ಪೌರತ್ವಕಾಯ್ದೆಯ 6ಎ ಪರಿಚ್ಛೇದ ಸಾಂವಿಧಾನಿಕವೇ ಎಂದು ಪರಿಶೀಲಿಸುತ್ತೇವೆ: ಸುಪ್ರೀಂ ಕೋರ್ಟ್

Update: 2023-01-10 16:44 GMT

ಹೊಸದಿಲ್ಲಿ, ಜ. 10: ಪೌರತ್ವಕಾಯ್ದೆಯ 6ಎ ಪರಿಚ್ಚೇದವು ಸಾಂವಿಧಾನಿಕವೇ ಎನ್ನುವುದನ್ನು ಮೊದಲು ಪರಿಶೀಲಿಸುತ್ತೇವೆ ಹಾಗೂ ನಂತರ ಉಳಿದ ವಿಷಯಗಳನ್ನು ಎತ್ತಿಕೊಳ್ಳುತ್ತೇವೆ ಎಂದು ಸುಪ್ರಿಂ ಕೋರ್ಟ್‌ನ ಸಾಂವಿಧಾನಿಕ ಪೀಠವೊಂದು ಮಂಗಳವಾರಹೇಳಿದೆ.

ಪೌರತ್ವಕಾಯ್ದೆಯ 6ಎ ಪರಿಚ್ಛೇದವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಂಡ ಬಳಿಕ ಐವರು ಸದಸ್ಯರ ಪೀಠವು ಈ ಹೇಳಿಕೆ ನೀಡಿದೆ.

‘‘1955ರ ಪೌರತ್ವಕಾಯ್ದೆಯ 6ಎ ಪರಿಚ್ಛೇದವು ಸಾಂವಿಧಾನಿಕವಾಗಿ ಮೌಲಿಕವಾಗಿದೆಯೇ ಎನ್ನುವುದನ್ನು ಮುಖ್ಯವಾಗಿ ನಿರ್ಧರಿಸುವುದಕ್ಕಾಗಿ ಅರ್ಜಿಯನ್ನು ಸಾಂವಿಧಾನಿಕ ಪೀಠದ ಮುಂದೆಇರಿಸಲಾಗಿದೆ’’ ಎಂದುಸಾಂವಿಧಾನಿಕ ಪೀಠದ ನೇತೃತ್ವವಹಿಸಿರುವ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಹೇಳಿದರು. ಈ ಪೀಠದಲ್ಲಿರುವ ಇತರ ನ್ಯಾಯಾಧೀಶರೆಂದರೆ ಎಮ್.ಆರ್. ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿಮತ್ತು ಪಿ.ಎಸ್. ನರಸಿಂಹ.

ಮಹಾರಾಷ್ಟ್ರದಲ್ಲಿ ಶಿವಸೇನೆಯಲ್ಲಿ ಉಂಟಾಗಿರುವ ಒಡಕು ಮತ್ತು ನಂತರದ ಬೆಳವಣಿಗೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಪೂರ್ಣಗೊಂಡ ಬಳಿಕ, ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ಹೇಳಿತು.ಮಹಾರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳ ವಿಚಾರಣೆಯನ್ನು ನ್ಯಾಯಾಲಯವು ಫೆಬ್ರವರಿ 14ರಂದು ಆರಂಭಿಸಲಿದೆ.

ಅಸ್ಸಾಮ್ ಒಪ್ಪಂದದ ವ್ಯಾಪ್ತಿಯಲ್ಲಿಬರುವ ವ್ಯಕ್ತಿಗಳ ಪೌರತ್ವಕ್ಕೆ ಸಂಬಂಧಿಸಿದ ವಿಶೇಷ ವಿಧಿಗಳು 6ಎ ಪರಿಚ್ಛೇದದಡಿ ಬರುತ್ತವೆ. 1966 ಜನವರಿ 1ರಂದು ಮತ್ತು ನಂತರ ಆದರೆ 1971 ಮಾಚ್ 25ರ ಮೊದಲು ನಿರ್ದಿಷ್ಟ ಭೂಭಾಗದಿಂದ (1985ರ ಪೌರತ್ವ (ತಿದ್ದುಪಡಿ) ಕಾಯ್ದೆಯು ಜಾರಿಗೆಬರುವ ಸಮಯದಲ್ಲಿ ಬಾಂಗ್ಲಾದೇಶದ ಯಾವುದೇ ಸ್ಥಳವು ಈ ‘ಭೂಭಾಗ’ದ ವ್ಯಾಪ್ತಿಯಲ್ಲಿತ್ತು) ಅಸ್ಸಾಮ್‌ಗೆ ಬಂದಿರುವ ಹಾಗೂ ಬಳಿಕ ಅಸ್ಸಾಮ್‌ನಲ್ಲಿ ವಾಸವಾಗಿರುವ ಎಲ್ಲರೂ ಭಾರತದ ಪೌರತ್ವಕ್ಕಾಗಿ ತಮ್ಮನ್ನು 18ನೇ ಪರಿಚ್ಛೇದದಡಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು 6ಎ ಪರಿಚ್ಚೇದ ಹೇಳುತ್ತದೆ.

ಭಾರತ ಸರಕಾರ ಮತ್ತು ಅಸ್ಸಾಮ್‌ನಲ್ಲಿ ಚಳವಳಿ ನಡೆಸುತ್ತಿದ್ದ ಗುಂಪುಗಳ ನಡುವೆ ಏರ್ಪಟ್ಟ ಅಸ್ಸಾಮ್ ಒಪ್ಪಂದಕ್ಕೆ ಸಹಿ ಬಿದ್ದ ಬಳಿಕ, 1985ರಲ್ಲಿ 6ಎ ಪರಿಚ್ಛೇದವು ಚಾಲನೆಗೆ ಬಂತು.

Similar News