ಹತ್ತೇ ನಿಮಿಷದಲ್ಲಿ ನೋಂದಣಿ; ‘ಕಾವೇರಿ-2’ ತಂತ್ರಾಂಶ ಅಭಿವೃದ್ಧಿ: ಸಚಿವ ಆರ್.ಅಶೋಕ್

Update: 2023-03-02 16:47 GMT

ಬೆಂಗಳೂರು, ಮಾ. 2: ‘ನೋಂದಣಿ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸೆಂಟರ್ ಫಾರ್ ಸ್ಮಾರ್ಟ್ ಗೌವರ್‍ನೆನ್ಸ್ ಸಂಸ್ಥೆಯ ಸಹಯೋಗದೊಂದಿಗೆ ನವೀನ, ನಾಗರೀಕ ಸ್ನೇಹಿ, ವಂಚನೆ ರಹಿತ, ‘ಕಾವೇರಿ-2’ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾವೇರಿ-2 ತಂತ್ರಾಂಶವನ್ನು ಈಗಾಗಲೇ ಬಳಕೆದಾರರ ಸ್ವೀಕಾರ ಪರೀಕ್ಷೆಗೆ (ಯುಎಟಿ) ಒಳಪಟ್ಟಿದ್ದು, ಪ್ರಾಯೋಗಿಕವಾಗಿ ಕಲಬುರಗಿಯ ಚಿಂಚೋಳಿ ಹಾಗೂ ಬೆಳಗಾವಿ ದಕ್ಷಿಣ ಉಪನೋಂದಣಿ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆನ್‍ಲೈನ್‍ನಲ್ಲೇ ಎಲ್ಲ ಪ್ರಕ್ರಿಯೆ: ನೋಂದಣಿ ಪ್ರಕ್ರಿಯೆಯು ಸಂಪೂರ್ಣ ಆನ್‍ಲೈನ್ ಮತ್ತು ಸಂಪರ್ಕ ರಹಿತವಾಗಿರುತ್ತದೆ. ನಾಗರಿಕರು ನೋಂದಣಿ ಕಚೇರಿಗೆ ಹಾಜರಾಗುವ ಮೊದಲೇ ಎಲ್ಲ್ಲ ಡೇಟಾ ಮತ್ತು ದಾಖಲಾತಿಗಳನ್ನು ಆನ್‍ಲೈನ್ ಮೂಲಕ ಅಪ್‍ಲೋಡ್ ಮಾಡಿ ಉಪನೋಂದಣಾಧಿಕಾರಿಗಳ ಪರಿಶೀಲನೆಗೆ ಸಲ್ಲಿಸಬೇಕು.

ಹತ್ತೇ ನಿಮಿಷದಲ್ಲೇ ನೋಂದಣಿ: ಪರಿಶೀಲಿಸಿದ ದಾಖಲೆಗಳನ್ನು ನಾಗರಿಕರಿಗೆ ನಿಗದಿತ ಶುಲ್ಕಗಳನ್ನು ಪಾವತಿಸಲು ಕಳುಹಿಸಲಾಗುತ್ತದೆ. ನಂತರ ನಾಗರಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆಗೆ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಬಹುದಾಗಿದೆ. ನೋಂದಣಿ ಪ್ರಕ್ರಿಯೆಯು 10 ನಿಮಿಷಗಳಲ್ಲೇ ಪೂರ್ಣಗೊಳ್ಳಲಿದೆ ಎಂದು ಅಶೋಕ್ ವಿವರಿಸಿದರು.

‘ನಾಗರಿಕರು ತಮ್ಮ ಭಾವಚಿತ್ರ ಹಾಗೂ ಹೆಬ್ಬೆರಳಿನ ಗುರುತನ್ನು ಸೆರೆ ಹಿಡಿಯುವ ಸಂಬಂಧ ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಉಪನೋಂದಣಿ ಕಚೇರಿಗೆ ಭೇಟಿ ನೀಡಬೇಕು. ನೋಂದಣಿ ಪ್ರಕ್ರಿಯೆ   ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿದ ದಸ್ತಾವೇಜನ್ನು ನಾಗರೀಕರ ಲಾಗಿನ್‍ಗೆ ಹಾಗೂ ಅವರ ಡಿಜಿ ಲಾಕರ್ ಖಾತೆಗೆ ಕಳುಹಿಸಲಾಗುತ್ತದೆ. ದಸ್ತಾವೇಜಿನ ಮಾಹಿತಿಯನ್ನು ಸಂಬಂಧಪಟ್ಟ ಸಂಯೋಜಿತ ಇಲಾಖೆಗೆ ಖಾತಾ ಬದಲಾವಣೆಗಾಗಿ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರು ದಸ್ತಾವೇಜಿನ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸಿ, ಶುಲ್ಕಗಳನ್ನು ಪಾವತಿ, ಅವರ ಆಯ್ಕೆಯ ಉಪನೋಂದಣಿ ಕಚೇರಿಯಲ್ಲಿ ದಸ್ತಾವೇಜಿನ ನೋಂದಣಿಗಾಗಿ ಅಪಾಯಿಂಟ್‍ಮೆಂಟ್  ಪಡೆಯಬೇಕು. ಋಣಭಾರ ಪ್ರಮಾಣ ಪತ್ರ ಹಾಗೂ ದೃಢೀಕೃತ ನಕಲುಗಳನ್ನು ಮೊಬೈಲ್ ಅಪ್ಲಿಕೇಷನ್‍ನ ಸಹಾಯದಿಂದ ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ಅವರ ಅರ್ಜಿಯ ಸ್ಥಿತಿಯ ಬಗ್ಗೆ ಮೊಬೈಲ್ ಮುಖಾಂತರ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಡಿ.ಡಿ ಮತ್ತು ಚಲನ್‍ಗಿಂತ ಭಿನ್ನವಾಗಿ ಇಲಾಖೆಯು ಒಂದು ದಿನ ಮುಂಚಿತವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಡೆಯುತ್ತದೆ. ಇಲಾಖೆಯು ರಾಜಸ್ವದ ನೈಜ ಸಮಯದ ಅಂಕಿ-ಅಂಶಗಳನ್ನು ಹೊಂದಿರುತ್ತದೆ. ಲೋಕಲ್ ಸರ್ವರ್‍ಗಳ ಸಮಸ್ಯೆಗಳು ಇರುವುದಿಲ್ಲ. ಉಪನೋಂದಣಿ ಕಚೇರಿಯಲ್ಲಿ ಜನಸಂದಣಿ ಕಡಿಮೆ ಇರುತ್ತದೆ. ಕಾವೇರಿ-2 ತಂತ್ರಾಂಶವು ಇಂಪರ್ಸನೇಷನ್ ಹಾಗೂ ಮೋಸದ ನೋಂದಣಿಯನ್ನು ತಡೆಯುತ್ತದೆ ಎಂದು ಅವರು ತಿಳಿಸಿದರು.

ಕ್ರೆಡಾಯ್ ಮತ್ತು ಸಾರ್ವಜನಿಕರಲ್ಲಿ ಈ ತಂತ್ರಾಂಶದ ಬಗ್ಗೆ ಜಾಗೃತಿ ಮೂಡಿಸಲು, ಹೊಸ ವ್ಯವಸ್ಥೆಯಲ್ಲಿ ಸಹಾಯ ಮಾಡಲು, ಅರ್ಜಿಯ ಸ್ಥಿತಿಯನ್ನು ತಿಳಿಯಲು ಮತ್ತು ಕುಂದು-ಕೊರತೆಗಳನ್ನು ದಾಖಲಿಸಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ. ಪಾಸ್‍ಪೋರ್ಟ್ ಕಚೇರಿಗಳ ಮಾದರಿಯಲ್ಲಿ ಉಪನೋಂದಣಿ ಕಚೇರಿಗಳಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ನೋಂದಣಿ ಕಚೇರಿಗಳಲ್ಲಿ ವಿಶ್ರಾಂತಿ ಕೊಠಡಿ, ಆಹಾರ ನೀಡುವ ಪ್ರದೇಶ, ರ್ಯಾಂಪ್, ಲಿಫ್ಟ್ ಸಹಿತ ಮುಂತಾದ ಸೌಲಭ್ಯಗಳನ್ನು ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.

ನೋಂದಣಿ ಪ್ರದೇಶದಲ್ಲಿ ಪ್ರತಿ ಪ್ರಕ್ರಿಯೆಗೆ ಕೌಂಟರ್‍ಗಳನ್ನು ಹೊಂದಿದ್ದು, ಇದರಿಂದಾಗಿ ಒಂದೇ ಸ್ಥಳದಲ್ಲಿ ಸಾರ್ವಜನಿಕರ ಗುಂಪನ್ನು ತಪ್ಪಿಸುತ್ತದೆ ಮತ್ತು ಕಡಿಮೆ ಸಮಯದಲ್ಲಿ ಸುಗಮ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಸಂಕೇಶ್ವರ, ಬೆಳಗಾವಿ ದಕ್ಷಿಣ ಹಾಗೂ ಬ್ಯಾಟರಾಯನಪುರ ಉಪನೋಂದಣಿ ಕಚೇರಿಗಳಿಗೆ ಈಗಾಗಲೇ ನೀಲನಕ್ಷೆಯನ್ನು ಅಳವಡಿಸಿಕೊಂಡು ಆಧುನೀಕರಣಗೊಳಿಸಲಾಗಿದೆ. 2023-24ರಲ್ಲಿ ನೀಲನಕ್ಷೆಯನ್ನು ಉಳಿದ ಉಪನೋಂದಣಿ ಕಚೇರಿಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಐಜಿ ಡಾ.ಬಿ.ಆರ್.ಮಮತಾ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಉಪಸ್ಥಿತರಿದ್ದರು.

Similar News