ಸಂಸದ ತೇಜಸ್ವಿಯನ್ನು ಅಮಾವಾಸ್ಯೆ ಸೂರ್ಯ ಎನ್ನದೆ ಬೇರೇನು ಹೇಳಬೇಕು?: ಸಿದ್ದರಾಮಯ್ಯ

ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟ ಎಂಬ ಹೇಳಿಕೆಗೆ ಆಕ್ರೋಶ

Update: 2023-02-08 14:56 GMT

ಕಲಬುರಗಿ: 'ಸಂಸದ ತೇಜಸ್ವಿ ಸೂರ್ಯ ಅವರು ರೈತರ ಸಾಲ ಮನ್ನಾ ಮಾಡುವುದರಿಂದ ದೇಶದ ಮೇಲೆ ದುಷ್ಪರಿಣಾಮ ಬೀರುತ್ತದೆ, ಇದಕ್ಕಾಗಿ ರೈತರ ಸಾಲ ಮನ್ನಾ ಮಾಡಬಾರದು ಎಂದಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಂಡವಾಳಶಾಹಿಗಳು, ಉದ್ಯಮಿಗಳ 14 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ. ಇದರಿಂದ ದೇಶಕ್ಕೆ ಲಾಭವಾಗಿದೆಯಾ?' ಎಂದು ವಿಧಾನಸಭೆ ವಿಪಕ್ಷ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ''ಒಂದು ರಾಷ್ಟ್ರೀಯ ಪಕ್ಷದ ಯುವಮೋರ್ಚ ಅಧ್ಯಕ್ಷರಾಗಿ ಇಂಥಾ ಮಾತು ಹೇಳುತ್ತಾರೆ ಎಂದರೆ ಅವರನ್ನು ಅಮಾವಾಸ್ಯೆ ಸೂರ್ಯ ಎನ್ನದೆ ಬೇರೆ ಏನು ಹೇಳಬೇಕು? ಇದು ಅವರ ವೈಯಕ್ತಿಯ ಅಭಿಪ್ರಾಯವಲ್ಲ, ಬಿಜೆಪಿ ಪಕ್ಷದ ಆಂತರಿಕ ಅಭಿಪ್ರಾಯ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದರು. 

ಇದನ್ನೂ ಓದಿ: ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ಉಪಯೋಗ ಇಲ್ಲ: ಸಂಸದ ತೇಜಸ್ವಿ ಸೂರ್ಯ

'ಯುಪಿಎ ಅವಧಿಯಲ್ಲಿ ಮನಮೋಹನ್‌ ಸಿಂಗ್‌ ಅವರು 72,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷದ 27 ಸಾವಿರ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿದ್ದ 8,165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಇದನ್ನು ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಹೇಳಿರಲಿಲ್ಲ. ರೈತರ ಕಷ್ಟವನ್ನು ಅರ್ಥ ಮಾಡಿಕೊಂಡು ಸಾಲಮನ್ನಾ ಮಾಡಿದ್ದೆ. ರೈತರ ಮಗ, ರೈತ ಹೋರಾಟಗಾರ ಎಂದು ಕರೆದುಕೊಳ್ಳುವ ಯಡಿಯೂರಪ್ಪ ಅವರಿಗೆ ಸಾಲಮನ್ನಾ ಮಾಡಿ ಎಂದು ಉಗ್ರಪ್ಪನವರು ಸದನದಲ್ಲಿ ಒತ್ತಾಯಿಸಿದ್ದಕ್ಕೆ ನಮ್ಮ ಬಳಿ ನೋಟ್‌ ಪ್ರಿಂಟ್‌ ಮಾಡುವ ಮೆಷಿನ್ ಇಲ್ಲ ಎಂದಿದ್ದರು' ಎಂದು ತಿಳಿಸಿದರು. 

''2017ರಲ್ಲಿ ಮೋದಿ ಅವರು 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ್ದರು. 2023 ಬಂದಿದೆ, ಆದಾಯ ದುಪ್ಪಟ್ಟಾಗಿದೆಯಾ? ಗೊಬ್ಬರ, ಬೀಜ, ರಾಸಾಯನಿಕ ಔಷಧಗಳ ಬೆಲೆ, ರೈತರ ಸಾಲ ದುಪ್ಪಟ್ಟಾಗಿದೆಯೇ ವಿನಃ ಆದಾಯ ದುಪ್ಪಟ್ಟಾಗಿಲ್ಲ. ಮೋದಿ ಅವರು ಈ ರೀತಿ ನಾಡಿನ ರೈತರಿಗೆ ಮೋಸ ಮಾಡಿದ್ದಾರೆ'' ಎಂದು ಆರೋಪಿಸಿದರು. 

'ಕಲಬುರಗಿ ಭಾಗದ ತೊಗರಿ ಬೆಳೆಗೆ ನೆಟೆ ರೋಗ ಬಂದು ಸುಮಾರು 70% ಬೆಳೆ ನಷ್ಟವಾಗಿದೆ. ಸದನದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರನ್ನು ಕಲಬುರಗಿ, ಬೀದರ್‌, ಯಾದಗಿರಿಗೆ ಹೋಗಿ ರೈತರ ಕಷ್ಟ ಕೇಳಿದೇನ್ಯಪ್ಪ ಎಂದು ಪ್ರಶ್ನೆ ಮಾಡಿದರೆ ನನಗೆ ಖಾಯಿಲೆ ಬಂದಿತ್ತು, ಹೋಗಿಲ್ಲ ಎಂದು ಉತ್ತರಿಸಿದ್ದರು. ಜನರ ಕಷ್ಟ ಕೇಳಲು ಆಗದಿದ್ರೆ ರಾಜೀನಾಮೆ ಕೊಟ್ಟಬಿಡಪ್ಪ ಎಂದು ಸಲಹೆ ನೀಡಿದ್ದೆ. ಇವತ್ತಿನ ವರೆಗೆ ಸರ್ಕಾರದಿಂದ ರೈತರಿಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ. ಹೆಕ್ಟೇರ್‌ ಗೆ 10,000 ಪರಿಹಾರ ನೀಡುವುದಾಗಿ ಬಾಯಿಮಾತಿಗೆ ಸರ್ಕಾರ ಹೇಳಿದೆ, ಇದನ್ನು 2 ಹೆಕ್ಟೇರ್‌ ಗೆ ಸೀಮಿತಗೊಳಿಸಲಾಗಿದೆ. ಫಸಲ್‌ ಬಿಮಾ ಯೋಜನೆಯಡಿ ಕೂಡ ಈ ಬೆಳೆ ನಷ್ಟಕ್ಕೆ ಪರಿಹಾರ ಸಿಗಲ್ಲ' ಎಂದು ತಿಳಿಸಿದರು.  

Similar News