ಅಡಿಕೆ ಬೆಳೆಗಾರರಿಗೆ ಬಿಜೆಪಿ ನೀಡಿರುವಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷಗಳೂ ನೀಡಿಲ್ಲ: ಜೆ.ಪಿ ನಡ್ಡಾ

ಕೊಪ್ಪ ಪಟ್ಟಣದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

Update: 2023-02-20 16:15 GMT

ಚಿಕ್ಕಮಗಳೂರು, ಫೆ.20: ಅಡಿಕೆ ಬೆಳೆ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಬೆಳೆಯಾಗಿ ರಾಜ್ಯದಲ್ಲಿ ಪ್ರಮುಖ ಉದ್ಯಮವಾಗಿ ಬೆಳೆದಿದೆ. ಅಡಿಕೆ ಬೆಳೆಗಾರರ ಏಳಿಗೆಗೆ ಬಿಜೆಪಿ ಪಕ್ಷ ನೀಡಿರುವಷ್ಟು ಕೊಡುಗೆಯನ್ನೂ ಬೇರೆಯಾವ ಪಕ್ಷಗಳೂ ನೀಡಿಲ್ಲ. ಈ ಬಗ್ಗೆ ದಾಖಲೆ ಸಹಿತ ಚರ್ಚೆಗೆ ಸಿದ್ಧ. ಅಡಿಕೆ ಬೆಳೆಯ ಮಾನ ಕಳೆದವರು ಕಾಂಗ್ರೆಸ್‍ನವರೇ ಹೊರತು ಬಿಜೆಪಿಯವರಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗನ್ನಾಥ್ ಪ್ರಸಾದ್ ನಡ್ಡಾ ಹೇಳಿದ್ದಾರೆ.

ಸೋಮವಾರ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಡಿಕೆ ವಿಚಾರದಲ್ಲಿ ಕೇಂದ್ರ ಸರಕಾರ ಪೂರಕ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ 2017ರಲ್ಲಿ ಅಡಿಕೆ ಬೆಳೆಯನ್ನು 2ಲಕ್ಷ 79 ಸಾವಿರ ಹೆ.ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು, ಪ್ರಸಕ್ತ 5 ಲಕ್ಷ 49 ಸಾವಿರ ಹೆ.ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. 2017ರಲ್ಲಿ ಅಡಿಕೆ ಬೆಳೆಗೆ ಪ್ರತೀ ಕ್ವಿಂಟಾಲ್‍ಗೆ 19 ಸಾವಿರ ರೂ. ಬೆಲೆ ಇತ್ತು, ಪ್ರಸಕ್ತ 35-45 ಸಾವಿರಕ್ಕೂ ಹೆಚ್ಚು ಬೆಲೆ ಇದೆ ಎಂದ ಅವರು, ಹೊರ ದೇಶಗಳಿಂದ ಆಮದಾಗುತ್ತಿರುವ ಅಡಿಕೆಯಿಂದ ಇಲ್ಲಿನ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಭಾವನೆ ಬೆಳೆಗಾರರಲ್ಲಿದೆ. ವಿದೇಶಿ ಅಡಿಕೆ ಆಮದು ಸುಂಕವನ್ನು ಮೂರು ಪಟ್ಟು ಏರಿಕೆ ಮಾಡಿರುವುದರಿಂದ ಅಡಿಕೆ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ ಎಂದರು.

ವಿದೇಶಗಳಿಂದ ಕಳಪೆ ಅಡಿಕೆಯನ್ನು ಕಳ್ಳಸಾಗಣೆ ಮೂಲಕ ತರಲಾಗುತ್ತಿತ್ತು, ಇದಕ್ಕೆ ಸರಕಾರ ಕಠಿಣ ಕ್ರಮವಹಿಸಿರುವುದರಿಂದ ಅಡಿಕೆ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದ ಅವರು, ಅಡಿಕೆ ಹಳದಿ ರೋಗ ಹಾಗೂ ಎಲೆಚುಕ್ಕಿ ರೋಗನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಟ್ಟದಲ್ಲಿ ರೋಗ ನಿಯಂತ್ರಣಕ್ಕೆ ಪ್ರಯೋಗಾಲಯ ಆರಂಭಿಸಲು ಚಿಂತನೆ ನಡೆಸಿದ್ದು, ಶೀಘ್ರ ಇದರ ಅನುಷ್ಠಾನಕ್ಕೆ ಕ್ರಮವಹಿಸಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಬಂಧ ಸಮಿತಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಈ ರೋಗ ನಿಯಂತ್ರಣಕ್ಕೆ 25 ಕೋ. ರೂ. ಅನುದಾನವನ್ನು ಮೀಸಲಿಡಲಾಗಿದ್ದು, ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋ. ರೂ. ಅನುದಾನ ನೀಡಲಾಗಿದೆ ಎಂದರು.

ಅಡಿಕೆ ಬೆಳೆ ರೋಗ ನಿಯಂತ್ರಣಕ್ಕೆ ಬೇಕಾಗಿರುವ ಕಾಪರ್‍ಸಲ್ಫೆಟ್ ಬಳಕೆಗೆ ಸಾಮಾನ್ಯ ವರ್ಗಕ್ಕೆ ಶೇ.75 ಹಾಗೂ ಎಸ್ಸಿ, ಎಸ್ಟಿ ರೈತರಿಗೆ ಶೇ.90ಸಬ್ಸಿಡಿ ನೀಡಲಾಗುತ್ತಿದೆ. ಜೊತೆಗೆ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ನಾಶವಾಗಿದ್ದು, ಇದಕ್ಕೆ 4 ಕೋ. ರೂ. ಪರಿಹಾರವನ್ನೂ ಸರಕಾರ ಘೋಷಿಸಿದೆ. ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಸರಕಾರ ಅಡಿಕೆ ಬೆಳೆಗಾರರೂ ಸೇರಿದಂತೆ ಬಡವರು, ಕಾರ್ಮಿಕರು, ಮಹಿಳೆಯರ ಪರ ನಿಲ್ಲಲು ಎಲ್ಲ ಕ್ರಮಗಳನ್ನು ವಹಿಸುತ್ತಿದೆ ಎಂದರು.

ಸಿಎಂ ಬೊಮ್ಮಾಯಿ ನೇತೃತ್ವದ ಸರಕಾರ ಹಾಗೂ ಹಿಂದಿನ ಸಿಎಂ ಯಡಿಯೂರಪ್ಪ ಅವರೂ ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರಂತೂ ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ 1983ರಲ್ಲಿ 63ಕಿಮೀ ಪಾದಯಾತ್ರೆಯನ್ನೇ ಮಾಡಿ ಸರಕಾರಗಳ ಗಮನಸೆಳೆದಿದ್ದಾರೆ. ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಕೆ ಬೆಳೆಗಾರರೂ ಸೇರಿದಂತೆ ಎಲ್ಲ ರೈತರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿ ಮಾಡುವ ಮೂಲಕ ರೈತಪರ ಇರುವ ಪ್ರಧಾನಿ ಎಂಬುದನ್ನು ಸಾಭೀತು ಮಾಡಿದ್ದಾರೆ. ಪ್ರಧಾನಿ ಮೋದಿ ನಿಜವಾದ ರೈತನಾಯಕ ಆಗಿದ್ದಾರೆ ಎಂದರು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಅನೇಕ ರೈತಪರ ಯೋಜನೆಗಳು ಪ್ರಸಕ್ತ ದೇಶಾದ್ಯಂತ ರೈತರ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗುತ್ತಿದೆ. ಕೇಂದ್ರ ಸರಕಾರದ ಫಸಲ್ ಬಿಮಾ ಯೋಜನೆಯಿಂದ 1ಲಕ್ಷ 20 ಸಾವಿರ ಕೋಟಿ ಹಣವನ್ನು ರೈತರಿಗೆ ಫಸಲ್‍ಭಿಮಾ ಯೋಜನೆ ಮೂಲಕ ನೀಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ಕೇಂದ್ರ ಸರಕಾರ ಪ್ರತೀ ರೈತರಿಗೆ ಪ್ರತೀ ವರ್ಷ 6 ಸಾವಿರ ರೂ. ನಂತೆ ಪ್ರತೀ ವರ್ಷ 11.79 ಕೋಟಿ ರೈತರ ಖಾತೆಗೆ ಸಹಾಯಧನ ಜಮೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಮಾನ್ ಧನ್ ಯೋಜನೆಯಡಿಯಲ್ಲಿ ದೇಶಾದ್ಯಂತ 20 ಲಕ್ಷ ರೈತರು ಹಾಗೂ ಕರ್ನಾಟದಲ್ಲಿ 40ಸಾವಿರ ಪ್ರಯೋಜನವಾಗುತ್ತಿದೆ. ಕೋವಿಡ್‍ನಂತ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿ ಅವರು ಕೃಷಿ ಮೂಲಸೌಕರ್ಯಕ್ಕಾಗಿ 1ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದರು.

ಈ ಹಿಂದೆ ಕೃಷಿಗೆ ಬಜೆಟ್‍ನಲ್ಲಿ 25ಸಾವಿರ ಕೋ. ರೂ. ಸಿಗುತ್ತಿತ್ತು, 1.32 ಲಕ್ಷ ಕೋಟಿ ರೂ. ಅನುದಾವನ್ನು ಕೇವಲ ಕೃಷಿಗಾಗಿ ಬಜೆಟ್‍ನಲ್ಲಿ ಮೀಸಲಿಟಿದ್ದಾರೆ. ಕೃಷಿ ಸಂಚಾಯಿ ಯೋಜನೆಯಡಿಯಲ್ಲಿ ನೀರಾವರಿಗೆ 93 ಸಾವಿರ 68 ಕೋ. ರೂ. ಅನುದಾನವನ್ನು ಸರಕಾರ ನೀಡುತ್ತಿದೆ. ಅಲ್ಲದೇ ಅನೇಕ ಬೆಳೆಗಳಿಗೆ ಎಂಎಸ್‍ಪಿ ನಿಗದಿ ಮಾಡಿ ರೈತರ ಹಿತ ಕಾಯುತ್ತಿದೆ. 2014ರಲ್ಲಿ ದೇಶ ಕೇವಲ ಎರಡು ಕೃಷಿಗೆ ಸಂಬಂಧಿಸಿದ ಮೆಗಾ ಪಾರ್ಕ್ ಹೊಂದಿತ್ತು, ಬಿಜೆಪಿ ಸರಕಾರ ಬಂದ ಮೇಲೆ ದೇಶಾದ್ಯಂತ 22 ಮೆಗಾ ಪಾರ್ಕ್‍ಗಳನ್ನು ನಿರ್ಮಿಸಿ ಕೃಷಿಗೆ ಆಧ್ಯತೆ ನೀಡಲಾಗಿದೆ ಎಂದರು.

ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯಸಭಾ ಸದಸ್ಯ ಅರುಣ್‍ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್, ಶಾಸಕ ಸಿ.ಟಿ.ರವಿ. ಮಾಜಿ ಸಚಿವ, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ಸೇರಿದಂತೆ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಮುಖಂಡರು ಉಪಸ್ಥಿತರಿದ್ದರು.

Similar News