ಸಾಹಿತ್ಯ ಮಾನವೀಯ ಕಾಳಜಿ ಹೊಂದಿರಬೇಕು: ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ ಕೊಡಸೆ

ಶಿವಮೊಗ್ಗದಲ್ಲಿ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಶರಾವತಿ ಸಂತ್ರಸ್ತರ ವಿಚಾರ ಪ್ರಸ್ತಾಪಿಸಿದ ಸರ್ವಾಧ್ಯಕ್ಷ

Update: 2023-02-01 17:06 GMT

ಶಿವಮೊಗ್ಗ(ಫೆ.01): ಸಾಹಿತ್ಯ ಜನಪರ ಮತ್ತು ಸಮಾಜಮುಖಿ ಆಗಿರಬೇಕು. ಮಾನವೀಯ ಕಾಳಜಿ ಹೊಂದಿರಬೇಕು ಎಂದು ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಹೇಳಿದ್ದಾರೆ. 

ನಗರದ ಗೋಪಿಶೆಟ್ಟಿ ಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರ ಬದುಕಿನ ಬಗ್ಗೆ ಆಸಕ್ತಿ, ಅನುಕಂಪ ತಾಳಿದ ಸಾಹಿತಿ ಉತ್ತಮ ಸಾಹಿತ್ಯ ಸೃಷ್ಟಿಸಬಲ್ಲ. ಅಲಂಕಾರಿಕವಾಗಿ ಆಕರ್ಷಕವಾಗಿ ಬರೆದರೂ ಅದರಲ್ಲಿ ಅನುಭವದ ತೀವ್ರತೆ ಇಲ್ಲದೆ ಇದ್ದರೆ ಅದು ಓದುಗನ ಹೃದಯ ತಟ್ಟುವ ಸಾಹಿತ್ಯವಾಗುವುದಿಲ್ಲ ಎಂದರು.

ಶಿವಮೊಗ್ಗ ಜಿಲ್ಲೆ ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಈ ಪೈಕಿ ಕಡಿದಾಳ್ ಮಂಜಪ್ಪ ಅವರ ಹೆಸರಿನಲ್ಲಿ ಕುವಂಪು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿವಿಯಲ್ಲಿ ಎಸ್. ಬಂಗಾರಪ್ಪ ಅಧ್ಯಯನ ಪೀಠ, ದಾವಣಗೆರೆ ವಿವಿಯಲ್ಲಿ ಜೆ.ಹೆಚ್.ಪಟೇಲ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಅವರು ಪ್ರತಿಪಾದಿಸಿದ್ದ ಮೌಲ್ಯಗಳ ವಿಷಯದ ಕುರಿತು ಅಧ್ಯಯನ, ಸಂಶೋಧನೆಗೆ ನಡೆಸಬೇಕು ಎಂದರು.

ಹಿರೇಭಾಸ್ಕರ, ಲಿಂಗನಮಕ್ಕಿ, ತಲಕಳಲೆ ಜಲಾಶಯಗಳಿಂದ ಮುಳುಗಡೆಯಾದ ಸಂತ್ರಸ್ತರ ಸಾವಿರಾರು ಕುಟುಂಬಗಳಿಗೆ ಮೂರು ತಲೆಮಾರು ಕಳೆದರೂ ಈತನಕ ನೆಲೆ ಸಿಕ್ಕಿಲ್ಲ. ಅಭಯಾರಣ್ಯದ ಘೋಷಣೆ, ಕಂದಾಯ ಭೂಮಿಯ ಅಲಭ್ಯತೆ, ಸಂತ್ರಸ್ತ ಕುಟುಂಬಗಳನ್ನು ಇಂದಿಗೂ ಅತಂತ್ರ ಸ್ಥಿತಿಯಲ್ಲಿ ಇರಿಸಿದೆ. ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಈ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.

ಮಲೆನಾಡಿನಲ್ಲಿ ಅಕಾಲಿಕ ಮಳೆ, ಹೆಚ್ಚು ಮಳೆ, ಗುಡ್ಡ ಕುಸಿತ ಉಂಟಾಗುತ್ತಿದೆ. ಅರಣ್ಯ ಅತಿಕ್ರಮವೆ ಇದಕ್ಕೆ ಕಾರಣ. ಜೋಶಿಮಠ ದುರಂತರದ ಮಾದರಿಯಲ್ಲಿ ಎರಡು ವರ್ಷದ ಹಿಂದೆ ಮಂಡಗದ್ದೆ ಸಮೀಪ ಸಿಂಗನಬಿದರೆಯಲ್ಲಿ ಗುಡ್ಡ ಕುಸಿದು ಅಡಕೆ ತೋಟಗಳು ನೆಲಸಮವಾಗಿದ್ದವು. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಕುಸಿತದ ಆಪಾಯದ ಬಗ್ಗೆ ಅಧ್ಯಯನ ವರದಿಗಳು ಎಚ್ಚರಿಸುತ್ತಿವೆ. ಪ್ರಕೃತಿಯೊಂದಿಗೆ ಸಹಬಾಳ್ವೆ ಅನಿವಾರ್ಯತೆ ಇದೆ ಎಂದರು.

ಜಿಲ್ಲೆಯ ಸಾವಿರಾರು ರೈತ ಕುಟುಂಬಗಳಿಗೆ ಗೌರವಯುತ ಬಾಳ್ವೆಯನ್ನು ಒದಗಿಸಿದ ಭೂ ಸುಧಾರಣೆ ಹೋರಾಟಕ್ಕೆ ಅಡಿಪಾಯ ಹಾಕಿದ್ದು ವಡ್ನಾಳ ಗಣಪತಿಯಪ್ಪ ಮತ್ತು ಗೋಪಾಲಗೌಡರು. ಮಾರ್ಚ್ 14ರಂದು ಶಾಂತವೇರಿ ಗೋಪಾಲಗೌಡ ಅವರ ನೂರನೆ ವರ್ಷದ ಹುಟ್ಟುಹಬ್ಬ. ರೈತರು, ಭೂ ಸುಧಾರಣೆ ಫಾಲನುಭವಿಗಳು ದೊಡ್ಡ ಪ್ರಮಾಣದಲ್ಲಿ ಆಚರಣೆ ಮಾಡಿ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.

ಅಡಕೆ, ತೆಂಗಿಗೆ ಬಂದಿರುವ ಹಳದಿ ರೋಗ, ಎಲೆಚುಕ್ಕೆ ರೋಗ ನಿಯಂತ್ರಿಸದಿದ್ದರೆ ಈ ಬೆಳೆಗಳ ಮೇಲೆ ಅವಲಂಬಿತವಾಗಿರುವ ರೈತರು ಕುಟುಂಬಗಳು ಸಂಕಷ್ಟಕ್ಕೀಡಾಗುತ್ತವೆ. ಮಲೆನಾಡಿನ ಮಣ್ಣು ಮತ್ತು ಹವಾಗುಣ ಅಡಕೆ ಬೆಳೆಗೆ ಪ್ರಶಸ್ತವಾಗಿದೆ. ಕೃಷಿ ಕೆಲಸಗಾರರ ಅಭಾವ, ಅಡಕೆ ಧಾರಣೆ ಹೆಚ್ಚಳದಿಂದ ಗದ್ದೆಗಳನ್ನು ಕೂಡ ಅಡಕೆ ತೋಟವಾಗಿ ಪರವರ್ತಿಸಲಾಗುತ್ತಿದೆ. ಒಂದು ವೇಳೆ ಅಡಕೆ ಧಾರಣೆಯಲ್ಲಿ ಏರುಪೇರಾದರೆ ಜಿಲ್ಲೆಯ ಆರ್ಥಿಕತೆ ತಲ್ಲಣಿಸುತ್ತದೆ.ಅಡಕೆಯ ಔಷಧೀಯ ಗುಣಗಳು, ಪರ್ಯಾಯ ಬಳಕೆಯ ಗುಣಗಳ ಕುರಿತು ಸಂಶೋಧನೆ ನಡೆಸಬೇಕು. ಅಡಕೆ ಚಹ ಸಂಶೋಧನೆ ಮಾಡಿದ ನಿವೇದನ್ ನೆಂಪೆ ಉದ್ಯಮಕ್ಕೆ ಉತ್ತೇಜನ ಬೇಕು. ಅಡಕೆ ಚೊಗರು ನೈಸರ್ಗಿಕ ಬಳಕೆ ಮಾಡುವಲ್ಲಿ ಹೆಗ್ಗೋಡಿನ ಚರಕ ಸಂಸ್ಥೆ ಯಶಸ್ವಿಯಾಗಿದೆ. ಜವಳಿ ಉದ್ಯಮದಲ್ಲಿ ಚೊಗರು ಬಳಕೆ, ಅಡಕೆ ಚೊಗರನ್ನು ಪುಡಿ ರೂಪದಲ್ಲಿ ಸಂಗ್ರಹಿಸುವ ಕುರಿತು ಹೆಚ್ಚಿನ ಸಂಶೋಧನೆ ಆಗಬೇಕಿದೆ ಎಂದರು.

ಹೊಸನಗರ ತಾಲೂಕು ವಿಧಾನಸಭೆ ಕ್ಷೇತ್ರದ ಮಾನ್ಯತೆ ಕಳೆದುಕೊಂಡಿದೆ. ಇದರಿಂದ ಹೊಸನಗರ ತಾಲೂಕು ಎಲ್ಲಾ ದೃಷಿಯಿಂದ ಅನಾಥ ಸ್ಥಿತಿಗೆ ತಳ್ಳಲ್ಪಟ್ಟಿದೆ. ಈ ಸ್ಥಿತಿ ಬದಲಾಗಬೇಕಿದೆಎಂದ ಅವರು,ಮೊಬೈಲ್ ನಿಂದಾಗಿ ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಗುಣಮಟ್ಟದ ಶಿಕ್ಷಣ, ಕೌಶಲ್ಯದ ಅಭಿವೃದ್ಧಿಯ ತರಬೇತಿ ದೊರೆಯಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ದೊರೆಯುವ ಉದ್ಯೋಗಗಳ ಕುರಿತು ತರಬೇತಿ ನೀಡಬೇಕಿದೆ ಎಂದರು.

ನಮ್ಮ ಬದುಕು ಸಾಹಿತ್ಯಕ್ಕಿಂತಲೂ ಶ್ರೇಷ್ಠ. ಸಾಮರಸ್ಯದ ಬದುಕು ನಮ್ಮ ಪರಂಪರೆಯಿಂದ ಬಂದದ್ದು. ಇದು ಆಚರಣೆಗೆ ಕಷ್ಟವಲ್ಲ. ಆದರೆ, ಅದರಂತೆ ಅನುಸರಿಸಲು ಧೈರ್‍ಯ ಬೇಕು. ವೈಚಾರಿಕ ದೃಷ್ಟಿ ಮತ್ತು ವೈಜ್ಞಾನಿಕ ಮನೋಭಾವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಯಾವುದೂ ಕಷ್ಟವಲ್ಲ. ಸ್ವತಂತ್ರ ಆಲೋಚನೆಗೆ ಅಂಧಾನುಕರಣೆಯ ಸಂಕೋಲೆಗಳು ಸಡಿಲಗೊಳ್ಳುತ್ತವೆ. ಪ್ರಶ್ನಿಸುವ ಧೈರ್‍ಯಕ್ಕೆ ಮೌಢ್ಯ ತಲೆಬಾಗುತ್ತದೆ. ವೈಜ್ಞಾನಿಕ ಚಿಂತನೆಗೆ ಸಂಪ್ರದಾಯ ಮಣಿಯುತ್ತದೆ. ಜನತೆಯಲ್ಲಿ ವೈಚಾರಿಕ ದೃಷ್ಟಿ ಮತ್ತು ವೈಜ್ಞಾನಿಕ ಚಿಂತನೆ ಮೂಡಿಸುವುದಕ್ಕೆ ಸಾಹಿತ್ಯ ಸಮ್ಮೇಳನ ಇಂಬು ನೀಡಲಿ ಎಂದರು.

ಇದಕ್ಕೂ ಮೊದಲು  ಚಾಲುಕ್ಯನಗರ ವೃತ್ತದಿಂದ ಸಮ್ಮೇಳನಾಧ್ಯಕ್ಷರ ಮರವಣಿಗೆ ನಡೆಸಲಾಯಿತು. ಸಮ್ಮೇಳನದಲ್ಲಿ ಪುಸ್ತಕಗಳ ಮಾರಾಟದ ಅಂಗಡಿಗಳು ಗಮನ ಸೆಳದವು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿ ನಾ.ಡಿಸೋಜ,ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್,ತಾಲ್ಲೂಕು ಕಸಾಪ ಅಧ್ಯಕ್ಷರಾದ ಟಿ.ಕೆ. ರಮೇಶ್ ಶೆಟ್ಟಿ, ರಾಘವೇಂದ್ರ ಮೊದಲಾದವರು  ಇದ್ದರು.

'ಸಾಹಿತ್ಯದಿಂದ ಯುವ ಸಮುದಾಯ ದೂರ ಹೋಗುತ್ತಿದೆ. ಪುಸ್ತಕಗಳು ಜ್ಞಾನದ ಸಂಕೇತವಾಗಿವೆ. ಪುಸ್ತಕಗಳನ್ನು ಓದಬೇಕು, ಜ್ಞಾನ ಹೆಚ್ಚಳ ಮಾಡಿಕೊಳ್ಳಬೇಕು. ಯುವ ಜನರಲ್ಲಿ ಸಾಹಿತ್ಯ ಅಧ್ಯಯನದ ಅಗತ್ಯವಿದೆ.'

-ನಾ.ಡಿಸೋಜ,ಸಾಹಿತಿ

ನಿಕಟಪೂರ್ವ ಅಧ್ಯಕ್ಷ ಡಾ. ಗುಂಡಾ ಜೋಯ್ಸ್  ಧ್ವಜ ಹಸ್ತಾಂತರ ಮಾಡಿ ಮಾತನಾಡಿ, ಕನ್ನಡಿಗರರು ಇರುವವರೆಗೆ ಕನ್ನಡ ಇರುತ್ತದೆ ಎಂಬುದನ್ನು ವಿದ್ವಾಂಸರು ಹೇಳಿದ್ದಾರೆ.ನ್ಯಾಯಾಲಯದಲ್ಲಿ  ನ್ಯಾಯ ತೀರ್ಮಾನದ ಆದೇಶ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಕನ್ನಡದ ಕಡತಗಳು ಹಾಳಾಗುತ್ತಿರುವುದು, ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕಡತಗಳು ನಾಶವಾಗುತ್ತಿರುವುದು  ವಿಷಾದನೀಯ, ಕನ್ನಡ ಭಾಷಾ ಬೆಳವಣಿಗೆಯಲ್ಲಿ ಕಾನೂನು ವಿಧೇಯಕ ಬಂದರೆ  ಇನ್ನಷ್ಟು ಬೆಳವಣಿಗೆ ಸಾಧ್ಯ ಎಂದರು.

Similar News