲ. 

ಅಂತಿಮವಾಗಿ, ವಿದ್ಯಾರ್ಥಿಗಳ ಹಿನ್ನೆಲೆ ಏನೇ ಇದ್ದರೂ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ನಾವು ಬಯಸುತ್ತೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸರಕಾರಿ ಪಿಯು ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳ ಒಟ್ಟಾರೆ ಪ್ರವೇಶ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ನಾವು ಭಾವಿಸಿದ್ದೇವೆ. ಆದರೂ ಉಡುಪಿ ಜಿಲ್ಲೆಯ ಸರಕಾರಿ ಪಿಯು ಕಾಲೇಜುಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದ್ದರೆ ಅದನ್ನು ನಾವು ಪರಿಶೀಲಿಸುತ್ತೇವೆ’ ಎಂದು ಹೇಳಿದರು.

ರಾಜ್ಯದಲ್ಲಿಯ ಶಾಲಾಕಾಲೇಜುಗಳಿಗೆ ಹೋಗುತ್ತಿರುವ ಮುಸ್ಲಿಮ್ ಬಾಲಕಿಯರ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯಿರುವಾಗ ಈ ಪ್ರವೃತ್ತಿ ಕಂಡು ಬಂದಿದೆ. ಸಮೀಕ್ಷೆಗಳಂತೆ ಉನ್ನತ ಶಿಕ್ಷಣದಲ್ಲಿ ಮುಸ್ಲಿಮ್ ಮಹಿಳೆ ಯರ ಒಟ್ಟು ಹಾಜರಾತಿ ಅನುಪಾತ (ಜಿಎಆರ್)ವು 2007-08ರಲ್ಲಿ ಇದ್ದ ಶೇ.1.1ರಿಂದ 2017-18ರಲ್ಲಿ ಶೇ.15.8ಕ್ಕೆ ಏರಿಕೆಯಾಗಿದೆ. 

ಇಲ್ಲಿ ಜಿಎಆರ್ 18ರಿಂದ 23 ವರ್ಷ ವಯಸ್ಸಿನ ಒಟ್ಟು ಮುಸ್ಲಿಮ್ ಮಹಿಳೆ ಯರು ಮತ್ತು ಆ ವಯೋಗುಂಪಿನಲ್ಲಿ ಕಾಲೇಜುಗಳಿಗೆ ಹಾಜರಾಗು ತ್ತಿರುವ ಮುಸ್ಲಿಮ್ ಮಹಿಳೆಯರ ಅನುಪಾತವಾಗಿದೆ. ಅಲ್ಲದೆ,ಎಲ್ಲ ನೋಂದಾ ಯಿತ ಮುಸ್ಲಿಮ್ ವಿದ್ಯಾರ್ಥಿನಿಯರು 2022ರಲ್ಲಿ ನಡೆದಿದ್ದ ಅಂತಿಮ ಪರೀಕ್ಷೆಗಳಿಗೆ ಹಾಜರಾಗಿದ್ದರು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Similar News