ಹಂಪಿಯಲ್ಲಿ ರೀಲ್ಸ್ ಮಾಡಿದವರನ್ನೆಲ್ಲ ಹುಡುಕಿ ಬಂಧಿಸುವ ಪೊಲೀಸರಿಗೆ ಶಾಸಕರೊಬ್ಬರು ಕೈಗೆ ಸಿಗುವುದಿಲ್ಲವೇ?: ಕಾಂಗ್ರೆಸ್

Update: 2023-03-05 17:54 GMT

ಬೆಂಗಳೂರು:  ನಾಲ್ಕೈದು ದಿನಗಳು ಕಳೆದರೂ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಬಂಧನ ಸಾಧ್ಯವಾಗದಿದ್ದದ್ದಕ್ಕೆ ವಿರೋಧ ಪಕ್ಷ  ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 

ಈ ಕುರಿತು ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಒಬ್ಬ ಶಾಸಕರನ್ನು ಬಂಧಿಸಲು ಮೂರ್ನಾಲ್ಕು ದಿನದಿಂದ ಶೋಧ ನಡೆಸಬೇಕೆ? ಇದನ್ನು ಜನ ನಂಬಬೇಕೆ? ಹಂಪಿಯಲ್ಲಿ ರೀಲ್ಸ್ ಮಾಡಿದವರನ್ನೆಲ್ಲ ಹುಡುಕಿ ಬಂಧಿಸುವ ಪೊಲೀಸರಿಗೆ ಜನಪ್ರತಿನಿಧಿಯೊಬ್ಬರು ಕೈಗೆ ಸಿಗುವುದಿಲ್ಲವೇ? ಬಸವರಾಜ ಬೊಮ್ಮಾಯಿ ಅವರೇ, ನೀವು ಮತ್ತು ನಿಮ್ಮ 40% ಪಟಾಲಂ ಯಾರ ಕಿವಿ ಮೇಲೆ ಹೂವ ಇಡಲು ಹೊರಟಿದ್ದೀರಿ?' ಎಂದು ಪ್ರಶ್ನೆ ಮಾಡಿದೆ.

''ಫೇಕ್‍ನ್ಯೂಸ್' ಹರಿಬಿಟ್ಟಿದ್ದೇಕೆ?''

'ಫಾಕ್ಸ್‌ಕಾನ್ ಕಂಪೆನಿಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಲಾಯ್ತು ಎಂದಿರುವ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹೇಳಿಕೆಯನ್ನು ಕಂಪೆನಿ ನಿರಾಕರಿಸಿದೆ. ರಾಜ್ಯಕ್ಕೆ ಸುಳ್ಳು ಹೇಳಿದ್ದೇಕೆ?, ಸಿಎಂ ಹುದ್ದೆಯ ಜವಾಬ್ದಾರಿ ಮರೆತು ‘ಫೇಕ್‍ನ್ಯೂಸ್' ಹರಿಬಿಟ್ಟಿದ್ದೇಕೆ?, ಉದ್ಯೋಗ ಬಯಸುತ್ತಿರುವ ‘ಯುವಕರಿಗೆ ಕಿವಿ ಮೇಲೆ ಹೂವು’ ಇಟ್ಟಿದ್ದೇಕೆ?' ಕಾಂಗ್ರೆಸ್ ಪ್ರಶ್ನಿಸಿದೆ.

 ‘ಬೆಂಗಳೂರಿನ ಐಫೋನ್ ಉತ್ಪಾದನಾ ಘಟಕ ತೆರೆಯಲಾಗುತ್ತದೆ ಎಂಬ ಸಿಎಂ ಹೇಳಿಕೆಯನ್ನು ಫಾಕ್ಸ್‌ಕಾನ್ ನಿರಾಕರಿಸಿದೆ. ಸುಳ್ಳೇ ಬಿಜೆಪಿಯ ಮನೆದೇವ್ರು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸ್ವತಃ ಸಿಎಂ ಸುಳ್ಳು ಹೇಳಿದ್ದು ನಾಚಿಕೆಗೇಡಿನ ಸಂಗತಿ. ಬೊಮ್ಮಾಯಿ ಅವರೇ, ತಾವು ಬಲು ಶಾಣ್ಯ ಇದಿರ್ರಿ.. ಬಾಳ್ ಚೆನ್ನಾಗಿ ‘ಕಿವಿ ಮೇಲೆ ಹೂವು’ ಇಡ್ತಿರ್ರಿ!!’ ಎಂದು ಕಾಂಗ್ರೆಸ್  ಲೇವಡಿ ಮಾಡಿದೆ.

Similar News