ಫೆ.3ರಿಂದ ಎರಡನೆ ಹಂತದ ‘ಪ್ರಜಾಧ್ವನಿ ಯಾತ್ರೆ’ಗೆ ಕೈ ಪಡೆ ಸಜ್ಜು

Update: 2023-01-29 13:31 GMT

ಬೆಂಗಳೂರು: ಮುಂಬರಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಕೈಗೊಂಡಿರುವ ಮೊದಲ ಹಂತದ ‘ಪ್ರಜಾಧ್ವನಿ’ ಯಾತ್ರೆ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಫೆಬ್ರವರಿ 3ರಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೋಲಾರದ ಮುಳಬಾಗಿಲು ಕ್ಷೇತ್ರದಿಂದ ಯಾತ್ರೆ ಆರಂಭಿಸಲಿದ್ದಾರೆ. ಮೊದಲ ಹಂತದಲ್ಲಿ ಇಬ್ಬರು ನಾಯಕರು ರಾಜ್ಯದ 20 ಜಿಲ್ಲೆಗಳಲ್ಲಿ ಜಂಟಿ ಬಸ್ ಯಾತ್ರೆ ನಡೆಸಿದ್ದಾರೆ. ಎರಡನೆ ಹಂತದ ‘ಪ್ರಜಾಧ್ವನಿ’ ಯಾತ್ರೆ ಪ್ರತ್ಯೇಕವಾಗಿ ತಮ್ಮ ತಂಡದೊಂದಿಗೆ ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ.

ಫೆಬ್ರವರಿ 3ರಂದು ಬೀದರ್‍ನ ಬಸವಕಲ್ಯಾಣದಿಂದ ಯಾತ್ರೆ ಆರಂಭಿಸಲಿರುವ ಸಿದ್ದರಾಮಯ್ಯ, ಅಲ್ಲಿನ ಅನುಭವ ಮಂಟಪಕ್ಕೆ ಭೇಟಿ ನೀಡಿ ಬಸವೇಶ್ವರರ ಪುತ್ತಳಿಗೆ ಮಾಲಾರ್ಪಣೆ ಮಾಡಿ, ಬಸವ ಕಲ್ಯಾಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಬಾಲ್ಕಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಫೆ.4ಕ್ಕೆ ಬಾಲ್ಕಿಯಿಂದ ಔರಾದ್‍ಗೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಬೀದರ್, ಹುಮ್ನಾಬಾದ್ ಕ್ಷೇತ್ರಗಳಲ್ಲಿ ಸಂಚರಿಸಿ ಕಲಬುರಗಿಗೆ ಭೇಟಿ ನೀಡಿ ವಾಸ್ತವ್ಯ ಹೂಡಲಿದ್ದಾರೆ. ಫೆ.5ರಂದು ಬೆಳಗ್ಗೆ ಕಲಬುರಗಿಯಿಂದ ಹೆಲಿಕಾಫ್ಟರ್ ಮೂಲಕ ಹೂವಿನಹಡಗಲಿಗೆ ಭೇಟಿ ನೀಡಿ ಮೈಲಾರದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ವಾಪಾಸ್ ಕಲಬುರಗಿಗೆ ವಾಪಾಸಾಗಲಿದ್ದು, ಮಾರನೆ ದಿನ ಕಲಬುರಗಿ ಗ್ರಾಮೀಣ, ಚಿಂಚೋಳಿ, ಸೇಡಂ ಕ್ಷೇತ್ರಗಳ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫೆ.7ಕ್ಕೆ ಆಳಂದ, ಅಫ್ಜಲ್‍ಪುರ, ಜೇವರ್ಗಿಗಳಲ್ಲಿ, ಫೆ.8ಕ್ಕೆ ಚಿತ್ತಾಪೂರ ಕ್ಷೇತ್ರಗಳಲ್ಲಿ ಬಹಿರಂಗ ಸಮಾವೇಶಗಳಲ್ಲಿ, ಫೆ.10ಕ್ಕೆ ಸುರಪೂರ, ಶಹಾಪೂರ, ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ, ಫೆ.11ಕ್ಕೆ ಸಿಂಧಗಿ, ಇಂಡಿ, ನಾಗಠಾಣ ಕ್ಷೇತ್ರಗಳ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ 3 ಜಿಲ್ಲೆಗಳಲ್ಲಿ ಸಿದ್ದರಾಮಯ್ಯ 7 ದಿನ ಪ್ರವಾಸ ಕೈಗೊಳ್ಳಲಿದ್ದಾರೆ.

ಫೆ.9ರಂದು ದಾವಣಗೆರೆ ರಾಜನಹಳ್ಳಿಯಲ್ಲಿ ಆಯೋಜಿಸಿರುವ ರಾಜನಹಳ್ಳಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆ.12ಕ್ಕೆ ಕಿತ್ತೂರು ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯ ಬಬಲೇಶ್ವರ, ದೇವರಹಿಪ್ಪರಗಿ, ಬಸವನಬಾಗೇವಾಡಿ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಲಿದ್ದಾರೆ. ನಂತರ ಬೆಂಗಳೂರಿಗೆ ಆಗಮಿಸಿ ವಿಧಾನಸಭೆಯ ಕಲಾಪದಲ್ಲಿ ಫೆ.13ರಿಂದ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೆ.3ರಿಂದ 9ರ ವರೆಗೆ 4 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಕೋಲಾರ ಜಿಲ್ಲೆಯ ಮುಳಬಾಗಲು ಕ್ಷೇತ್ರದಲ್ಲಿರುವ ಕುರುಡುಮಲೆಯ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಿದ್ದಾರೆ. ಅಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದು, ಮಧ್ಯಾಹ್ನ ಕೆಜಿಎಫ್ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫೆ.4ಕ್ಕೆ ಮಾಲೂರು ಮತ್ತು ದೇವನಹಳ್ಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೆ.5ರಂದು ‘ಪ್ರಜಾಧ್ವನಿ ಯಾತ್ರೆ’ಗೆ ಬಿಡುವು ನೀಡಲಿದ್ದಾರೆ. ಫೆ.6ಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಗಳಲ್ಲಿ, ಫೆ.7ಕ್ಕೆ ಹೊಳಲ್ಕೆರೆ, ಹೊಸದುರ್ಗ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಫೆ.8ಕ್ಕೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಸಾಗರ ಕ್ಷೇತ್ರಗಳಲ್ಲಿ, ಫೆ.9ಕ್ಕೆ ತೀರ್ಥಹಳ್ಳಿ, ಭದ್ರಾವತಿ ಕ್ಷೇತ್ರಗಳ ಪ್ರಜಾಧ್ವನಿ ಯಾತ್ರೆ ನಡೆಯಲಿದೆ.

ಮೂವತ್ತೈದು ಮಂದಿಯ ತಂಡ: ಸಿದ್ದರಾಮಯ್ಯ ನೇತೃತ್ವದ ತಂಡದಲ್ಲಿ ಎಂ.ಬಿ.ಪಾಟೀಲ್, ಎಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಅಲ್ಲಂ ವೀರಭದ್ರಪ್ಪ, ಎಸ್.ಆರ್.ಪಾಟೀಲ್, ಎನ್.ಎಸ್.ಬೋಸರಾಜ್, ಝಮೀರ್ ಅಹ್ಮದ್‍ಖಾನ್, ಡಾ.ಎಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ವಿನಯ್ ಕುಲಕರ್ಣಿ, ಪ್ರಿಯಾಂಕ್ ಖರ್ಗೆ, ಅಬ್ದುಲ್ ಜಬ್ಬಾರ್, ನಸೀರ್ ಅಹಮ್ಮದ್ ಸೇರಿದಂತೆ ಒಟ್ಟು 35 ಮಂದಿ ಮುಖಂಡರ ತಂಡವನ್ನು ರಚನೆ ಮಾಡಲಾಗಿದೆ.

ಇದನ್ನೂ ಓದಿ: ಸುಧಾಕರ್ ಆರೋಗ್ಯ ಇಲಾಖೆಗೆ ಗ್ರಹಣವಿದ್ದಂತೆ, ಕಮಿಷನ್ ಒಂದೇ ಅವರ ಧ್ಯೇಯ: ಕಾಂಗ್ರೆಸ್ ಟೀಕೆ

Similar News