ಮೋದಿ ಸರಕಾರದ ಅಚ್ಚುಮೆಚ್ಚಿನ ಸುದ್ದಿಸಂಸ್ಥೆ ANI ಅಸ್ತಿತ್ವದಲ್ಲಿಲ್ಲದ ಮೂಲಗಳನ್ನು ಉಲ್ಲೇಖಿಸುತ್ತಿದೆ: ವರದಿ

Update: 2023-02-26 16:44 GMT

ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ ಭಾರತೀಯ ಸುದ್ದಿಸಂಸ್ಥೆ ಏಶ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಕುರಿತು ತನಿಖಾ ವರದಿಯೊಂದನ್ನು ಪ್ರಕಟಿಸಿದ್ದ ಬ್ರಸೆಲ್ಸ್ ಮೂಲದ ಎನ್ಜಿಒ EU DisinfoLab (ಇಯುಡಿಎಲ್) ಈಗ ಮತ್ತೊಮ್ಮೆ ಅದನ್ನು  ತನ್ನ ವಿಶ್ಲೇಷಣೆಗೊಳಪಡಿಸಿದ್ದು,ಅದು ಅಸ್ತಿತ್ವದಲ್ಲಿಯೇ ಇಲ್ಲದ ಥಿಂಕ್ ಟ್ಯಾಂಕ್ಸ್ ಅಥವಾ ಚಿಂತನ ಚಿಲುಮೆಗಳು ಮತ್ತು ತಜ್ಞರ ಉಲ್ಲೇಖಗಳು ಮತ್ತು ಹೇಳಿಕೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದೆ ಎಂದು thewire.in ವರದಿ ಮಾಡಿದೆ.

ತಪ್ಪು ಮಾಹಿತಿ ಅಭಿಯಾನಗಳನ್ನು ಗುರಿಯಾಗಿಸಿಕೊಳ್ಳುವಲ್ಲಿ ಪರಿಣತಿ ಹೊಂದಿರುವ ಇಯುಡಿಎಲ್ ‘ಕೆಟ್ಟ ಮೂಲಗಳು:ಭಾರತೀಯ ಸುದ್ದಿಸಂಸ್ಥೆ ಎಎನ್ಐ ಅಸ್ತಿತ್ವದಲ್ಲಿಲ್ಲದ ಮೂಲಗಳನ್ನು ಉಲ್ಲೇಖಿಸಿದ್ದು ಹೇಗೆ ’ಎಂಬ ತನ್ನ ನೂತನ ವರದಿಯನ್ನು ಪ್ರಕಟಿಸಿದೆ. ಎಎನ್ಐ ಅಥವಾ ಕಪೋಲಕಲ್ಪಿತ ಗುಂಪುಗಳು ಮತ್ತು ವ್ಯಕ್ತಿಗಳನ್ನು ಉಲ್ಲೇಖಿಸಲಾದ ಎಎನ್ಐ ವರದಿಗಳನ್ನು ಮರುಮುದ್ರಣ ಮಾಡಿದ ಇತರ ಭಾರತೀಯ ಪ್ರಕಟಣೆಗಳಿಂದ ಯಾವುದೇ ಪ್ರತಿಕ್ರಿಯೆಯನ್ನು ತಾನು ಸ್ವೀಕರಿಸಿಲ್ಲ ಎಂದು ಇಯುಡಿಎಲ್ ಹೇಳಿದೆ.

ಗುರುವಾರ ಪ್ರಕಟಗೊಂಡಿರುವ ಇಯುಡಿಎಲ್ ವರದಿಯು 2019 ಮತ್ತು 2020ರಲ್ಲಿ ಪ್ರಕಟಗೊಂಡಿದ್ದ ಸರಣಿ ವರದಿಗಳಲ್ಲಿ ಮೂರನೆಯದಾಗಿದೆ. ದಿಲ್ಲಿ ಮೂಲದ ಶ್ರೀವಾಸ್ತವ ಗ್ರೂಪ್ ನಡೆಸುತ್ತಿದೆ ಎನ್ನಲಾಗಿರುವ ನಕಲಿ ಎನ್ಜಿಒಗಳು ಮತ್ತು ತಜ್ಞರನ್ನು ಆಧರಿಸಿರುವ ಹಾಗೂ ಎಎನ್ಐನಿಂದ ವರ್ಧಿಸಲ್ಪಟ್ಟಿರುವ ಭಾರತದ ಪ್ರಭಾವಿ ನೆಟ್ವರ್ಕ್ ಅನ್ನು ಈ ವರದಿಗಳು ಪರಿಶೀಲಿಸಿವೆ.

ಎಎನ್ಐ ಕಳೆದ ಏಳು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದ ಅಚ್ಚುಮೆಚ್ಚಿನ ಸುದ್ದಿಸಂಸ್ಥೆಯಾಗಿ ಹೊರಹೊಮ್ಮಿದ್ದು, ಅಮಿತ್ ಶಾ ಮತ್ತು ಎಸ್.ಜೈಶಂಕರ್ ಅವರಂತಹ ಕೇಂದ್ರ ಸಚಿವರು ತಮ್ಮ ಸಂದರ್ಶನಗಳನ್ನು ನೀಡಲು ಅದನ್ನು ಬಳಸುತ್ತಿದ್ದಾರೆ ಎಂದು thewire.in ವರದಿ ಮಾಡಿದೆ.

65ಕ್ಕೂ ಹೆಚ್ಚು ದೇಶಗಳಲ್ಲಿ 265 ನಕಲಿ ಸುದ್ದಿ ಜಾಲತಾಣಗಳನ್ನು ಹೊಂದಿರುವ ಭಾರತೀಯ ಪ್ರಭಾವಿ ನೆಟ್ವರ್ಕ್ ಅನ್ನು ತಾನು ಬಯಲಿಗೆಳೆದಿರುವುದಾಗಿ ಇಯುಡಿಎಲ್ ತನ್ನ 2019ರ ವರದಿಯಲ್ಲಿ ಹೇಳಿತ್ತು.

ಗುರುವಾರ ಪ್ರಕಟಗೊಂಡಿರುವ ವರದಿಯು ಕೆನಡಾ ಮೂಲದ ಥಿಂಕ್ ಟ್ಯಾಂಕ್ ‘ಇಂಟರ್ನ್ಯಾಷನಲ್ ಫೋರಮ್ ಫಾರ್ ರೈಟ್ಸ್ ಆ್ಯಂಡ್ ಸೆಕ್ಯುರಿಟಿ (IFFRAS)ನ ಜಾಲತಾಣವನ್ನು ಕೇಂದ್ರೀಕರಿಸಿದೆ. ಎಎನ್ಐ ಮೇ 2021 ಮತ್ತು ಜನವರಿ 2023ರ ನಡುವೆ 200ಕ್ಕೂ ಹೆಚ್ಚು ಸಲ IFFRAS ಅನ್ನು ಉಲ್ಲೇಖಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಅದು ಕೇವಲ ಉಲ್ಲೇಖಿಸುತ್ತಿರುವುದು ಮಾತ್ರವಲ್ಲ, IFFRAS ವರದಿಗಳನ್ನು ತನ್ನ ಲೇಖನಗಳ ಬೆನ್ನೆಲುಬಾಗಿಯೂ ಬಳಸುತ್ತಿದೆ ಎಂದು ಇಯುಡಿಎಎಲ್ ಹೇಳಿದೆ. 

IFFRAS 2014ರಲ್ಲಿ ವಿಸರ್ಜನೆಗೊಂಡಿದ್ದರೂ, ಅದರ ವೆಬ್ಸೈಟ್ ಆನ್ಲೈನ್ ನಲ್ಲಿ ಉಳಿದುಕೊಂಡಿದೆ ಮತ್ತು ಅದನ್ನು ಪರಿಷ್ಕರಿಸಲಾಗುತ್ತಿದೆ. ಅದೇ ಐಪಿ ವಿಳಾಸದಡಿ  IFFRAS ವೆಬ್ಸೈಟ್ ಮತ್ತು ಶ್ರೀವಾಸ್ತವ ಗ್ರೂಪ್ ನ ಇತರ ವೆಬ್ಸೈಟ್ ಗಳು ಕಾರ್ಯಾಚರಿಸುತ್ತಿವೆ.

ವೆಬ್ಸೈಟ್ ನಲ್ಲಿಯ ಸಮ್ಮೇಳನ ಸಾರಾಂಶಗಳಲ್ಲಿ ಉಲ್ಲೇಖಿಸಲಾದ ಭಾಷಣಕಾರರನ್ನು ಪತ್ತೆ ಹಚ್ಚಲು ತಾನು ಪ್ರಯತ್ನಿಸಿದ್ದೆ,ಆದರೆ ಹೆಚ್ಚಿನವರು ಅಸ್ತಿತ್ವದಲ್ಲಿಯೇ ಇಲ್ಲವೆಂಬಂತೆ ಕಂಡು ಬಂದಿದೆ. ಎಎನ್ಐ ವರದಿ ಮಾಡಬಹುದಾದ ಮತ್ತು ನಂತರ ಭಾರತೀಯ ಪತ್ರಿಕೆಗಳಾದ್ಯಂತ ವ್ಯಾಪಕವಾಗಿ ಮರುಪ್ರಕಟಣೆಗೊಳ್ಳುವ ವಿಷಯಗಳನ್ನು ಸೃಷ್ಟಿಸುವುದು ಐಎಫ್ಎಫ್ಆರ್ಎಎಸ್ನ ಏಕಮೇವ ಉದ್ದೇಶವಾಗಿದೆ ಎಂದು ತಾನು ಭಾವಿಸಿದ್ದೇನೆ ಎಂದು ಇಯುಡಿಎಲ್ ತನ್ನ ವರದಿಯಲ್ಲಿ ತಿಳಿಸಿದೆ.

ನಂತರ ಇಯುಡಿಎಲ್ ಸಂಶೋಧಕರು ಎಎನ್ಐ ಆಗಾಗ್ಗೆ ಉಲ್ಲೇಖಿಸಿದ್ದ ‘ಥಿಂಕ್ ಟ್ಯಾಂಕ್’ಗಳ ಇತರ ವಿದೇಶಿ ತಜ್ಞರ ಬಗ್ಗೆ ಗಮನ ಹರಿಸಿತ್ತು. ಆಗ ಅವರಿಗೆ ಪಾಲಿಸಿ ರೀಸರ್ಚ್ ಗ್ರೂಪ್ (ಪಿಒಆರ್ಇಜಿ) ಎದುರಾಗಿತ್ತು. ಪಾಕಿಸ್ತಾನದ ಸೇನೆಯ ಸಿದ್ಧಾಂತಗಳು ಮತ್ತು ಚೀನಿ ವಿದೇಶಾಂಗ ನೀತಿಯಂತಹ ವಿಷಯಗಳ ಕುರಿತು ಎಎನ್ಐ ಆಗಾಗ್ಗೆ ಈ ಪಿಒಆರ್ಇಜಿಯ ‘ಭೂರಾಜಕೀಯ ತಜ್ಞರನ್ನು ’ಉಲ್ಲೇಖಿಸಿತ್ತು.

ಜೇಮ್ಸ್ ಡಗ್ಲಾಸ್ ಕ್ರಿಕ್ಟನ್,ಮ್ಯಾಗ್ದಾ ಲಿಪನ್(ಇದನ್ನು ಕೆಲವೊಮ್ಮೆ ಮಗದ್ ಲಿಪನ್ ಅಥವಾ ಮ್ಯಾಗ್ದಾ ಲಿಪಿನ್ ಎಂದು ತಪ್ಪಾಗಿ ಬರೆಯಲಾಗಿತ್ತು) ಮತ್ತು ವ್ಯಾಲೆಂಟಿನ್ ಪೊಪೆಸ್ಕುನಂತಹ ಹೆಸರುಗಳನ್ನು ಹೊಂದಿರುವ ಈ ತಜ್ಞರನ್ನು ಸಂಪರ್ಕಿಸಲು ಹಲವಾರು ಪ್ರಯತ್ನಗಳನ್ನು ನಡೆಸಲಾಗಿತ್ತಾದರೂ ಅವರು ಲಭ್ಯರಿದ್ದಂತೆ ಕಂಡು ಬರಲಿಲ್ಲ ಎಂದು ಇಯುಡಿಎಲ್ ವರದಿ ಹೇಳಿದೆ.

ಎಎನ್ಐ 2021ರಲ್ಲಿ ಉಲ್ಲೇಖಿಸಲು ಆರಂಭಿಸಿದ್ದ ವರದಿಗಳು ಸೆಂಟರ್ ಆಫ್ ಪಾಲಿಟಿಕಲ್ ಆ್ಯಂಡ್ ಫಾರಿನ್ ಅಫೇರ್ಸ್ (ಸಿಪಿಎಫ್ಎ)ನಿಂದ ಪ್ರಕಟಗೊಂಡಿದ್ದವು. ಫ್ರಾನ್ಸ್ ಮೂಲದ ಮತ್ತು ಹಾಂಗ್ಕಾಂಗ್ನಲ್ಲಿ ನೋದಣಿಯಾಗಿರುವ ಈ ಥಿಂಕ್ಟ್ಯಾಂಕ್ ಅಸ್ತಿತ್ವದಲ್ಲಿದೆ ನಿಜ. ಆದರೆ ಸಿಪಿಎಫ್ಎ ತಂಡದ ಕಾನೂನುಬದ್ಧ ವರದಿಗಳ ಜೊತೆಗೆ ನೈಜ ವ್ಯಕ್ತಿಗಳೊಂದಿಗೆ ತಳುಕು ಹಾಕಲು ಸಾಧ್ಯವಿಲ್ಲದ ವಿಷಯಗಳನ್ನೂ ಎಎನ್ಐ ಪ್ರಕಟಿಸುತ್ತಿದೆ ಎಂದು ಇಯುಡಿಎಲ್ ವರದಿಯಲ್ಲಿ ಬೆಟ್ಟು ಮಾಡಿದೆ ಎಂದು thewire.in ವರದಿ ಮಾಡಿದೆ.

Similar News