ಬೌದ್ಧ ಧರ್ಮಕ್ಕೆ ಮತಾಂತರವಾಗುವುದನ್ನು ತಡೆಯಲು ಕಾನೂನಿನ ದುರ್ಬಳಕೆ: ಡಾ. ಯಶವಂತರಾವ್ ಅಂಬೇಡ್ಕರ್ ಕಳವಳ

ಮೈಸೂರಿನಲ್ಲಿ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನ

Update: 2023-02-26 16:44 GMT

ಮೈಸೂರು: ಬುದ್ಧ ದಮ್ಮಕ್ಕೆ ಮರಳುವವರನ್ನು ಕಾನೂನಿನ ಮೂಲಕವೇ ಹತ್ತಿಕ್ಕುವ ಹುನ್ನಾರ ಈ ದೇಶದಲ್ಲಿ ನಡೆಯುತ್ತಿದೆ ಎಂದು ಡಾ.ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ  ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಭೀಮರಾವ್ ಯಶವಂತ್‌ರಾವ್ ಅಂಬೇಡ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಲಲಿತ ಮಹಲ್ ಅರಮನೆ ಮೈದಾನದಲ್ಲಿ ರವಿವಾರ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಬೌದ್ಧ ಮಹಾ ಸಮ್ಮೇಳನವನ್ನು ಮಾತೆ ರಮಾಬಾಯಿ ವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಸೇರುವ ಅಧಿಕಾರ ಸಂವಿಧಾನದತ್ತವಾಗಿದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಈ ಹಕ್ಕು ಸೇರಿಸಿದ್ದಾರೆ. ಆದರೆ ಈಗ ಧಾರ್ಮಿಕ ಸ್ವಾತಂತ್ರ್ಯ, ಧಾರ್ಮಿಕ ಆಚರಣೆ ಹಕ್ಕನ್ನು ದಮನ ಮಾಡಲಾಗುತ್ತಿದೆ. ಇದು ಸಂವಿಧಾನಬಾಹಿರ. ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟು ಹಾಕಿದ ಬುದ್ಧ ದಮ್ಮ ಕ್ರಾಂತಿ ದೇಶದೆಲ್ಲೆಡೆ ತ್ವರಿತಗತಿಯಲ್ಲಿ ಹರಡಬೇಕು. ಇತ್ತೀಚಿನ ದಿನಗಳಲ್ಲಿ ಈ ಕ್ರಾಂತಿಗೆ ಮತ್ತೆ ವೇಗಸ್ಪರ್ಶ ದೊರೆತಿದೆ. ಉತ್ತರ ಪ್ರದೇಶದಲ್ಲಿ 10 ಸಾವಿರ ಹಿಂದುಳಿದ ವರ್ಗದವರು ಬೌದ್ಧ ಧರ್ಮ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದರು. 

ದೇಶದಲ್ಲಿ ಬುದ್ಧ ಧರ್ಮೀಯರು ಬಹಳಷ್ಟು ಜನರಿದ್ದಾರೆ. ಅದನ್ನು ದಾಖಲೆಯಲ್ಲಿ ತೋರಿಸುತ್ತಿಲ್ಲ. ವಾಸ್ತವ ಚಿತ್ರಣ, ಅಂಕಿಅಂಶಗಳನ್ನೂ ಮರೆಮಾಚಲಾಗುತ್ತಿದೆ. ಈ ಧರ್ಮದ ಜನಸಂಖ್ಯೆಯನ್ನು ಬರೀ 83 ಲಕ್ಷ ಎಂದು ಹೇಳಲಾಗುತ್ತದೆ. ಮಹಾರಾಷ್ಟ್ರ ರಾಜ್ಯವೊಂದರಲ್ಲೇ 63 ಲಕ್ಷ ಬೌದ್ಧರಿದ್ದಾರೆ. ಹೀಗಾಗಿ, ಈ ಅಂಕಿ ಸಂಖ್ಯೆಕ್ಕೂ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೀಘ್ರದಲ್ಲೇ ಜನಗಣತಿ ನಡೆಯಲಿದೆ. ಆ ಸಂದರ್ಭದಲ್ಲಿ ಧರ್ಮ ಕಾಲಂನಲ್ಲಿ ಬುದ್ಧ ಎಂದು ಬರೆಸಬೇಕು. ಉಪಜಾತಿ ಕಾಲಂ ತಮ್ಮ ಉಪಜಾತಿಯನ್ನೂ ನಮೂದಿಸಬೇಕು ಎಂದು ಕರೆಕೊಟ್ಟರು. 

ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಹಿಂದೂ ಧರ್ಮ ಎಂಬುದೇ ಇರಲಿಲ್ಲ. ಮನುಸ್ಮತಿಯ ಹಿಂದೂ ಧರ್ಮವನ್ನು ಬಲವಂತವಾಗಿ ಹೇರಲಾಯಿತು. ದಲಿತರು ಹಿಂದೂಗಳಲ್ಲ. 1911ರ ಗೆಜೆಟ್‌ನಲ್ಲಿ ಬ್ರಿಟಿಷರು ವೇದ-ಅಗಮನ-ಉಪನಿಷತ್ತು, ಬ್ರಾಹ್ಮಣ್ಯತ್ವ ಒಪ್ಪದವರು, ದನದ ಮಾಂಸ ತಿನ್ನುವವರು, ಮಂತ್ರೋಪಾಯವನ್ನು ಪಠಿಸದಿದ್ದವರು ಹಿಂದುಗಳಲ್ಲ ಎಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ನಾವು ಹಿಂದೂಗಳಲ್ಲ ಎಂದು ಹೇಳಿದರು.

ಭಾರತ ಬೌದ್ಧ ರಾಷ್ಟ್ರ. ಮೂರನೇ ಎರಡು ಭಾಗ ಈ ಧರ್ಮೀಯರು ಇದ್ದಾರೆ ಎಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿವಿವೇಕಾನಂದರು ಹೇಳಿದ್ದರು. ನಮ್ಮ ಪೂರ್ವಜರು ಬುದ್ಧ ಧರ್ಮೀಯರು. ಹೀಗಾಗಿ ನಾವು ಬುದ್ದ ಧಮ್ಮಕ್ಕೆ ಮರಳಬೇಕು. ಆದ್ದರಿಂದ ನಾವುಗಳೆಲ್ಲ ಇದಕ್ಕೆ ಬದ್ಧರಾಗಬೇಕು. ಇದು ಮತಾಂತರವಲ್ಲ, ಮರಳಿ ಮನೆಗೆ ಎಂದು ಹೇಳಿದರು.

ದಮ್ಮ ನಡಿಗೆ: ಇದಕ್ಕೂ ಮೊದಲು ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಮಾಲಾರ್ಪಣೆ ಮಾಡುವ ಮೂಲಕ ಧಮ್ಮ ನಡಿಗೆಗೆ ಚಾಲನೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಸ್ತಬ್ದಚಿತ್ರದೊಂದಿಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಪುರಭವನದಿಂದ ಹಾರ್ಡಿಜ್ ವೃತ್ತ, ಎಸ್.ಪಿ.ಕಚೇರಿ ಮಾರ್ಗವಾಗಿ ಟೆರಿಷಿಯನ್ ಕಾಲೇಜಿನ ರಸ್ತೆ ಮೂಲಕ ಲಲಿತ ಮಹಲ್ ಮೈದಾನ ತಲುಪಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೌದ್ಧ ಧ್ವಜಾರೋಹಣ ನೆರವೇರಿಸಲಾಯಿತು. ರಸ್ತೆ ಉದ್ದಕ್ಕೂ ಬೌದ್ಧ ಧಮ್ಮದ ಭಾವುಟಗಳನ್ನು ಹಿಡಿದು ಸಮತ ಸೈನಿಕ ದಳದ 400ಕ್ಕೂ ಹೆಚ್ಚು ಮಂದಿ ಸಾಗಿದರು. ಅಮ್ಮ ರಾಮಚಂದ್ರ ತಂಡದಿಂದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬುದ್ಧ ಗೀತೆಗಳ ಗಾಯನ ನಡೆಸಿಕೊಟ್ಟರು. ಬಿಕ್ಕು ಸಂಘದಿಂದ ತ್ರಿಸರಣ ಧ್ಯಾನ ಕಾರ್ಯಕ್ರಮ ನಡೆಯಿತು.

ಬೀದರನ ಧಮ್ಮಾನಂದ ಭಂತೇಜಿ, ಕೊಳ್ಳೇಗಾಲದ ಜೇತವನದ ಮನೋರಖ್ಖಿತ ಭಂತೇಜಿ, ವೀರ್ಯಶೀಲಾ ಭಂತೇಜಿ, ಹೊರಜ್ಯೋತಿ ಭಂತೇಜಿ, ಬೋಧಿರತ್ನ ಭಂತೇಜಿ, ಅಷ್ಟಾಂಗ ಧ್ಯಾನ ಕೇಂದ್ರದ ಬೋಧಿದತ್ತ ಭಂತೇಜಿ, ಬುದ್ಧ ಪ್ರಕಾಶ ಭಂತೇಜಿ, ಸುಗತ ಪಾಲ ಭಂತೇಜಿ, ನ್ಯಾನಲೋಕ ಭಂತೇಜಿ, ಧಮ್ಮ ವೀರ ಭಂತೇಜಿ, ಅಂತರಸಂತೆ ಬುದ್ಧ ವಿಹಾರದ ಗೌತಮಿ ಭಂತೇಜಿ, ಮಾತೆ ಮೈತ್ರಿಯಿ, ಮೇಕ್ರಿಯಾ ಭಂತೇಜಿ, ರಿಕೋ ಭಂತೇಜಿ, ಬುದ್ಧಗಯಾದ ಸೋತೆ ಭಂತೇಜಿ, ಭಾರತೀಯ ಭೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಡಿ.ಜಗನ್ನಾಥ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮಾಜಿ ಮಹಾಪೌರ ಪುರುಷೋತ್ತಮ್, ಪದಾಧಿಕಾರಿಗಳಾದ ಎಸ್.ಕೆ.ಭಂಡೇರಿ, ಹೊರವಾಡೆ, ಡಾ.ಜಯಪ್ರಕಾಶ್, ಮಲ್ಲಿಕಾರ್ಜುನ ಬಾಲ್ಕಿ, ಎಂ.ಸಿ.ಶಿವರಾಜು, ವೈಶಾಲಿ ಮೊರೆ, ಬಾಬು ಅಣದೊರೆ, ಮಹೇಂದ್ರ ಮಂಕಾಳೆ, ಡಾ.ರಾಘವೇಂದ್ರ, ಅರ್ಜುನ್ ರಾವ್ ಕೇಸರಿ, ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಕರ್ನಾಟಕ ಬುದ್ಧ್ದ ಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ, ಎಚ್.ಶಿವರಾಜು, ನೆಲೆ ಹಿನ್ನೆಲೆ ಗೋಪಾಲ್, ನಿಸರ್ಗ ಸಿದ್ದರಾಜು, ಪುಟ್ಟಸ್ವಾಮಿ, ರಾಜು ಹಂಪಾಪುರ,  ಪ್ರದೀಪ್ ಕುಮಾರ್, ಬಾಲಚಂದ್ರ, ಆರ್.ನಟರಾಜು, ದಿವ್ಯಾ, ಅಪುರ ರಾಘವೇಂದ್ರ, ವೆಂಕಟರಮಣ ಸ್ವಾಮಿ (ಪಾಪು), ಕಲಾವಿದ ರವಿಕುಮಾರ್, ಬೀದರ್ ವಿಜಯಕುಮಾರ್, ವಿಶಾಲ್, ರೂಪೇಶ್, ಹೋರಾಟಗಾರ ಕಲ್ಲಳ್ಳಿ ಕುಮಾರ್ ಮುಂತಾದವರು ಹಾಜರಿದ್ದರು.

10 ನಿರ್ಣಯಗಳು
ಬುದ್ಧಪೂರ್ಣಿಮೆಯನ್ನು ಸರಕಾರ ಅಧಿಕೃತವಾಗಿ ಆಚರಣೆ ಮಾಡಬೇಕು. ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎನ್ನುವ ಆಗ್ರಹಗಳು ಸೇರಿದಂತೆ 10 ನಿರ್ಣಯಗಳನ್ನು ರಾಜ್ಯ ಮಟ್ಟದ ಬೌದ್ಧ ಧಮ್ಮ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು.

ನಗರದ ಲಲಿತ ಮಹಲ್ ಮೈದಾನದಲ್ಲಿ ಮಾತೆ ರಮಾಬಾಯಿ ವೇದಿಕೆಯಲ್ಲಿ ರವಿವಾರ ರಾಜ್ಯದ ವಿವಿಧ ಭಾಗಗಳ ಭಂತೇಜಿಗಳ ಸಮ್ಮಖದಲ್ಲಿ ನಡೆದ ಸಮ್ಮೇಳನದಲ್ಲಿ ರಾಜ್ಯಾದ್ಯಂತ ಬುದ್ಧ ವಿಹಾರಗಳ ನಿರ್ಮಾಣ-ನಿರ್ವಹಣೆ, ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ 25 ಎಕರೆ, ತಾಲೂಕು ಕೇಂದ್ರಗಳಲ್ಲಿ 5 ಎಕರೆ, ಹಳ್ಳಿಗಳಲ್ಲಿ ಒಂದು ಎಕರೆ ನೀಡಿ ಬುದ್ಧವಿಹಾರ, ಧ್ಯಾನ ಕೇಂದ್ರ, ಶಾಲಾ ಕಾಲೇಜು ಮಂಜೂರು ಮಾಡಬೇಕು. ಬೌದ್ಧರು ನಡೆಸುವ ಶಾಲಾ ಕಾಲೇಜುಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು, ವೃದ್ಧಾಶ್ರಮಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು. ಬೌದ್ಧ ಸಾಹಿತ್ಯದ ತ್ರಿಪೀಠಕಗಳು, ಅದಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಾಶನ ಮಾಡಲು ಅನುದಾನ ನೀಡಬೇಕು. ಬೌದ್ಧಯಾತ್ರ  ಸ್ಥಳಗಳಿಗೆ ಪ್ರವಾಸ ಮಾಡಲು ಅನುದಾನ, ಬೌದ್ಧರಾದವರಿಗೆ ಧರ್ಮ ಪ್ರಮಾಣಪತ್ರ ನೀಡಬೇಕು. ಬೌದ್ಧ ವಿದ್ಯಾರ್ಥಿಗಳಿಗೆ ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಅನುದಾನ ನೀಡಬೇಕು. ಸಾಮ್ರಾಟ ಅಶೋಕರು ನಿರ್ಮಿಸಿದಂತಹ ಶಿಲಾಶಾಸನಗಳನ್ನು ಸಂರಕ್ಷಣೆ ಮಾಡಬೇಕು ಎಂದು ನಿರ್ಣಯಿಸಲಾಯಿತು.

Similar News