ಪ್ರೌಢವಯಸ್ಕ ಮುಸ್ಲಿಂ ಬಾಲಕಿ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಬಹುದೇ?: ಪ್ರತಿವಾದಿಗಳಿಗೆ ಸುಪ್ರೀಂ ನೋಟಿಸ್

Update: 2023-01-13 15:41 GMT

ಹೊಸದಿಲ್ಲಿ,ಜ.13: ಮುಸ್ಲಿಮ್ ಬಾಲಕಿಯೋರ್ವಳು ಪ್ರೌಢವಯಸ್ಕಳಾದಾಗ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಬಹುದು ಎಂಬ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR)ವು ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಒಪ್ಪಿಕೊಂಡಿದೆ.

ತನ್ನ 16ರ ಹರೆಯದ ಪತ್ನಿಯನ್ನು ಪಂಚಕುಲಾದ ಬಾಲಗೃಹದಲ್ಲಿ ದಿಗ್ಬಂಧನದಲ್ಲಿ ಇರಿಸಿದ್ದನ್ನು ಪ್ರಶ್ನಿಸಿ 26 ಹರೆಯದ ವ್ಯಕ್ತಿಯೋರ್ವ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿತ್ತು. 15 ವರ್ಷಗಳ ಪ್ರೌಢವಯಸ್ಸು ತಲುಪಿದ ಮುಸ್ಲಿಮ್ ಬಾಲಕಿ ತನ್ನ ಇಚ್ಛೆ ಮತ್ತು ಸಮ್ಮತಿಯ ಮೇರೆಗೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಬಹುದು ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಕಲಂ 12ರಡಿ ಈ ಮದುವೆಯು ರದ್ದಾಗುವುದಿಲ್ಲ ಎಂದು ಅದು ತನ್ನ ಆದೇಶದಲ್ಲಿ ತಿಳಿಸಿತ್ತು.

ವೈಯಕ್ತಿಕ ಕಾನೂನಿನಂತೆ 15 ವರ್ಷ ವಯಸ್ಸಿನ ಮುಸ್ಲಿಮ್ ಬಾಲಕಿ ಕಾನೂನುಬದ್ಧ ಮತ್ತು ಮಾನ್ಯ ಮದುವೆಯನ್ನು ಮಾಡಿಕೊಳ್ಳಬಹುದು ಎನ್ನುವುದನ್ನು ಎತ್ತಿಹಿಡಿದಿರುವ ಉಚ್ಚ ನ್ಯಾಯಾಲಯದ ತೀರ್ಪನ್ನು ಇತರ ಯಾವುದೇ ಪ್ರಕರಣದಲ್ಲಿ ಪೂರ್ವನಿದರ್ಶನವಾಗಿ ನೆಚ್ಚಿಕೊಳ್ಳಕೂಡದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್(DY Chandrachud) ಮತ್ತು ನ್ಯಾ.ಪಿ.ಎಸ್.ನರಸಿಂಹ(PS Narasimha) ಅವರ ಪೀಠವು ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ಸ್ಪಷ್ಟಪಡಿಸಿತು.

ಎನ್ಸಿಪಿಸಿಆರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠಕ್ಕೆ ವಿವರಣೆಯನ್ನು ನೀಡಿ, ವೈಯಕ್ತಿಕ ಕಾನೂನನ್ನು ಇಲ್ಲಿ ಸಮರ್ಥನೆಗಾಗಿ ಬಳಸಬಹುದೇ? ಕ್ರಿಮಿನಲ್ ಅಪರಾಧದ ವಿರುದ್ಧ ರಕ್ಷಣೆಯಾಗಿ ಸಂಪ್ರದಾಯ ಅಥವಾ ವೈಯಕ್ತಿಕ ಕಾನೂನಿನ ಸಮರ್ಥನೆಯನ್ನು ನೀಡಬಹುದೇ ಎಂದು ಪ್ರಶ್ನಿಸಿದರು.

ಇತರ ಉಚ್ಚ ನ್ಯಾಯಾಲಯಗಳೂ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಅವಲೋಕನಗಳನ್ನು ಉಲ್ಲೇಖಿಸಬಹುದು ಎಂದು ವಾದಿಸಿದ ಅವರು, ಈ ಅವಲೋಕನಗಳಿಗೆ ತಡೆಯಾಜ್ಞೆಯನ್ನು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮು.ನ್ಯಾ.ಚಂದ್ರಚೂಡ್ ಅವರು, ‘ನಾವು ತಡೆಯಾಜ್ಞೆಯನ್ನು ನೀಡಿದರೆ ಏನಾಗುತ್ತದೆ? ಬಾಲಕಿಯನ್ನು ಆಕೆಯ ಹೆತ್ತವರಿಗೆ ಮರಳಿಸಬಹುದು. ನಾವು ನೋಟಿಸನ್ನು ಹೊರಡಿಸುತ್ತೇವೆ ಮತ್ತು ಮುಂದಿನ ಆದೇಶದವರೆಗೆ ಇತರ ಯಾವುದೇ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸದಂತೆ ಸ್ಪಷ್ಟಪಡಿಸುತ್ತಿದ್ದೇವೆ’ ಎಂದು ತಿಳಿಸಿದರು.

ಹರ್ಯಾಣ ಸರಕಾರ ಮತ್ತು ಇತರರಿಗೆ ನೋಟಿಸ್ಗಳನ್ನು ಹೊರಡಿಸಿದ ಸರ್ವೋಚ್ಚ ನ್ಯಾಯಾಲಯವು,ಈ ವಿಷಯದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ವಕೀಲ ರಾಜಶೇಖರ ರಾವ್ ಅವರನ್ನು ಅಮಿಕಸ್ ಕ್ಯೂರೆ ಆಗಿ ನೇಮಕಗೊಳಿಸಿತು.

ಈ ಹಿಂದೆ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಎಸ್.ಓಕಾ ಅವರ ಪೀಠವೂ ರಾವ್ ಅವರನ್ನು ಅಮಿಕಸ್ ಕ್ಯೂರೆ ಆಗಿ ನೇಮಿಸಿತ್ತು. ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಲೂ ಅದು ನಿರಾಕರಿಸಿತ್ತು.

Similar News