ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ತಯಾರಿಕೆ ಮತ್ತು ಮಾರಾಟದ ಮೇಲಿನ ನಿಷೇಧ ರದ್ದು

Update: 2023-01-11 16:53 GMT

ಮುಂಬೈ,ಜ.11: ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಬೇಬಿ ಪೌಡರ್‌ನ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿದ್ದ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಇಲಾಖೆ (ಎಫ್‌ಡಿಎ)ಯ ಆದೇಶವನ್ನು ಬಾಂಬೆ ಉಚ್ಚ ನ್ಯಾಯಾಲಯವು ಬುಧವಾರ ರದ್ದುಗೊಳಿಸಿದೆ.

ಮುಂಬೈನ ಮುಳುಂಡ್ ಪ್ರದೇಶದಲ್ಲಿಯ ತನ್ನ ಫ್ಯಾಕ್ಟರಿಯಲ್ಲಿ ಬೇಬಿ ಪೌಡರ್ ತಯಾರಿಕೆಯ ಪರವಾನಿಗೆಯನ್ನು ರದ್ದುಗೊಳಿಸುವ ಸೆ.2022ರ ಎಫ್‌ಡಿಎ ನಿರ್ಧಾರದ ವಿರುದ್ಧ ಜಾನ್ಸನ್ ಆ್ಯಂಡ್ ಜಾನ್ಸನ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಬೇಬಿ ಪೌಡರ್‌ನ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪಿಎಚ್ ಮಟ್ಟಗಳಿರುವುದು ಬೆಳಕಿಗೆ ಬಂದಿದೆ ಎಂದು ಎಫ್‌ಡಿಎ ಪ್ರತಿಪಾದಿಸಿತ್ತು. ಪಿಎಚ್ ಮಟ್ಟವು ವಸ್ತುವು ಆಮ್ಲೀಯವೇ ಅಥವಾ ಕ್ಷಾರಿಯವೇ ಎನ್ನುವುದನ್ನು ನಿರ್ಧರಿಸುತ್ತದೆ.

2019,ನವಂಬರ್‌ನಲ್ಲಿ ಉತ್ಪನ್ನದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದ ಎಫ್‌ಡಿಎ 2021ರಲ್ಲಿ ಕಂಪನಿಗೆ ಶೋಕಾಸ್ ನೋಟಿಸ್‌ನ್ನು ನೀಡಿತ್ತು. ಕಳೆದ ವರ್ಷದ ಸೆ.15ರಂದು ಅದು ಉತ್ಪನ್ನದ ಪರವಾನಿಗೆಯನ್ನು ರದ್ದುಗೊಳಿಸಿತ್ತು.

ತನ್ನ ಬೇಬಿ ಪೌಡರ್‌ನ ತಯಾರಿಕೆ ಮತ್ತು ಮಾರಾಟಕ್ಕೆ ಜಾನ್ಸನ್ ಆ್ಯಂಡ್ ಜಾನ್ಸನ್‌ಗೆ ಬುಧವಾರ ಅನುಮತಿ ನೀಡಿದ ನ್ಯಾಯಮೂರ್ತಿಗಳಾದ ಗೌತಮ ಪಟೇಲ್ ಮತ್ತು ಎಸ್.ಜಿ.ದಿೆ ಅವರ ವಿಭಾಗೀಯ ಪೀಠವು,ಪ್ರಕರಣದಲ್ಲಿ ಆದೇಶ ಹೊರಬಿದ್ದ ಎರಡು ವರ್ಷಗಳ ಬಳಿಕ ಪರವಾನಿಗೆಯನ್ನು ರದ್ದುಗೊಳಿಸಿದ್ದಕ್ಕಾಗಿ ಎಫ್‌ಡಿಎ ಅನ್ನು ತರಾಟೆಗೆತ್ತಿಕೊಂಡಿತು.

‘ನಿರ್ದಿಷ್ಟ ಕ್ರಮವನ್ನು ಅನಗತ್ಯವಾಗಿ ಎರಡು ವರ್ಷಗಳ ಕಾಲ ವಿಳಂಬಿಸಲಾಗಿದೆ. ಬೇಬಿ ಪೌಡರ್‌ನ ಎಲ್ಲ ಬ್ಯಾಚ್‌ಗಳ ಉತ್ಪಾದನೆಯನ್ನು ನಿಲ್ಲಿಸುವ ಅತಿರೇಕದ ಕ್ರಮವನ್ನು ಸಮರ್ಥಿಸಿಕೊಳ್ಳಲು ಒಂದೇ ಬ್ಯಾಚ್‌ನ ಉದಾಹರಣೆಯನ್ನು ಮರಳಿ ನೆಚ್ಚಿಕೊಳ್ಳಲು ಈಗ ಕಾಲವು ಮೀರಿದೆ. ಆಕ್ಷೇಪಾರ್ಹ ಆದೇಶಗಳನ್ನು ಉಳಿಸಿಕೊಳ್ಳಬಹುದು ಎನ್ನುವುದನ್ನು ನಾವು ನಂಬುವುದಿಲ್ಲ ’ಎಂದು ಹೇಳಿದ ನ್ಯಾಯಾಲಯವು,ಸಾರ್ವಜನಿಕ ಉದ್ದೇಶ,ಕಲ್ಯಾಣ ಮತ್ತು ಗ್ರಾಹಕ ಸಂರಕ್ಷಣೆ ಕಾನೂನಿನ ಹೃದಯಭಾಗವಾಗಿದೆ. ತೀವ್ರ ವಿಳಂಬವಾಗಿದೆ. ನಾವು ಅದನ್ನು ಅಸಮಂಜಸ ಮತ್ತು ಆ ಕಾರಣಕ್ಕಾಗಿ ನಿರಂಕುಶ ಎಂದು ನೋಡುತ್ತೇವೆ. ಎಫ್‌ಡಿಎಯಂತಹ ಕಾವಲು ನಾಯಿಯನ್ನು ಹೊಂದಿರುವುದು ಅಗತ್ಯವಾಗಿದೆ,ಆದರೆ ಅದು ತನ್ನ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕು. ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ ವಿಳಂಬ ಮತ್ತು ಪ್ರಕ್ರಿಯೆಗಳನ್ನು ವರ್ಷಗಳ ಕಾಲ ಎಳೆಯುವ ಮೂಲಕ ಅದು ತನ್ನ ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸಿಲ್ಲ ಎಂದು ಹೇಳಿತು.

2019ರಲ್ಲಿ ಪರೀಕ್ಷೆಗೊಳಪಡಿಸಿದ್ದ ನಿರ್ದಿಷ್ಟ ಬ್ಯಾಚ್‌ನ 11 ಸ್ಯಾಂಪಲ್‌ಗಳ ಪೈಕಿ ಅತ್ಯಂತ ಹೆಚ್ಚಿನ ಪಿಎಚ್ ಮಟ್ಟ ಪತ್ತೆಯಾಗಿರುವುದರಿಂದ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ನಾಶಗೊಳಿಸಬೇಕು ಎಂದೂ ಉಚ್ಚ ನ್ಯಾಯಾಲಯವು ಆದೇಶಿಸಿದೆ.

ಕೇಂದ್ರದ ಹೊಸ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಧಿಕಾರಿಗಳು ಸ್ಯಾಂಪಲ್‌ಗಳನ್ನು ಹೊಸದಾಗಿ ಪರೀಕ್ಷೆಗೊಳಪಡಿಸಬಹುದು ಮತ್ತು ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡು ಬಂದರೆ ತ್ವರಿತ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ಮಂಗಳವಾರ ವಿಚಾರಣೆ ಸಂದರ್ಭ ಉಚ್ಚ ನ್ಯಾಯಾಲಯವು ತಿಳಿಸಿತ್ತು.

ಗಮನಾರ್ಹವಾಗಿ,ಜಾನ್ಸನ್ ಆ್ಯಂಡ್ ಜಾನ್ಸನ್ ಸುಮಾರು 38,000 ಮೊಕದ್ದಮೆಗಳನ್ನು ಎದುರಿಸುತ್ತಿದ್ದು,ಅದರ ಟಾಲ್ಕಮ್ ಪೌಡರ್ ಉತ್ಪನ್ನಗಳು ಕಲ್ನಾರಿನ ಕಲಬೆರಕೆಯಿಂದಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಆರೋಪಿಸಲಾಗಿದೆ. 2020ರಲ್ಲಿ ಅಮೆರಿಕ ಮತ್ತು ಕೆನಡಾಗಳಲ್ಲಿ ಈ ಉತ್ಪನ್ನಗಳನ್ನು ಸ್ಥಗಿತಗೊಳಿಸಲಾಗಿದೆ. 2023ರಿಂದ ವಿಶ್ವಾದ್ಯಂತ ತನ್ನ ಬೇಬಿ ಟಾಲ್ಕಮ್ ಪೌಡರ್‌ನ ಮಾರಾಟವನ್ನು ನಿಲ್ಲಿಸುವುದಾಗಿ ಕಂಪನಿಯು ಆ.11ರಂದು ಪ್ರಕಟಿಸಿತ್ತು.

Similar News