ಬೆಂಗಳೂರಿನಲ್ಲಿ ವಿಕಿರಣಶೀಲ ರೇಡಾನ್ ಹೆಚ್ಚಿನ ಮಟ್ಟದಲ್ಲಿರುವುದನ್ನು ಪತ್ತೆ ಹಚ್ಚಿದ ಐಐಎಸ್ಸಿ

Update: 2023-02-04 14:27 GMT

ಬೆಂಗಳೂರು: ಬೆಂಗಳೂರಿನ (Bengaluru) ಹೊರವಲಯಗಳಲ್ಲಿ, ವಿಶೇಷವಾಗಿ ಗ್ರಾನೈಟ್ ಗಣಿಗಾರಿಕೆ ಹೆಚ್ಚುತ್ತಿರುವ ಪ್ರದೇಶಗಳಲ್ಲಿಯ ವಾಯು ಮತ್ತು ನೀರಿನಲ್ಲಿ ಅಪಾಯಕಾರಿ ವಿಕಿರಣಶೀಲ ರೇಡಾನ್ ಹೆಚ್ಚಿನ ಮಟ್ಟದಲ್ಲಿರುವುದನ್ನು ಇಲ್ಲಿಯ ಭಾರತೀಯ ವಿಜ್ಞಾನ ಸಂಸ್ಥೆ (IISc)ಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ ಎಂದು newindianexpress.com ವರದಿ ಮಾಡದೆ.

ರೇಡಾನ್ ಕಣಗಳನ್ನು ಉಸಿರಾಡಿದರೆ ಅವು ಶ್ವಾಸಕೋಶಗಳಲ್ಲಿ ಸಿಕ್ಕಿಕೊಳ್ಳುತ್ತವೆ ಮತ್ತು ಕ್ರಮೇಣ ಶ್ವಾಸಕೋಶ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತವೆ. ತಜ್ಞರ ಪ್ರಕಾರ ಯುರೇನಿಯಂ ರಾಸಾಯನಿಕವಾಗಿ ಪ್ರತಿಕ್ರಿಯಾತ್ಮಕ ಪರಮಾಣುವಾಗಿ ಪರಿವರ್ತನೆಗೊಳ್ಳುವ ಮುನ್ನ ರೇಡಿಯಂ ವಿಘಟನಕ್ಕೊಳಗಾಗುತ್ತದೆ, ಹೀಗಾಗಿ ರೇಡಾನ್ ವಿಕಿರಣಶೀಲ ರೂಪಾಂತರದ ಮೂಲಕ ಯುರೇನಿಯಂನಿಂದ ನೈಸರ್ಗಿಕವಾಗಿ ಸೃಷ್ಟಿಯಾಗುತ್ತದೆ.

ರೇಡಾನ್ ನ ಅನುಮತಿಸಲ್ಪಟ್ಟ ಮಿತಿ ಪ್ರತಿ ಲೀಟರ್ಗೆ 30ರಿಂದ 60 ಮೈಕ್ರೋಗ್ರಾಮ್ಗಳಾಗಿದ್ದರೆ ಬೆಂಗಳೂರಿನ ಭಾಗಗಳಲ್ಲಿ ಇದು ಪ್ರತಿ ಲೀ.ಗೆ 1,000 ಮೈಕ್ರೋಗ್ರಾಮ್ಗಳಷ್ಟಿದೆ ಎನ್ನುವುದು ಸಂಶೋಧಕರ ಪ್ರಾಥಮಿಕ ಅಧ್ಯಯನಗಳಿಂದ ಗೊತ್ತಾಗಿದೆ. ಹೀಗಾಗಿ ನೀರಿನಲ್ಲಿ ರೇಡಾನ್ ಅಧ್ಯಯನವು ಈಗ ಸಂಶೋಧಕರ ಅಗ್ರ ಆದ್ಯತೆಯನ್ನು ಪಡೆದುಕೊಂಡಿದೆ.

ವಾಯು ಮತ್ತು ನೀರಿನಲ್ಲಿ ರೇಡಾನ್ ಅಸ್ತಿತ್ವವು ಶ್ವಾಸಕೋಶದ ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಶ್ವಾಸಕೋಶ ಕ್ಯಾನ್ಸರ್ ನ ಅಪಾಯವನ್ನೊಡ್ಡುತ್ತದೆ ಹಾಗೂ ಯುರೇನಿಯಂ ಅಸ್ತಿತ್ವವು ಮೂತ್ರನಾಳದ ಮೇಲೆ ದುಷ್ಪರಿಣಾಮವನ್ನು ಬೀರುವ ಮೂಲಕ ಮೂತ್ರಪಿಂಡ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ರೇಡಾನ್ ಯುರೇನಿಯಂನಿಂದ ನೈಸರ್ಗಿಕವಾಗಿ ಸೃಷ್ಟಿಯಾಗುವುದರಿಂದ ಯುರೇನಿಯಂ ಅಂಶವೂ ಅಧಿಕವಾಗಿರಬಹುದು ಎನ್ನುವುದನ್ನು ಸಂಶೋಧಕರು ಗಮನಿಸಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ ಮತ್ತು ಪಾವಗಡ ಸೇರಿದಂತೆ ಬೆಂಗಳೂರಿನ ಹೊರವಲಯಗಳಲ್ಲಿಯ ಅಂತರ್ಜಲದಲ್ಲಿ ಯುರೇನಿಯಂ ಅಂಶವು ಅಧಿಕವಾಗಿದೆ ಎನ್ನುವುದನ್ನು ಅವರು ಪತ್ತೆ ಹಚ್ಚಿದ್ದಾರೆ.

ಬೆಂಗಳೂರಿನ ಹೊರವಲಯಗಳಲ್ಲಿಯ ಕೆಲವು ಭಾಗಗಳಲ್ಲಿಯ ನೀರಿನಲ್ಲಿ ಯುರೇನಿಯಂ ಅಂಶವು ಪ್ರತಿ ಲೀ.ಗೆ 60 ಮೈಕ್ರೋಗ್ರಾಮ್ಗಳ ಅನುಮತಿಸಲ್ಪಟ್ಟ ಮಿತಿಗೆ ವಿರುದ್ಧವಾಗಿ 8,000 ಮೈಕ್ರೋಗ್ರಾಮ್ಗಳಷ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ. ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿಂತಾಮಣಿಗಳಲ್ಲಿ ಅದು ಪ್ರತಿ ಲೀ.ಗೆ 5,000-6,000 ಮೈಕ್ರೋಗ್ರಾಮ್ನಷ್ಟಿದೆ. ರೇಡಾನ್ ಪ್ರಮಾಣವು ಕಳವಳಕಾರಿ ಮಟ್ಟದಲ್ಲಿರುವುದರಿಂದ ಆ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ಐಐಎಸ್ಸಿಯ ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ (ಡಿಸಿಸಿಸಿ)ನ ಪ್ರೊ.ಆರ್.ಶ್ರೀನಿವಾಸನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರದೇಶದಲ್ಲಿ ಚೆನ್ನಾಗಿ ಗಾಳಿಯಾಡುತ್ತಿದ್ದರೆ ವಾಯುವಿನಲ್ಲಿ ರೇಡಾನ್ ಹೆಚ್ಚು ಕಳವಳದ ವಿಷಯವಲ್ಲ,ಆದರೆ ಅದು ಒಳಾಂಗಣಗಳಲ್ಲಿ ಸಂಗ್ರಹಗೊಳ್ಳಬಾರದು ಎಂದು ಐಐಎಸ್ಸಿಯಲ್ಲಿ ಆರೋಗ್ಯ ವೃತ್ತಿಪರರಿಗೆ ಏರ್ಪಡಿಸಲಾಗಿರುವ ಎರಡು ದಿನಗಳ ತರಬೇತಿ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶ್ರೀನಿವಾಸನ್ ತಿಳಿಸಿದರು.

ರೇಡಾನ್ ಕುರಿತು ಹೆಚ್ಚಿನ ಅಧ್ಯಯನವಿಲ್ಲ:ಅಧಿಕಾರಿಗಳು
ಚಿಕ್ಕಬಳ್ಳಾಪುರದಂತಹ ಕೆಲವು ಪ್ರದೇಶಗಳಲ್ಲಿ ಅನುಮತಿಸಲ್ಪಟ್ಟ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೇಡಾನ್ ಪತ್ತೆಯಾಗಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಹಾಗೂ ಡಿಸಿಸಿಸಿಯಲ್ಲಿ ಪ್ರೊಫೆಸರ್ ಆಗಿರುವ ಡಾ.ಎಚ್.ಪರಮೇಶ ಅವರೂ ದೃಢಪಡಿಸಿದರು.

ಕುತೂಹಲದ ಸಂಗತಿಯೆಂದರೆ ನೀರಿನಲ್ಲಿ ರೇಡಾನ್ ಅಸ್ತಿತ್ವದ ಕುರಿತು ಅಂತರ್ಜಲ ಮಂಡಳಿಯ ಕೆಲವು ನಿವೃತ್ತ ಅಧಿಕಾರಿಗಳು ಅಧ್ಯಯನ ನಡೆಸಿದ್ದರೆ,ಪ್ರಸ್ತುತ ಸೇವೆಯಲ್ಲಿರುವ ಅಧಿಕಾರಿಗಳು ತಾವು ಈ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಡೆಸಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಸಂಸ್ಕರಿತ ನೀರಿನಲ್ಲಿಯೂ ಯುರೇನಿಯಂ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಅದನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಬಗ್ಗೆಯೂ ಗಮನವನ್ನು ಹರಿಸಲಾಗುತ್ತಿದೆ ಎಂದು ಶ್ರೀನಿವಾಸನ್ ತಿಳಿಸಿದರು.

ರಿವರ್ಸ್ ಆಸ್ಮಾಸಿಸ್ (ಶುದ್ಧ ನೀರನ್ನು ಉತ್ಪಾದಿಸುವ ಒಂದು ವಿಧಾನ)ನ ನೀರಿನಲ್ಲಿಯೂ ಅಧಿಕ ಪ್ರಮಾಣದಲ್ಲಿ ಯುರೇನಿಯಂ ಅಂಶವಿರುವುದನ್ನು ಅಧ್ಯಯನಗಳು ಬಹಿರಂಗಗೊಳಿಸಿವೆ ಮತ್ತು ಇದು ಕಳವಳದ ವಿಷಯವಾಗಿದೆ ಎಂದು ಶ್ರೀನಿವಾಸನ್ ತಿಳಿಸಿದರು. ಈ ನಡುವೆ ಸಂಶೋಧಕರು ಬಿಟುಮೆನ್,ಝಿರ್ಕಾನ್ ಮತ್ತು ಮೋನಾಝೈಟ್ನಂತಹ ಖನಿಜಗಳಿಂದಲೂ ಯುರೇನಿಯಂ ಹೊಮ್ಮುತ್ತದೆ ಎಂದು ಹೇಳಿದ್ದಾರೆ.

Similar News