ಹಿಂದುತ್ವ ರಾಷ್ಟ್ರ ನಿರ್ಮಾಣಕ್ಕೆ ‘ಎನ್‌ಇಪಿ’ ಟೂಲ್‌ಕಿಟ್: ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಸಂಕಿರಣ

Update: 2023-02-05 11:38 GMT

ಮಂಗಳೂರು, ಫೆ.5: ದೇಶಕ್ಕೆ ಸಂವಿಧಾನಬದ್ಧವಾದ ರಾಷ್ಟ್ರೀಯ ಶಿಕ್ಷಣ ನೀತಿಯ ಅಗತ್ಯವಿದ್ದರೂ 2020ರಲ್ಲಿ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿ( NEP-2020)ಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದು ಸಂಕುಚಿತ ಅಜೆಂಡಾವನ್ನು ಹೊಂದಿದೆ. ಪ್ರಜೆಗಳ ಅಹವಾಲಿಗೆ ಅವಕಾಶ ಸಿಗದೆ ತಯಾರಿಸಲಾದ ‘ಎನ್‌ಇಪಿ’ಯು ಹಿಂದುತ್ವ ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ಟೂಲ್‌ಕಿಟ್‌ನಂತಿದೆ ಎಂದು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಅಭಿಪ್ರಾಯಿಸಿದ್ದಾರೆ.

ಅಖಿಲ ಭಾರತ ಯುವಜನ ಒಕ್ಕೂಟ (AIYF) ದ.ಕ. ಮತ್ತು ಉಡುಪಿ, ಸಮದರ್ಶಿ ವೇದಿಕೆ ಮಂಗಳೂರು, ಕರ್ನಾಟಕ ಥಿಯೋಲಾಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮಂಗಳೂರು ಇದರ ಸಹಯೋಗದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ನಗರದ ಸಹೋದಯ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಶಾಲಾ ಶಿಕ್ಷಣ’ ಎಂಬ ವಿಷಯದಲ್ಲಿ ಅವರು ಮಾತನಾಡುತ್ತಿದ್ದರು.

ಇದು ಜನರನ್ನು ದಿಕ್ಕು ತಪ್ಪಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿದೆ. ಶಿಕ್ಷಣದ ಜ್ವಲಂತ ಸಮಸ್ಯೆಗಳಿಗೆ ಇದು ಎಲ್ಲೂ ಉತ್ತರ ಕೊಡುವುದಿಲ್ಲ. 1986ರ ಶಿಕ್ಷಣ ನೀತಿಯು ದೂರದೃಷ್ಟಿಯಿಂದ ಕೂಡಿದ್ದರೆ 2020ರ ಶಿಕ್ಷಣ ನೀತಿಯು ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ರೂಪಿಸಿದ್ದ ಸಮಿತಿಯಲ್ಲಿ ನುರಿತ ಶಿಕ್ಷಣ ತಜ್ಞರೇ ಇರಲಿಲ್ಲ. ಪ್ರಾದೇಶಿಕ ಪ್ರಾತಿನಿಧ್ಯವೂ ಸಿಕ್ಕಿರಲಿಲ್ಲ. ಸಂಸತ್ತಿನಲ್ಲಾಗಲೀ, ಜನಸಾಮಾನ್ಯರ ಮಧ್ಯೆಯಾಗಲೀ ಚರ್ಚೆಗೂ ಅವಕಾಶ ನೀಡಲಿಲ್ಲ. ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ಬಳಿಯುವುದು, ಹಿಜಾಬ್ ಸಮಸ್ಯೆ ಹುಟ್ಟು ಹಾಕುವುದು ಇತ್ಯಾದಿ ಫ್ಯಾಶಿಸ್ಟ್ ಸಂಸ್ಕೃತಿಯ ಭಾಗವಾಗಿರುವ ಇದು ಹಿಟ್ಲರ್ ಮನಸ್ಥಿತಿಯಿಂದ ಕೂಡಿದೆ ಎಂದು ಡಾ. ನಿರಂಜನಾರಾಧ್ಯ ಹೇಳಿದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾರತೀಯ ಭಾಷೆಗಳು’ ವಿಷಯದ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮ,ೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಕರ್ನಾಟಕವನ್ನು ಹೊರತುಪಡಿಸಿ ದೇಶದ ಬೇರೆ ಯಾವ ರಾಜ್ಯದಲ್ಲೂ ಜಾರಿಗೆ ಬಂದಿಲ್ಲ. ಈ ನೀತಿಯ ಮೂಲಕ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶ ಇದೆಯಾದರೂ ಅದರ ಲಾಭವನ್ನು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಮಾತನಾಡುವ ಸಂಸ್ಕೃತ ಭಾಷಿಗರು ಮಾತ್ರ ಪ್ರಯೋಜನ ಪಡೆಯುವಂತಹ ವಾತಾವರಣವನ್ನು ಸೃಷ್ಟಿಸಲಾಗಿದೆ. ಸಂಸ್ಕೃತ ಭಾಷೆಯ ಅಭಿವೃದ್ಧಿಯ ನೆಪದಲ್ಲಿ ನೂರಾರು ಕೋ.ರೂ. ಅನುದಾನವನ್ನು ಬಳಸಿಕೊಳ್ಳಲಾಗಿದೆ. ಆರೆಸ್ಸೆಸ್‌ಗೆ ಪ್ರಯೋಜನ ಪಡೆಯುವಂತಹ ತಂತ್ರಗಾರಿಕೆ ಇದಾಗಿದೆ ಎಂದರು.

ವಿವಿಧ ಭಾಷೆಗಳನ್ನು ಬಳಕೆ ಮಾಡುವ ಜನರ ಸಂಖ್ಯೆಯ ಬಗ್ಗೆ ಮೋದಿ ಸರಕಾರ ನಿಖರ ಮಾಹಿತಿಗಳು ಸಿಗದಂತೆ ನೋಡಿಕೊಳ್ಳುತ್ತದೆ. ಮಾಹಿತಿಗಳನ್ನು ಬಚ್ಚಿಡುವುದರಲ್ಲಿ ಮೋದಿ ಸರಕಾರ ಸದಾ ಪ್ರಾವೀಣ್ಯತೆಯನ್ನು ಪಡೆದಿದೆ. ಮಾಹಿತಿಗಳು, ಅಂಕಿಅಂಶಗಳನ್ನು ಗೌಪ್ಯವಾಗಿಸಿಕೊಂಡು ದುರುದ್ದೇಶಗಳನ್ನು ಈಡೇರಿಸುತ್ತಿವೆ. ಇದು ಆತಂಕಕಾರಿ ಬೆಳವಣಿಗೆ  ಎಂದ ಡಾ. ಪುರುಷೋತ್ತಮ ಬಿಳಿಮಲೆ, ದೇಶದ ಕೆಲವು ರಾಜ್ಯಗಳಲ್ಲಿ ಆಡಳಿತ ಭಾಷೆಯಾಗಿ ಇತರ ಸ್ಥಳೀಯ ಪ್ರಮುಖ ಭಾಷೆಗಳನ್ನು ಅಂಗೀಕರಿಸಲಾಗುತ್ತಿದೆ. ಆದರೆ ಎನ್‌ಇಪಿ ಜಾರಿಗೆ ತರಾತುರಿ ತೋರಿರುವ ರಾಜ್ಯ ಸರಕಾರವು ಕನ್ನಡವಲ್ಲದೆ ಇತರ ಪ್ರಮುಖ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಸ್ವೀಕರಿಸುವ ಮನೋಭಾವ ಹೊಂದಿಲ್ಲ. ಇತ್ತೀಚೆಗಷ್ಟೇ ತುಳು ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿದೆ. ಇದು ಚುನಾವಣೆಯ ತಂತ್ರದ ಭಾಗವಾಗಿ ಎಂದರು.

ರಾಜ್ಯದಲ್ಲಿ ಕನ್ನಡವಲ್ಲದೆ ಇತರ 72 ಭಾಷೆಗಳನ್ನಾಡುವ ಜನರಿದ್ದಾರೆ. ಆದರೆ ಅವುಗಳನ್ನು ಬೆಳೆಸುವ ಆಸಕ್ತಿ ಸರಕಾರಕ್ಕಿಲ್ಲ. ಉರ್ದು, ಬ್ಯಾರಿ ಭಾಷೆಯ ಬೆಳವಣಿಗೆಗೆ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಗಾಧತೆಯನ್ನು ವಿಶ್ವವ್ಯಾಪಿಗೊಳಿಸಲು ತುಳು ವಿಶ್ವವಿದ್ಯಾನಿಲಯ ಸ್ಥಾಪಿಸಬಹುದಿತ್ತು. ಆದರೆ ರಾಜ್ಯ ಸರಕಾರವು ಕೇಂದ್ರದ ನಾಯಕರನ್ನು ಮೆಚ್ಚಿಸಲು ಹಿಂದಿ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆ ಎಂದು ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

‘ಪಠ್ಯ ಹಾಗೂ ಶಿಕ್ಷಣ ಕ್ರಮ’ ಬಗ್ಗೆ ಮಾತನಾಡಿದ ಶಿಕ್ಷಣ ತಜ್ಞ ಡಾ.ಸುಕುಮಾರ್ ಗೌಡ, 2020ರ ಶಿಕ್ಷಣ ನೀತಿಯಿಂದ ರಾಷ್ಟ್ರಕ್ಕೆ ಒಳಿತಿನ ಬದಲು ಹಾನಿಯೇ ಹೆಚ್ಚು. ಈ ನೀತಿಯು ಶುದ್ಧ ಸುಳ್ಳಿನಿಂದ ಕೂಡಿದೆ. ಯಾವ ಕಾರಣಕ್ಕೂ ಇದು ಅಂಗೀಕಾರಕ್ಕೆ ಅರ್ಹವಾದುದಲ್ಲ. ಸರ್ವರಿಗೂ ಸಮಾನ ಶಿಕ್ಷಣ ಕಲಿಸಬೇಕು ಎಂಬ ಸ್ಪಷ್ಟ ಆಶಯವೇ ಇದರಲ್ಲಿಲ್ಲ. ಮನುಸ್ಮತಿಯನ್ನು ಜಾರಿಗೊಳಿಸುವುದೇ ಅದರ ಮುಖ್ಯ ಉದ್ದೇಶವಾಗಿದೆ. ಇದನ್ನು ರೂಪಿಸಿದ ಸಮಿತಿಯ ಸದಸ್ಯರಿಗೆ ಸಂಶೋಧನೆಯಲ್ಲೂ ನಂಬಿಕೆ ಇಲ್ಲವಾಗಿದೆ. ಈ ನೀತಿಯ ಬಗ್ಗೆ ಈಗಾಗಲೆ ನಡೆಸಲಾದ ಕಾರ್ಯಾಗಾರಗಳ ಸಂದರ್ಭ ಇದರ ವಿರುದ್ಧ ಶಿಕ್ಷಕರು ಅಪಸ್ವರ ಎತ್ತದೆ ವೌನವಾಗಿರುವುದು ಕೂಡ ವಿಪರ್ಯಾಸವಾಗಿದೆ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ವೈದ್ಯಕೀಯ ಶಿಕ್ಷಣ’ ಬಗ್ಗೆ ಮಾತನಾಡಿದ ಡಾ.ಬಿ.ಶ್ರೀನಿವಾಸ ಕಕ್ಕಿಲಾಯ, ಕೋವಿಡ್ ಕಾಲದಲ್ಲಿ ಜನರು ಭಯ ಭೀತಿಯಲ್ಲಿರುವಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಯಿತು. ವೈದ್ಯಕೀಯ ಶಿಕ್ಷಣದ ಮೇಲೆ ಈ ನೀತಿಯು ಕೆಟ್ಟ ಪರಿಣಾಮ ಬೀರಲಿದೆ ಎಂದು ನಾನು ಆರಂಭದಲ್ಲೇ ಹೇಳಿದ್ದೆ. ಇದನ್ನು ಪ್ರಬಲವಾಗಿ ವಿರೋಧಿಸಬೇಕಿದ್ದ ಐಎಂಎ ಕೂಡ ಆ ವೇಳೆ ಮೌನಕ್ಕೆ ಶರಣಾಯಿತು. ಕೆಲವು ತಿಂಗಳ ಬಳಿಕ ‘ಮಿಕ್ಸೋಪತಿ’ಯ ವಿರುದ್ಧ ಹೇಳಿಕೆ ನೀಡಿ ಸುಮ್ಮನಾಯಿತು. ಆರೆಸ್ಸೆಸ್ ಕಾರ್ಯಕರ್ತರು ತುಂಬಿರುವ ನ್ಯಾಶನಲ್ ಮೆಡಿಕಲ್ ಕಮಿಷನ್ ಮೂಲಕ ಇಡೀ ವೈದ್ಯಕೀಯ ಶಿಕ್ಷಣ, ವೈದ್ಯಕೀಯ ರಂಗದ ಮೇಲೆ ಹತೋಟಿ ಸಾಧಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಯೋಗಕ್ಕೂ, ಆರೋಗ್ಯಕ್ಕೂ ಸಂಬಂಧವೇ ಇಲ್ಲ. ಯೋಗವು ವೈದ್ಯಕೀಯ ಚಿಕಿತ್ಸಾ ಪದ್ಧತಿಯೂ ಅಲ್ಲ. ಈಗಾಗಲೆ ಎಂಬಿಬಿಎಸ್ ಪಠ್ಯದಲ್ಲಿ ಯೋಗವನ್ನು ಸೇರಿಸಲಾಗಿದೆ. ಇನ್ನು ಕೆಲವು ವರ್ಷಗಳ ಬಳಿಕ ಎಂಬಿಬಿಎಸ್ ಬದಲು ‘ಐಎಂಜಿ’ ಎಂಬ ಹೆಸರನ್ನು ಬಳಕೆ ಮಾಡುವ ಸಾಧ್ಯತೆ ಇದೆ ಎಂದು ಡಾ.ಬಿ.ಶ್ರೀನಿವಾಸ ಕಕ್ಕಿಲಾಯ ಹೇಳಿದರು.

ನವಕರ್ನಾಟಕ ಪ್ರಕಾಶನ ಪ್ರಕಟಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕೃತಿಯನ್ನು ಬಿಡುಗಡೆಗೊಳಿಸುವ ಮೂಲಕ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎಂ. ವಾಟ್ಸನ್ ಕಾರ್ಯಕ್ರಮ ಉದ್ಘಾಟಿಸಿದರು.

‘ಹೊಸತು’ ಪತ್ರಿಕೆಯ ಸಂಪಾದಕ ಡಾ.ಸಿದ್ಧನಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐವೈಎಫ್ ರಾಜ್ಯ ಕಾರ್ಯದರ್ಶಿ ಸಂತೋಷ್ ಕುಮಾರ್ ವೇದಿಕೆಯಲ್ಲಿದ್ದರು. ಎಐವೈಎಫ್ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು. ಆಕೃತಿ ಪ್ರಕಾಶನದ ನಾಗೇಶ್ ಕಲ್ಲೂರು ಕಾರ್ಯಕ್ರಮ ನಿರೂಪಿಸಿದರು. 

Similar News