ಗಣರಾಜ್ಯೋತ್ಸವ ಕಾರ್ಯಕ್ರಮ ನೇರಪ್ರಸಾರ ಮಾಡಿದ್ದಕ್ಕೆ ವಾರ್ತಾಭಾರತಿ ಚಾನಲ್ ಗೆ ನಿರ್ಬಂಧ ವಿಧಿಸಿದ ಯೂಟ್ಯೂಬ್ !

ಸರಕಾರಿ ಕಾರ್ಯಕ್ರಮ ಪ್ರಸಾರ ಮಾಡಿದರೆ ಕಾಪಿರೈಟ್ ಉಲ್ಲಂಘನೆ ಹೇಗಾಗುತ್ತದೆ ?

Update: 2023-01-26 15:15 GMT

ಮಂಗಳೂರು, ಜ.26: ವಾರ್ತಾಭಾರತಿಯ ಯೂಟ್ಯೂಬ್ ಚಾನಲ್( youtube.com/varthabharatinews)ಗೆ ಯೂಟ್ಯೂಬ್ ಗುರುವಾರ ಒಂದು ವಾರದ ನಿರ್ಬಂಧ ವಿಧಿಸಿದೆ. ಆದರೆ ಅದಕ್ಕೆ ಯೂಟ್ಯೂಬ್ ನೀಡಿರುವ ಕಾರಣ ಮಾತ್ರ ಬಹಳ ವಿಚಿತ್ರವಾಗಿದೆ. ವಾರ್ತಾಭಾರತಿಯ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ  ದಿಲ್ಲಿಯ ಕರ್ತವ್ಯ ಪಥ್ ನಲ್ಲಿ ನಡೆದ ದೇಶದ 74ನೇ ಗಣರಾಜ್ಯೋತ್ಸವ ಪರೇಡ್ ನ ನೇರಪ್ರಸಾರದಲ್ಲಿ ಕಾಪಿರೈಟ್ ಇರುವ ವಿಷಯಗಳು ಪ್ರಸಾರವಾಗಿವೆ. ಅದಕ್ಕಾಗಿ ಆ ನೇರಪ್ರಸಾರದ ವೀಡಿಯೊ ತೆಗೆದು ಹಾಕಿ, ಚಾನಲ್ ಮೇಲೆ 7 ದಿನಗಳ ನಿರ್ಬಂಧ ವಿಧಿಸಲಾಗಿದೆ ಎಂದು ಯೂಟ್ಯೂಬ್ ಹೇಳಿದೆ.

ಈ ಬಗ್ಗೆ ಯೂಟ್ಯೂಬ್ ಗೆ ಮಾಹಿತಿ ನೀಡಿರುವ ವಾರ್ತಾಭಾರತಿ, ತಮ್ಮ ಚಾನಲ್ ನಲ್ಲಿ ಪ್ರಧಾನ ಮಂತ್ರಿಯವರ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸಾರವಾದ ಗಣರಾಜ್ಯೋತ್ಸವ ಪರೇಡ್ ನ ನೇರಪ್ರಸಾರವನ್ನೇ  ಕೊಟ್ಟಿದ್ದು ಯಾವುದೇ ಕಾಪಿರೈಟ್ ಇರುವ ವೀಡಿಯೊ ಅಥವಾ ಸಂಗೀತವನ್ನು ಬಳಸಿಲ್ಲ ಎಂದು ಹೇಳಿದೆ. ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬದ ಪ್ರಯುಕ್ತ ದೇಶದ ರಾಜಧಾನಿಯಲ್ಲಿ ಭಾರತ ಸರಕಾರದಿಂದ  ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ನೀಡಲು ಮಾಧ್ಯಮ ಸಂಸ್ಥೆಗಳಿಗೆ ಅವಕಾಶವಿದೆ. ಅದರಲ್ಲಿ ಯಾವುದೇ ಕಾಪಿರೈಟ್ ಉಲ್ಲಂಘನೆ ಆಗುವುದಿಲ್ಲ ಎಂದು ವಿವರಣೆ ನೀಡಿದೆ. ಆದರೆ ವಾರ್ತಾಭಾರತಿಯ ಈ ವಿವರಣೆಯನ್ನು ಯೂಟ್ಯೂಬ್ ಸ್ವೀಕರಿಸದೆ ತಿರಸ್ಕರಿಸಿದೆ. ನೇರಪ್ರಸಾರದಲ್ಲಿ ಯಾವುದಾದರೂ ಕಾಪಿರೈಟ್ ವಿಷಯಗಳು ಇದ್ದಿರಬಹುದು, ಹಾಗಾಗಿಯೇ ನಿರ್ಬಂಧ ವಿಧಿಸಲಾಗಿದೆ. ಏಳು ದಿನಗಳ ಕಾಲ ಇನ್ನೇನೂ ಮಾಡುವ ಹಾಗಿಲ್ಲ ಎಂದು ಕೈಚೆಲ್ಲಿದೆ.

ದೇಶದ ಆದಷ್ಟು ಹೆಚ್ಚು ಸಂಖ್ಯೆಯ ಜನರಿಗೆ  ಗಣರಾಜ್ಯೋತ್ಸವ ದಿನಾಚರಣೆಯಂತಹ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮಗಳ ಸಾರ ಹಾಗೂ ಸಂದೇಶ ತಲುಪಿಸುವ ಉದ್ದೇಶದಿಂದ ಮಾಧ್ಯಮ ಸಂಸ್ಥೆಗಳು ಯಾವುದೇ ಲಾಭದ ಉದ್ದೇಶ ಇಲ್ಲದೆ ತಮ್ಮ ಚಾನಲ್ ಗಳಲ್ಲಿ ನೇರ ಪ್ರಸಾರ ನೀಡುತ್ತವೆ. ಇದು ಬಹಳ ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ. ಇದಕ್ಕೆ ಸರಕಾರದಿಂದ ಯಾವುದೇ ನಿರ್ಬಂಧವಿಲ್ಲ. ಗುರುವಾರವೂ ಕನ್ನಡ ಸಹಿತ  ದೇಶದ ವಿವಿಧ ಭಾಷೆಗಳ ಹಲವಾರು ಯೂಟ್ಯೂಬ್  ಚಾನಲ್ ಗಳು ಗಣರಾಜ್ಯೋತ್ಸವ ಕಾರ್ಯಕ್ರಮದ ನೇರ ಪ್ರಸಾರ ನೀಡಿವೆ. ಆದರೆ ಯೂಟ್ಯೂಬ್ ಇಂತಹ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ್ದಕ್ಕೆ ವಾರ್ತಾಭಾರತಿಗೆ  ನಿರ್ಬಂಧ ವಿಧಿಸಿದ್ದು ಮಾತ್ರವಲ್ಲದೆ ವಿವರಣೆ ನೀಡಿದ ಮೇಲೂ ಅದನ್ನು ಸ್ವೀಕರಿಸದೆ ನಿರ್ಬಂಧ ಮುಂದುವರಿಸಿರುವುದು ಬಹಳ ವಿಚಿತ್ರವಾಗಿದೆ.

ಈ ಬಗ್ಗೆ ವಾರ್ತಾಭಾರತಿ ಯೂಟ್ಯೂಬ್ ಗೆ ಮತ್ತೆ ಮನವಿ ಸಲ್ಲಿಸಲಿದೆ.

2.17 ಲಕ್ಷಕ್ಕೂ ಹೆಚ್ಚು ಸಬ್ಸ್ ಕ್ರೈಬರ್ಸ್ ಇರುವ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ಕನ್ನಡದಲ್ಲಿ ಅತ್ಯಂತ ವಿಶಿಷ್ಟ ಸುದ್ದಿ, ಮಾಹಿತಿ ಹಾಗು ವಿಶ್ಲೇಷಣೆ ಕಾರ್ಯಕ್ರಮಗಳ ಮೂಲಕ ಅಪಾರ ಜನಮನ್ನಣೆ ಗಳಿಸಿದೆ.

Similar News