[ಫೆಬ್ರವರಿ -14-17] ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ದಿನ ನಡೆದಿದ್ದೇನು?

Update: 2023-03-20 10:31 GMT

ಬೆಂಗಳೂರು, ಫೆ. 19: ಫೆಬ್ರವರಿ 14ರಿಂದ  17ರ ವರೆಗೆ ನಾಲ್ಕು ದಿನಗಳು ನಡೆದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ  ನ್ಯಾಯಾಲಯದ ವಿಚಾರಣೆಯ ವರದಿಯನ್ನು ಚಿಂತಕ ಶಿವ ಸುಂದರ್ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. 

ಶಿವ ಸುಂದರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವುದು ಇಲ್ಲಿದೆ...

ಆತ್ಮೀಯರೇ ,

ಗೌರಿ ಲಂಕೇಶ್ ಹತ್ಯಾ ಪ್ರಕರಣದ  ವಿಚಾರಣೆಯು  ಫೆಬ್ರವರಿ 14 ರಿಂದ  17 ರವರೆಗೆ ನಡೆಯಿತು. ಒಟ್ಟು 7  ಸಾಕ್ಷಿಗಳ ಹೇಳಿಕೆ ಮತ್ತು ಪಾಟಿ ಸವಾಲುಗಳು ನಡೆದರೆ , ಕಳೆದ ತಿಂಗಳು ಅಪೂರ್ಣವಾಗಿದ್ದ ಸಾಕ್ಷಿ ರಾಜ ಕುಮಾರರ ಪಾಟಿ ಸವಾಲನ್ನು  ಈ ಬಾರಿ ಮುಂದುವರಿಸಲಾಯಿತು. 

ಕಳೆದ ತಿಂಗಳು ಪೀಠದಲ್ಲಿದ್ದ ನ್ಯಾ. ರಾಮಚಂದ್ರ ಹುದ್ದಾರ್ ಅವರು ಹೈಕೋರ್ಟ್ ನ್ಯಾಯಾಧೀಶರಾಗಿ ಪದೋನ್ನತಿ ಪಡೆದದ್ದರಿಂದ, ಈಗ ಆ ಪೀಠದಲ್ಲಿ ನ್ಯಾ. ಮುರಳೀಧರ ಪೈ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

-ಎಸ್.ಆರ್. ವಿರೇಂದ್ರ ಪ್ರಸಾದ, ಪೋಲೀಸ್ ನಿರೀಕ್ಷಕರು, ಚನ್ನರಾಯಪಟ್ಟಣ

ಇವರು 2017 ರ ಸೆಪ್ಟೆಂಬರ್ ಅವಧಿಯಲ್ಲಿ ಬೆಂಗಳೂರಿನ ಚಂದ್ರಾ ಲೇ ಔಟ್ ಠಾಣೆಯ ನಿರೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಸೆಪ್ಟೆಂಬರ್ 6, 2017 ರಂದು ಎಸಿಪಿ ಪ್ರಕಾಶ್ ಅವರ ಆದೇಶದ ಮೇರೆಗೆ ಗೌರಿ ಲಂಕೇಶ್ ಮನೆಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್, ಸಿಸಿಟಿವಿ ಕ್ಯಾಮಾರಾದ ದೃಶ್ಯಾವಳಿಗಳಿದ್ದ ಡಿವಿಆರ್ ಇತ್ಯಾದಿಗಳನ್ನು ಸಂಗ್ರಹಿಸಿ ಅದನ್ನು ಬೆಂಗಳೂರಿನ ಮೆಗ್ರಾಥ್ ರಸ್ತೆಯಲ್ಲಿರುವ ಐಎಫ್ಎಫ್ ಲ್ಯಾಬಿಗೆ ಕೊಟ್ಟು ಬಂದಿದ್ದರ ಬಗ್ಗೆ ಸಾಕ್ಷಿ ನುಡಿದರು. ಈ ಪ್ರಕ್ರಿಯೆಯನ್ನು ನಡೆಸಲು ಪಡೆದುಕೊಳ್ಳಬೇಕಾದ ನೋಟೀಸು, ಪಂಚರ ಸಾಕ್ಷಿ, ಮತ್ತು ಅಂದು ಸಂಜೆ ತಜ್ಞರು ವಸ್ತುಗಳನ್ನು ಹಿಂತಿರುಗಿಸಿದಾಗ ಅದಕ್ಕೆ ಸಾಕ್ಷಿಗಳಾದ ಪಂಚರು.. ಇತ್ಯಾದಿಗಳ ಬಗ್ಗೆ ಸಾಕ್ಷಿ ನುಡಿದರು.

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷ್ಯಗಳನ್ನು ತನಿಖೆಗೆ ಮತ್ತು ಪರಿಶೋಧನೆಗೆ ಕೊಡುವಾಗ ಅನುಸರಿಸಿರುವ ಪ್ರಕ್ರಿಯೆಯಲ್ಲಿ ಲೋಪಗಳಿವೆಯೆಂದು ಆರೋಪಿಸಿ ಕೆಲವು ಪ್ರಶ್ನೆಗಳನ್ನು ಕೇಳಿದರು. ಹಾಗೂ ಸುಳ್ಳು ಸಾಕ್ಷಿ ನೀಡುತ್ತಿರುವುದಾಗಿ ಆರೋಪಿಸಿದರು. ಸಾಕ್ಷಿಯು ಅದನ್ನು ನಿರಾಕರಿಸಿದರು.

- ಸುರೇಶ್ ಎಂ. ಎನ್ – ಅಬಕಾರಿ ನಿರೀಕ್ಷಕರು – ಉಡುಪಿ

ಇವರು 2018 ರಲ್ಲಿ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ಅಬಕಾರಿ ನಿರೀಕ್ಷಕರಾಗಿದ್ದರು.

ಇವರನ್ನು 2018 ರ ಆಗಸ್ಟ್ 3 ರಂದು ಪಂಚರಾಗಿ ಪೊಲೀಸ್ ತನಿಖೆಗೆ ಸಹಕರಿಸಬೇಕೆಂದು ಅವರ ಮೇಲಧಿಕಾರಿಗಳು ಸೂಚಿಸಿದಂತೆ ಪಂಚರಾಗಿ ತಾವು ಸಾಕ್ಷಿಯಾದದ್ದನ್ನು ಹೇಳಿಕೆ ನೀಡಿದರು. ಅಂದು ಪೋಲಿಸ್ ತನಿಖಾಧಿಕಾರಿಗಳ ಜೊತೆಗೆ ಆರೋಪಿ ಸುರೇಶ್ ಜೊತೆಗೂಡಿ ಮಾಗಡಿ ರಸ್ತೆಯ ತಾವರೆಕೆರೆ ಹೋಬಳಿ ತಿಪ್ಪಗೊಂಡನಹಳ್ಳಿಯ ಬಳಿ ಯಲ್ಲಪ್ಪನಹಳ್ಳಿಯ ಅರ್ಕಾವತಿ ಸೇತುವೆ ಬಳಿ ಹೋದುದಾಗಿ ತಿಳಿಸಿದರು.

ಅಲ್ಲಿ ವಾಹನಗಳನ್ನು ನಿಲ್ಲಿಸಿ ಆರೋಪಿ  ತೋರಿಸಿದ ಕುರುಚಲು ಪೊದೆಗಳ ಬಳಿ ಹುಡುಕಾಡಿದಾಗ  ಪ್ಲಾಸ್ಟಿಕ್ ಕವರಿನಲ್ಲಿ ಇನ್ನಷ್ಟು ಸುತ್ತಿಟ್ಟಿರುವ ಪ್ಲಾಸ್ಟಿಕ್ ಕವರ್ ಗಳು, ಜಿಪ್ ಇರುವ ಬ್ಯಾಗು ಇತ್ಯಾದಿ ಸಿಕ್ಕವು. ಅದನ್ನು ತಮ್ಮ ಸಮಕ್ಷಮದಲ್ಲಿ ಪೊಲೀಸರು ತೆರೆದು ನೋಡಿದಾಗ ಅದರಲ್ಲಿ ವಾಹನದ ನಂಬರ್ ಪ್ಲೇಟಿನ ಚೂರುಗಳು, ಮೂರು ಟೂತ್ ಬ್ರಶ್  ಮತ್ತು ಬಾಚಣಿಗೆಗಳು ದೊರೆತವು. ಮತ್ತೊಂದರಲ್ಲಿ  ಗಂಡಸರ ತುಂಬುತೋಳಿನ ಶರ್ಟು ಹಾಗೂ ಮಣ್ಣಿನೊಂದ ಕೂಡಿದ ಸುಟ್ಟ ಪ್ಲಾಸ್ಟಿಕ್  ಕವರ್ ದೊರೆಯಿತೆಂದು ಹೇಳಿದರು. ಆ ನಂತರ ಅವನ್ನು ತಮ್ಮ ಸಮಕ್ಷಮದಲ್ಲಿ ಸಿಲ್ ಮಾಡಿ ವಾಪಸ್ ಎಸಐಟಿ ಕಚೇರಿಗೆ ಬಂದುದಾಗಿ ತಿಳಿಸಿದರು. ಅಲ್ಲದೆ ಆರೋಪಿ ಸುರೇಶ್ ಅವರನ್ನು ವಿಡಿಯೋ ಕಾನ್ಫರೆನ್ಸಿನಲ್ಲಿ ಗುರುತಿಸಿದರು 

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯು ಹೇಳುತ್ತಿರುವ ಜಾಗ, ವಶಪಡಿಸಿಕೊಂಡ ವಸ್ತುಗಳ ವಿವರಗಳು ತಾಳೆಯಾಗದಿರುವ ಬಗ್ಗೆ ಪ್ರಶ್ನಿಸಿದರು. ಮತ್ತು ಮಹಜರು ವರದಿಯನ್ನು ಟೈಪಿಸಲು ಬಳಸಿದ  ಪ್ರಿಂಟರಿನ ಕಂಪನಿಯ ವಿವರಗಳನ್ನು ಕೇಳಿದಾಗ ಅವು ತಮಗೆ ನೆನಪಿಲ್ಲ ಎಂದು ಸಾಕ್ಷಿ ಉತ್ತರಿಸಿದರು. ಹಾಗೂ ತಾನು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂಬ ಆರೋಪಿ ಪರ ವಕೀಲರ ಆರೋಪವನ್ನು ನಿರಾಕರಿಸಿದರು. 

ಇದನ್ನೂ ಓದಿ:  ಗೌರಿ ಲಂಕೇಶ್ ಹತ್ಯೆಯಲ್ಲಿ ಸುಳ್ಳು ಸುದ್ದಿಯ ಬೃಹತ್ ಜಾಲದ ಪಾತ್ರ ಬಯಲು ಮಾಡಿದ 'ಫೋರ್ ಬಿಡನ್ ಸ್ಟೋರೀಸ್'

-  ರಂಗನಾಥ್ - ಕ್ಯಾಬ್ ಚಾಲಕ- ಸೀಗೆಹಳ್ಳಿ, ಬೆಂಗಳೂರು 

ಇವರು 2017 ರಲ್ಲಿ  ಸೀಗೇಹಳ್ಳಿಯಲ್ಲಿ ವಾಸವಾಗಿದ್ದ ಮನೆಯ ಪಕ್ಕದಲ್ಲೇ ಸುರೇಶ್ ಅವರು ಕುಟುಂಬದ ಜೊತೆ ವಾಸವಿದ್ದುದಾಗಿ ಹೇಳಿದರು.

 2017 ರ ಅಕ್ಟೊಬರ್ ನಲ್ಲಿ ಒಮ್ಮೆ ಸುರೇಶ್ ಅವರ ಮನೆಗೆ ಸ್ಪ್ಲೆಂಡರ್ ಬೈಕಿನಲ್ಲಿ ಇಬ್ಬರು ಆಸಾಮಿಗಳು ಬಂದಿದ್ದನ್ನು ನೋಡಿದ್ದಾಗಿ ಸಾಕ್ಷಿ ನುಡಿದರು. ಆನಂತರ 2018 ರ ಆಗಸ್ಟ್ 8 ರಂದು ಪೊಲೀಸರು ಸುರೇಶ್  ಅವರ ಮನೆಗೆ ಯಾರಾದರೂ ಹೊಸಬರು ಬಂದಿದ್ದರೆ ಎಂದು ಕೇಳಿದಾಗ ಇಬ್ಬರು ಹೊಸಬರು ಬಂದಿದ್ದನ್ನು ಹೇಳಿದುದಾಗಿ ಹೇಳಿಕೆ ನೀಡಿದರು. ನಂತರ ಅದೇ ಹೇಳಿಕೆಯನ್ನು ಅವರು ಎಸಐಟಿ ಮುಂದೆಯೂ ಆ ನಂತರ ಆಗಸ್ಟ್ 30 ರಂದು ನ್ಯಾಯಾಲಯದಲ್ಲೂ ಹೇಳಿದುದಾಗಿ ಹೇಳಿದರು. ಆ ನಂತರ ನ್ಯಾಯಾಲಯದ ಆದೇಶದ ಮೇರೆಗೆ ಆ ಇಬ್ಬರು ಯಾರೆಂಬುದನ್ನು ಗುರುತಿಸಲು ಪರಪ್ಪನ ಅಗ್ರಹಾರಕ್ಕೆ ಹೋಗಿ, ಅಲ್ಲಿ ತಹಶೀಲ್ದಾರ್ ಅವರ ಸಮಕ್ಷಮದಲ್ಲಿ ತಮ್ಮ ಮುಂದೆ ಹಾಜರಾದ ಹಲವು ಆರೋಪಿಗಳಲ್ಲಿ ಅಂದು ಸುರೇಶ್ ಮನೆಗೆ ಬಂದದ್ದು ಯಾರು ಎಂಬುದನ್ನು ಗುರುತಿಸಿದ್ದಾಗಿ ನುಡಿದರು. ಈ ಸಾಕ್ಷಿಯ  ಮುಖ್ಯ ವಿಚಾರಣೆಯನ್ನು ಮುಂದೂಡಲಾಯಿತು .. 

-  ಸುಕುಮಾರ್- ನಿವೃತ್ತ  ಪಿಎಸ್ಐ - ಬೇಗೂರು.

ಇವರು 1998-2020 ರ ವರೆಗೆ ಗುಪ್ತವಾರ್ತೆ ಕಚೇರಿಯಲ್ಲಿ ಕೆಲಸ  ನಿರ್ವಹಿಸಿರುತ್ತಾರೆ. 2017 ರ ಸೆಪ್ಟೆಂಬರ್ 7 ರಂದು ಮೇಲಧಿಕಾರಿಗಳ ಆದೇಶದ ಮೇರೆಗೆ ಗೌರಿ ಲಂಕೇಶ್ ಮನೆಯೆದುರು ತಪಾಸಣೆಯ ಕೆಲಸಕ್ಕೆ ಅಧಿಕಾರಿಯ ಮುಂದೆ ಹಾಜರಾಗುತ್ತಾರೆ. ಹಾಗೂ ಅಂದು ಸಂಜೆ ಐದು ಗಂಟೆಯಿಂದ ಗೌರಿಯವರ ಮನೆಯ ಹೊರ ಆವರಣದಲ್ಲಿ ತಪಾಸಣೆ ಮಾಡಿದಾಗ ಫೈರಿಂಗ್ ಆದ ಮೂರು ಗುಂಡುಗಳು ಪತ್ತೆಯಾದವು ಎಂದು ಹೇಳಿಕೆ ನೀಡಿದರು. ಹಾಗೂ ಆ ನಂತರ 2018 ರ ಆಗಸ್ಟ್ 18  ರಂದು ಆರೋಪಿ ಭರತ್ ಕುರ್ನಿಯವರು ನೀಡಿದ ಮಾಹಿತಿಯ ಮೇರೆಗೆ ಮೇಲಾಧಿಕಾರಿಯ ಆದೇಶದಂತೆ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ  ಬೆಳಗಾವಿಯ ಕಿಣಯೆ ಗ್ರಾಮದ ಸರ್ವೇ ನಂಬರ್ 100/2 ಜಮೀನಿಗೆ ಹೋಗಿರುತ್ತಾರೆ. ಅಲ್ಲಿ ಮೇಲಧಿಕಾರಿಗಳ ಆದೇಶದಂತೆ ಕುರುಚಲು ಗಿಡಗಳಿಂದ ಕೂಡಿದ್ದ ಪ್ರದೇಶವನ್ನು ಸಮತಟ್ಟು ಗೊಳಿಸಿ ಫೈರ್  ಮಾಡಲಾದ ಕಾಟ್ರಿಡ್ಜ್ ಗಳನ್ನೂ ಹುಡುಕಿದಾಗಿಯೂ,  ಆದರೆ ಮಳೆ ಬರುತ್ತಿದ್ದರಿಂದ ಏನೂ ಸಿಗಲಿಲ್ಲವೆಂದು ಹೇಳಿಕೆ ಇತ್ತರು . 

- ಸತೀಶ್ ಹೆಚ್.ಬಿ. - ಪ್ರಥಮ ದರ್ಜೆ ಸಹಾಯಕ- ನಾಗಸಂದ್ರ
 
2018  ರಲ್ಲಿ ಸತೀಶ್ ಅವರು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. 2018 ರ ಜೂನ್  4 ರಂದು ಕಚೇರಿಯು ಕೊಟ್ಟ ಸೂಚನೆಯ ಮೇರೆಗೆ ಎಸಐಟಿ ಕಛೇರಿಗ್ಗೆ ಪಂಚರಾಗಿ ಪೊಲೀಸ್ ತನಿಖೆಗೆ ಸಹಕರಿಸಲು ಹೋಗಿದ್ದಾಗಿ ಹೇಳಿದರು. ಅಲ್ಲಿ ಆರೋಪಿ ಸುಜಿತ್ ಕುಮಾರ್ ಮತ್ತು ಪೋಲಿ ಸಿಬ್ಬಂದಿಗಳ ಜೊತೆ ಮೆಟ್ರೋ ಮನುವನದ ಬಳಿ ಆದಿಚುಂಚನಗಿರಿ ಕಾಂಪ್ಲೆಕ್ಸ್ ಎದುರು ಇದ್ದ ಪಾರ್ಕಿನ ಬಳಿ ಆರೋಪಿಯ ಮಾಹಿತೆ ಮೇರೆಗೆ ನಿಲ್ಲಿಸಲಾಯಿತು. ಆ ಪಾರ್ಕಿನಲ್ಲಿ ಇದ್ದ ಬೆಂಚೊಂದನ್ನು ತೋರಿಸಿ ತಾನು ಮತ್ತು ನವೀನ್ ಕುಮಾರ್ ಇಲ್ ಕೂತು ಗೌರೀ ಲಂಕೇಶ್ ಹತ್ಯೆ ಸಂಚು ರೂಪಿಸಿದೆವು ಎಂದು ಹೇಳಿದರು.  

ಏಕೆ ಎಂದು ಕೇಳಿದಾಗ ಗೌರಿ ಲಂಕೇಶರು ಹಿಂದೂ ದೇವತೆಗಳನ್ನು ಅವಹೇಳನ ಮಾಡುತ್ತಿದ್ದರು ಆದ್ದರಿಂದ ಎಂದು ಸುಜಿತ್ ಹೇಳಿದುದಾಗಿ ಸಾಕ್ಷಿಯು ಹೇಳಿಕೆಯನ್ನು ನೀಡಿದರು

ಅವೆಲ್ಲವನ್ನು ಅದೇ ಜಾಗದಲ್ಲಿ ಟೈಪ್ ಮಾಡಿ ಸುಜಿತ್ ಕುಮಾರ್ ಗೆ ಸಹಿ ಮಾಡಲು ಹೇಳಿದಾಗ ಅವರು ಸಹಿ ಮಾಡಲು ನಿರಾಕರಿಸಿದುದಾಗಿಯೂ ಸಾಕ್ಷ್ಯ ನುಡಿದರು.

ಹಾಗೂ ಸುಜಿತ್ ಕುಮಾರ್ ಅವರನ್ನು ವಿಡಿಯೋ ಕಾನ್ಫರೆನ್ಸಿನಲ್ಲಿ ಗುರುತಿಸಿದರು. 

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯು ಮಹಜರು ನಡೆದ ಸ್ಥಳಕ್ಕೆ ಹೋದ ವಾಹನ, ಪಾರ್ಕಿನ ಹಾಗೂ ಬೆಂಚಿನ ವಿವರ , ಚೆಕ್ಕು ಬಂದಿ  ಮತ್ತು ಹೇಳಿಕೆಯನ್ನು ಟೈಪಿಸಲಾದ ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ಗಳ  ನಿಖರ ವಿವರಗಳ ಪ್ರಶ್ನೆ ಕೇಳಿದಾಗ ಕೆಲವು ಮರೆತಿದೆ ಎಂದು ಸಾಕ್ಷಿ ಉತ್ತರ ನೀಡಿದರು. ತಾವು ಸುಳ್ಳು ಸಾಕ್ಷ್ಯ ನುಡಿಯುತ್ತಿಲವೆಂದು ಹೇಳಿದರು ಮತ್ತು ಸುಜಿತ್ ಅವರ ಫೋಟೋವನ್ನು ಪೊಲೀಸರು ತೋರಿಸಿದ್ದರಿಂದ ಗುರುತಿಸಲು ಸಾಧ್ಯವಾಗಿದೆ ಎಂಬುದನ್ನು ನಿರಾಕರಿಸಿದರು. 

- ಶಿವಾನಂದ ಮಾಳಗಿ - ಹೋಟೆಲ್ ಉದ್ಯೋಗಿ - ಬೆಳಗಾವಿ

ಇವರು ಬೆಳಗಾವಿಯ ಮುಖ್ಯ ಬಸ್ ನಿಲ್ದಾಣದ ಎದುರಿರುವ ಹೋಟೆಲ್ ಸ್ವೀಕಾರ್ ನ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. 2018 ರ ಮೇ 29  ರಂದು ಆರೋಪಿ ಮನೋಹರ್ ಜೊತೆಗೆ ಪೊಲೀಸ್ ಸಿಬ್ಬಂದಿಗಳು ಮತ್ತು ಇಬ್ಬರು ಪಂಚರು ತಮ್ಮ ಹೋಟೆಲ್ ಗೆ ಬಂದರೆಂದು , ಪೊಲೀಸರು ಅಲ್ಲಿ ಕುಳಿತು ಸ್ವಲ್ಪ ಹೊತ್ತು ಮಾತನಾಡುವುದಾಗಿ ಹೇಳಿದರು. ಆ ಸಮಯದಲ್ಲಿ ತಾನು ಪಕ್ಕದಲ್ಲೇ ಇದ್ದು ಆರೋಪಿ ಮನೋಹರ್ ಅವರು ಒಂದು ವರ್ಷದ ಕೆಳಗೆ ತಾನೂ, ಬಾಬಾ ಸಾಹೇಬ್ ಮತ್ತು ದಾದಾ ಸಾಹೇಬ್ ಅವರು ಇದೆ ಹೋಟೆಲಿನ ಫ್ಯಾಮ್ಮಿಲಿ ಸೆಕ್ಷನ್ ನಲ್ಲಿ  ಕುಳಿತು ಗೌ ರೀ ಲಂಕೇಶ್ ಹತ್ಯೆಯ  ವಿಚಾರಾದ ಬಗ್ಗೆ ಮಾತಾಡಿದ್ದಾಗಿ ಹೇಳಿದರೆಂದು ಸಾಕ್ಷ್ಯ ನುಡಿದರು. ಮತ್ತು ಅದರ ಬಗ್ಗೆ ಪೊಲೀಸರು ಅಲ್ಲೇ ತಯಾರು ಮಾಡಿದ ಹೇಳಿಕೆಗೆ ತಾನು ಸಹಿ ಹಾಕಿದ್ದಾಗಿ ಹೇಳಿ ಆ ಹೇಳಿಕೆಯನ್ನು ಮತ್ತು ಸಹಿ ಯನ್ನು ಗುರುತಿಸಿದರು. ಮತ್ತು ವಿಡಿಯೋ ಕಾನ್ಫರೆನ್ಸಿನಲ್ಲಿ ಮನೋಹರ್ ಅವರನ್ನು ಗುರುತಿಸಿದರು. 

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಹೋಟೆಲಿನ ಸ್ಥಳ ವಿವರಗಳ ಬಗ್ಗೆ ಹಾಗೂ ಸಾಕ್ಷಿಯು ಯಾವಾಗಿನಿಂದ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಪೋಲೀಸರ ಚಿತಾವಣೆ ಮೇರೆಗೆ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೀರಾ ಮತ್ತು ಇಲ್ಲಿಗೆ ಬರುವ ಮುಂಚೆ ಪೊಲೀಸವು ತೋರಿಸಿದ ಫೋಟೋ ನೋಡಿ ಮನೋಹರ್ ಅವರನ್ನು ಗುರುತು ಹಿಡಿದಿದ್ದೀರಾ ಎಂಬ ಆರೋಪಿ ಪರ ವಕೀಲರ ಆರೋಪವನ್ನು ಸಾಕ್ಷಿಯು ನಿರಾಕರಿಸಿದರು. 

- ವಿಶ್ವನಾಥ- ಗಾರೆ ಕೆಲಸ - ಬಿಜಾಪುರ

ಇವರು 2018 ರ ಮೇ 25  ರಂದು ಬಿಜಾಪುರದ ಗ್ಯಾಂಗೋಡಿ ಎನ್ನುವ ಪರಿಸರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲಿಗೆ ಬಂದಿದ್ದ ಪೊಲೀಸರು  ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ  ಪಂಚನಾಮೆಗೆ ಸಹಕರಿಸಬೇಕೆಂದು ಕೇಳಿಕೊಂಡರು. ಪೊಲೀಸರೊಂದಿಗೆ ಅಲ್ಲಿ ಇದ್ದ ಒಂದು ಮನೆಯ ಬಳಿ ಹೋದೆವು. ಅದು ಬೀಗ ಹಾಕಿತ್ತು. ಪಕ್ಕದ ಮನೆಯವರು ಕೇಳಿ ತಂದುಕೊಟ್ಟರು. ನನ್ನ ಸಮಕ್ಷಮದಲ್ಲಿ ಮನೆಯ ಬೀಗವನ್ನು ತೆರೆದು ಒಳಹೋದೆವು. ಅಲ್ಲಿದ್ದ ಒಂದು ಗುರುತಿನ ಕಾರ್ಡ್, ಒಂದು ಪಾಸ್ ಪೋರ್ಟ್ ಮತ್ತು ಮತ್ತು ಒಂದು ಡೈರಿಯನ್ನು ವಶಪಡಿಸಿಕೊಂಡರು . ಅವೆಲ್ಲವನ್ನು ಅಲ್ಲೇ ಬರೆದುಕೊಂಡು ನನ್ನ ಸಹಿ ಹಾಕಿಸಿಕೊಂಡರು ಎಂದು ಹೇಳಿಕೆ  ನೀಡಿದರು.

ಪಾಟಿ ಸವಾಲಿನಲ್ಲಿ  ಆರೋಪಿ ಪರ ವಕೀಲರು ಸಾಕ್ಷಿಯ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಹಾಗೂ ಅವರ ಮೇಲೆ ಎರಡು ಕ್ರಮಿನಲ್ ಕೇಸು ಬಾಕಿ ಇರುವ ಬಗ್ಗೆ ಕೇಳಿದರು. ಪೊಲೀಸರೊಂದಿಗೆ ಒಳ್ಳೆಯ  ಸಂಬಂಧಗಳನ್ನು ಇಟ್ಟುಕೊಳ್ಳುವ ಸಲುವಾಗಿಯೇ ಪೊಲೀಸರು ಹೇಳಿದಂತೆ ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೀರೆಂದು ಆರೋಪಿಸಿದರು. ಸಾಕ್ಷಿಯೂ ಅದನ್ನು ನಿರಾಕರಿಸಿದರು. 

- ರಾಜ್ ಕುಮಾರ್ - 

ಇವರ ಪಾಟಿ ಸವಾಲು ಹೋದ ತಿಂಗಳು  ಅರ್ಧಕ್ಕೆ ನಿಂತಿತ್ತು. ಈ ಸಾಕ್ಷಿಯು 2018 ರ ಮೇ 21 ರಂದು ಆರೋಪಿ ಸುಜಿತ್ ಕುಮಾರ್  ಬಂಧನದ ನಂತರ ಅವರು ಕೊಟ್ಟ ಮಾಹಿತಿಯ ಮೇರೆಗೆ ಇತರ ಆರೋಪಿಗಳನ್ನು ದಾವಣಗೆರೆಯಲ್ಲಿ ಬಂಧಿಸಲು ಪೊಲೀಸರೊಂದಿಗೆ ಪಂಚರಾಗಿ ಭಾಗವಹಿಸಲು ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಿಂದ ಪೋಲೀಸರ ಕೋರಿಕೆಯ ಮೇರೆಗೆ ಜೊತೆಗೆ ಹೊರಟು  ಬಂದಿದ್ದರು.  ದಾವಣಗೆರೆಯಲ್ಲಿ ಸುಜಿತ್ ಮಾಹಿತಿ ಮೇರೆಗೆ ಆರೋಪಿ ಅಮೋಲ್ ಕಾಲೇ, ಅಮಿತ್ ದೇಗ್ವೇಕರ್ ಮತ್ತು ಮನೋಹರ್ ಯಡವೇ ಅವರನ್ನು ಬಂಧಿಸಿ ಅವರ ಬಳಿ ಇದ್ದ ಸಾಮಾನುಗಳನ್ನು ವಶಪಡಿಸಿಕೊಂಡಿದ್ದರೆ ಬಗ್ಗೆ ಕಳೆದ ತಿಂಗಳು ಸಾಕ್ಷ್ಯ ಹೇಳಿದ್ದರು. 

ಪಾಟಿ ಸವಾಲಿನಲ್ಲಿ ಆರೋಪಿ ಪರ ವಕೀಲರು ಸಾಕ್ಷಿಯಿದ ವಶಪಡಿಸಿಕೊಂಡ ಎಲ್ಲಾ ವಸ್ತುಗಳ ಬಗ್ಗೆ ನಿಖರ ವಿವರಗಳನ್ನು ಕೇಳಿದರು. ಕೆಲವನ್ನು ಸಾಕ್ಷಿಯು ಹೇಳಲಾಗಲಿಲ್ಲ. ಕೆಲವು ನೆನಪಿಲ್ಲ ಎಂದು ಹೇಳಿದರು. ಪೊಲೀಸರೊಂದಿಗೆ ತಮಗಿರುವ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಸುಳ್ಳು ಸಾಕ್ಷ್ಯ ನುಡಿಯುತ್ತಿದೀರಾ ಎಂದು ಆರೋಪಿ ಪರ ವಕೀಲರು ಮಾಡಿದ ಆರೋಪವನ್ನು ಸಾಕ್ಷಿಯು ನಿರಾಕರಿಸಿದರು. 

ಮುಂದಿನ ವಿಚಾರಣೆ ಮಾರ್ಚ್ 13 ರಿಂದ ನಡೆಯಲಿದೆ. 

ಈ ವರದಿಯನ್ನು, ಕೋರ್ಟ್ ವೆಬ್ ಸೈಟಿನಲ್ಲಿರುವ ಸಾಕ್ಷಿಗಳ deposition ಗಳನ್ನೂ ಮತ್ತು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿ ಪಿ. ಮತ್ತು ಸರ್ಕಾರಿ ವಕೀಲರಾದ ಬಾಲನ್ ಅವರು ಕೊಟ್ಟ  ಮಾಹಿತಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ. 

– ಶಿವಸುಂದರ್

Full View

Similar News