ಬಿಜೆಪಿ ಸಂಸದನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ಖ್ಯಾತ ಕುಸ್ತಿತಾರೆ ವಿನೇಶ್ ಫೋಗಟ್

Update: 2023-01-18 14:10 GMT

ಹೊಸದಿಲ್ಲಿ: ಭಾರತದ ಕುಸ್ತಿ ಒಕ್ಕೂಟ(ಡಬ್ಲುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಕಳೆದ ಕೆಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಕುಸ್ತಿತಾರೆ ವಿನೇಶ್ ಫೋಗಟ್,(Vinesh Phogat) ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದಾರೆ.

ಲಕ್ನೊದ ರಾಷ್ಟ್ರೀಯ ಶಿಬರದಲ್ಲಿ ಹಲವಾರು ತರಬೇತುದಾರರು ಮಹಿಳಾ ಕುಸ್ತಿಪಟುಗಳನ್ನು ಶೋಷಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
  
ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರ ಕೈಯಲ್ಲಿ ಲೈಂಗಿಕ ಶೋಷಣೆಗೆ ಒಳಗಾದ ಕನಿಷ್ಠ 10-12 ಮಹಿಳಾ ಕುಸ್ತಿಪಟುಗಳು ನನಗೆ ಗೊತ್ತು. ಅವರು ತಮಗಾದ ಶೋಷಣೆಯನ್ನು ನನಗೆ ಹೇಳಿದ್ದರು. ನಾನು ಈಗ ಅವರ ಹೆಸರನ್ನು ಹೇಳಲು ಸಾಧ್ಯವಿಲ್ಲ. ಆದರೆ ನಾವು ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿಯಾದರೆ ಖಂಡಿತವಾಗಿಯೂ ಆ ಹೆಸರುಗಳನ್ನು ಬಹಿರಂಗಪಡಿಸುತ್ತೇವೆ ಎಂದು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಹಾಗೂ ಒಲಿಂಪಿಯನ್ ವಿನೇಶ್ ಅವರು ಜಂತರ್ ಮಂತರ್‌ನಲ್ಲಿ 4 ಗಂಟೆ ಪ್ರತಿಭಟನೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದಾಗ್ಯೂ ನಾನು ಅಂತಹ ಶೋಷಣೆ ಎದುರಿಸಿಲ್ಲ ಎಂದು ಸ್ಪಷ್ಟಪಡಿಸಿದ ವಿನೇಶ್, ಟೋಕಿಯೊ ಒಲಿಂಪಿಕ್ಸ್ ನಂತರ ಭಾರತದ ಕ್ರೀಡಾಪಟುಗಳನ್ನು ತಾನು ಭೇಟಿಯಾದಾಗ ಅವರು ಎದುರಿಸಿದ್ದ ಸಮಸ್ಯೆಯನ್ನು ತನಗೆ ತಿಳಿಸಿದ್ದರು. ನಾನು ಅದನ್ನು ಪ್ರಧಾನಿಯವರಿಗೆ ತಿಳಿಸಿದ್ದರಿಂದ ಕುಸ್ತಿ ಅಧ್ಯಕ್ಷರಿಗೆ ಆಪ್ತರಾಗಿರುವ ಅಧಿಕಾರಿಗಳಿಂದ ನನಗೆ ಕೊಲೆ ಬೆದರಿಕೆಗಳು ಬಂದಿವೆ ಎಂದರು.

ಬುಧವಾರ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ರಿಯೊ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತೆ ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ವಿಜೇತೆ ಸರಿತಾ ಮೋರ್, ಸಂಗೀತಾ ಫೋಗಟ್, ಸತ್ಯವರ್ತ್ ಮಲಿಕ್, ಜಿತೇಂದ್ರ ಕಿನ್ಹಾ ಹಾಗೂಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತ ಸುಮಿತ್ ಮಲಿಕ್ ಸಹಿತ 30 ಕುಸ್ತಿಪಟುಗಳು ಭಾಗವಹಿಸಿದ್ದರು.

Similar News