ಬಿಜೆಪಿಯ ‘ಬೇಟಿ ಬಚಾವೊ’ ಘೋಷಣೆ ಬೋರಲು ಬಿದ್ದಿದೆ: 72 ಗಂಟೆಗಳಿಂದ ಪ್ರತಿಭಟನೆ ನಡೆದರೂ ಏನೂ ಆಗಿಲ್ಲ; ಕೃಷ್ಣಾ ಪೂನಿಯ

Update: 2023-01-20 17:13 GMT

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ನಾಯಕರು ‘ಬೇಟಿ ಬಚಾವೊ ಬೇಟಿ ಪಢಾವೊ’ ಘೋಷಣೆಯನ್ನು ಚೂರು ಚೂರಾಗಿ ಹರಿದು ಹಾಕಿದ್ದಾರೆ ಎಂದು ಮಾಜಿ ಡಿಸ್ಕಸ್ ಎಸೆತಗಾರ್ತಿ ಹಾಗೂ ಕಾಂಗ್ರೆಸ್ ನಾಯಕಿ ಕೃಷ್ಣಾ ಪೂನಿಯ(Krishna Poonia) ಶುಕ್ರವಾರ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಹಾಗೂ ಬಾಕ್ಸರ್ ವಿಜೇಂದರ್ ಸಿಂಗ್(Vijender Singh) ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಅವರು, ‘‘ನಮ್ಮ ಪುತ್ರಿಯರು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತರುತ್ತಾರೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ, ಅವರಿಗೆ ಇಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ’’ ಎಂದು ಹೇಳಿದರು.

‘‘ಒಂದು ಕಡೆ ದೇಶವು ಪದಕಗಳನ್ನು ಎದುರು ನೋಡುತ್ತಿದೆ. ಇನ್ನೊಂದೆಡೆ ನಮ್ಮ ಪುತ್ರಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಹೆತ್ತವರು ತಮ್ಮ ಪುತ್ರಿಯರನ್ನು ಕ್ರೀಡೆಗೆ ಕಳುಹಿಸಲು ಬಯಸುತ್ತಾರೆಯೇ? ಬಿಜೆಪಿ ನಾಯಕರ ‘ಬೇಟಿ ಬಚಾವೊ ಬೇಟಿ ಪಢಾವೊ’ ಘೋಷಣೆ ಬೋರಲು ಬಿದ್ದಿದೆ. 72 ಗಂಟೆಗಳಿಂದ ಪ್ರತಿಭಟನೆಗಳು ನಡೆಯುತ್ತಿವೆ. ನಮ್ಮ ಪುತ್ರಿಯರಿಗೆ ನ್ಯಾಯ ಕೊಡಲು ಇನ್ನೂ ಬಿಜೆಪಿ ನಾಯಕರು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕುಸ್ತಿ ಫೆಡರೇಶನನ್ನು ವಿಸರ್ಜಿಸಬೇಕು’’ ಎಂದು ಅವರು ಆಗ್ರಹಿಸಿದರು.

ಲೈಂಗಿಕ ಶೋಷಕರಿಗೆ ಬಿಜೆಪಿ ಅಭಯ: ಕೇಜ್ರಿವಾಲ್

ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳಾ ಕುಸ್ತಿಪಟುಗಳು ಹೇಳುತ್ತಿರುವ ವ್ಯಕ್ತಿಗಳ ವಿರುದ್ಧ 72 ಗಂಟೆಗಳ ಬಳಿಕವೂ ಯಾವುದೇ ಕ್ರಮವಾಗದಿರುವುದು ‘‘ಅತ್ಯಂತ ನಾಚಿಕೆಗೇಡಿ ಸಂಗತಿ’’ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

‘‘ಹರ್ಯಾಣದ ಸಚಿವರೊಬ್ಬರಿಂದ ಹಿಡಿದು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರವರೆಗೆ ಪ್ರತಿಯೊಬ್ಬರೂ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆದರೆ ಅವರ ಪೈಕಿ ಯಾರೂ ರಾಜೀನಾಮೆಯನ್ನೂ ನೀಡಿಲ್ಲ, ಅವರ ವಿರುದ್ಧ ಯಾವುದೇ ಕ್ರಮವೂ ಆಗಿಲ್ಲ. ಬಿಜೆಪಿ ಮತ್ತು ಅದರ ಸರಕಾರ ಮಹಿಳಾ ಕುಸ್ತಿಪಟುಗಳ ಸುರಕ್ಷತೆಯನ್ನು ಕಡೆಗಣಿಸಿ ತಮ್ಮ ನಾಯಕರ ರಕ್ಷಣೆಗೆ ಧಾವಿಸಿದೆ’’ ಎಂಬುದಾಗಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Similar News