ರಾಜ್ಯದಲ್ಲಿ ನಾಪತ್ತೆಯಾದ ಹೆಣ್ಣು ಮಕ್ಕಳ ಸುಳಿವೇ ಇಲ್ಲ..!

Update: 2023-03-08 06:44 GMT

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಎಲ್ಲಲ್ಲೂ ಮಹಿಳೆ ಕುರಿತು ಬಣ್ಣದ ಮಾತುಗಳೇ. ಇದರ ಜೊತೆಗೆ ಶುಭಾಷಯ ವಿನಿಮಯವೂ ಜೋರಾಗಿ ಸಾಗುತ್ತಿದೆ. ಇದೇ ರೀತಿ, ‘ಹೆಣ್ಣು ಎಂಬುದು ಶಕ್ತಿ. ಹೆಣ್ಣು ಇಲ್ಲದೆ ಈ ಜಗವೇ ಇಲ್ಲ’ ಎನ್ನುತ್ತಿರುವ ರಾಜ್ಯ ಸರಕಾರವೂ ನಾಪತ್ತೆಯಾಗಿರುವ ಹೆಣ್ಣು ಮಕ್ಕಳ ಪತ್ತೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವುದು ಬಹಿರಂಗಗೊಂಡಿದೆ.

ಭದ್ರತಾ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 5 ವರ್ಷಗಳಲ್ಲಿ ರಾಜ್ಯಾದ್ಯಂತ ಬಾಲ ಮಂದಿರಗಳಿಂದ 484 ಮಕ್ಕಳು ಕಾಣೆಯಾದ ಪೈಕಿ 365 ಮಕ್ಕಳು ಪತ್ತೆಯಾದರೆ, ಹಲವು ವರ್ಷಗಳಿಂದ ನಾಪತ್ತೆಯಾದ 199 ಮಕ್ಕಳು ಇನ್ನೂ ಸುಳಿವೇ ಸಿಕ್ಕಿಲ್ಲ. ಇದರಲ್ಲಿ ಶೇ.68ರಷ್ಟು ಭಾಗ ಅಂದರೆ, ಅತಿ ಹೆಚ್ಚು ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದು, ಮಾನವನ ಕಳ್ಳಸಾಗಣೆಗೆ ಹಾಗೂ ಅನೈತಿಕ ಚಟುವಟಿಕೆಗಳಿಗೆ ಇವರನ್ನು ದೂಡಿರುವ ಬಗ್ಗೆ ಬಲವಾದ ಅನುಮಾನ ಮೂಡಲಾರಂಭಿಸಿದೆ. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಬಾಲಮಂದಿರಗಳಿಂದ ತಡೆಗೋಡೆ ಜಿಗಿದು, ಶೌಚಗೃಹದ ಕಿಟಕಿ ಮುರಿದು, ಭದ್ರತಾ ಸಿಬ್ಬಂದಿ ಕಣ್ಪಪ್ಪಿಸಿ ಹಾಗೂ ರಾತ್ರಿ ವೇಳೆ ಮುಖ್ಯ ದ್ವಾರದಿಂದ ಹಾರಿ ಮಕ್ಕಳು ಪರಾರಿಯಾಗಿರುವುದು ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ಬಹಿರಂಗವಾಗಿದೆ. ನಾಪತ್ತೆಯಾಗಿರುವ ಮಕ್ಕಳ ಪೈಕಿ ಬೆಂಗಳೂರು ನಗರ, ಮೈಸೂರು, ಧಾರವಾಡ ಮತ್ತು ಬಳ್ಳಾರಿ ಬಾಲಮಂದಿರದವರೇ ಹೆಚ್ಚು. 

ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಅಪ್ರಾಪ್ತರು, ಪಾಲಕರಿಲ್ಲದೆ ದೌರ್ಜನ್ಯಕ್ಕೆ ಒಳಗಾಗಿರುವವರು ಹಾಗೂ ಪಾಲಕರಿಲ್ಲದೆ ಅನಾಥರಾದ ಮಕ್ಕಳಿಗೆ ಬಾಲಮಂದಿರಗಳಲ್ಲಿ ಆಶ್ರಯ ನೀಡಲಾಗುತ್ತಿದೆ. ಅವರಿಗೆ ವಸತಿ ಜತೆಗೆ ಸರಕಾರದಿಂದ ಉಚಿತ ಶಿಕ್ಷಣ ಸೌಲಭ್ಯವೂ ಕಲ್ಪಿಸಲಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ವಿವಿಧ ಕಾರಣಗಳಿಂದ ಬಾಲಮಂದಿರಗಳಿಂದ ತಪ್ಪಿಸಿಕೊಳ್ಳುವ ಮಕ್ಕಳ ಬಗ್ಗೆ ಸರಕಾರ ಮತ್ತು ಪೊಲೀಸರು ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ.

ಬಾಲಮಂದಿರ ಅಧಿಕಾರಿಗಳು ಒಮ್ಮೆ ದೂರು ಕೊಟ್ಟು ಮುಂದೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗುತ್ತಿರುವುದು ನಾಪತ್ತೆಯಾದ ಮಕ್ಕಳ ಪತ್ತೆಗೆ ಹಿನ್ನೆಡೆಯಾಗುತ್ತಿದೆ. ಬಾಲಮಂದಿರಗಳಲ್ಲಿ ವಾಸಿಸುತ್ತಿರುವ ಕೆಲ ಮಕ್ಕಳು ಮದ್ಯ ಮತ್ತು ಡ್ರಗ್ಸ್ ವ್ಯಸನಕ್ಕೆ ಒಳಗಾಗಿ ತಪ್ಪಿಸಿಕೊಳ್ಳುತ್ತಿರುವುದು, ಸ್ನೇಹಿತರ, ಹೊರಗಿನವರ ಸೂಚನೆ ಮತ್ತು ಸಮರ್ಪಕವಾಗಿ ಊಟ, ತಿಂಡಿ ಸಿಗದಿದ್ದಾಗ ಪರಾರಿ ಆಗುತ್ತಿರುವುದು, ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆಯಿಂದ ನಾಪತ್ತೆ, ದೊಡ್ಡ ಮಕ್ಕಳ ಕೀಟಲೆಯಿಂದ ಹಾಗೂ ಕಾಳಜಿ ಇಲ್ಲದಿರುವುದರಿಂದ ಮಕ್ಕಳ ನಾಪತ್ತೆಯಾಗುತ್ತಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ.

ಕೊರತೆ: ರಾಜ್ಯದ ಬಹುತೇಕ ಬಾಲಮಂದಿರಗಳಲ್ಲಿ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಮತ್ತು ಮೇಲ್ವಿಚಾರಣೆಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಒಬ್ಬ ಅಧಿಕಾರಿ ನಾಲ್ಕೈದು ಬಾಲಮಂದಿರ ನೋಡಿಕೊಳ್ಳುವಂತಾಗಿದೆ. ಹಲವು ವರ್ಷಗಳಿಂದ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಸರಕಾರವೂ ನಿರ್ಲಕ್ಷ್ಯ ವಹಿಸಿದೆ. ಕೆಲ ಸಂದರ್ಭದಲ್ಲಿ ಮಾತ್ರ ಬಾಲಮಂದಿರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಾಗಿ ಸರಕಾರ ಪದೇಪದೆ ಹೇಳುತ್ತಿದೆ ಹೊರತು ಈವರೆಗೆ ಯಾವುದೇ ಹುದ್ದೆಗಳ ಭರ್ತಿ ಕಾರ್ಯಕ್ಕೆ ಮುಂದಾಗಿಲ್ಲ. 

ಸರಕಾರ ಹೇಳುವುದೇನು?: ‘ನಾಪತ್ತೆಯಾದ ಮಕ್ಕಳ ಪತ್ತೆಗೆ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಣೆಯಾದ ಮಕ್ಕಳ ಬಗ್ಗೆ ಸ್ಥಳೀಯ ಪಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗುತ್ತಿದೆ. ಮಕ್ಕಳನ್ನು ಪತ್ತೆಹಚ್ಚುವ ಕುರಿತು ಬಾಲನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮದಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ, ಸ್ಥಳೀಯ ಸ್ವಯಂ ಸೇವಾ ಸಂಸ್ಥೆ ನೆರವಿನೊಂದಗೆ ಮಕ್ಕಳನ್ನು ಹುಡುಕುವ ಕಾರ್ಯ ಮಾಡಲಾಗುತ್ತಿದೆ’ ಎಂದು ಸರಕಾರ ಹೇಳುತ್ತಿದೆ. 

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಣಿಕೆ ತಡೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯ ಕಾವಲು ಸಮಿತಿ ರಚನೆ, ಕೇಂದ್ರ ಪುರಸ್ಕೃತ ಉಜ್ವಲ ಯೋಜನೆ ಜಾರಿ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರಕಾರದ ವಾದವಾಗಿದೆ. 

ಎಲ್ಲಿ ಎಷ್ಟು ನಾಪತ್ತೆ?: ಬೆಂ.ಗ್ರಾಮಾಂತರ-42, ಬೆಂಗಳೂರು ನಗರ-21, ಧಾರವಾಡ-16, ವಿಜಯಪುರ ಮತ್ತು ಮಂಡ್ಯ ತಲಾ-9, ಕಲಬುರ್ಗಿ, ದಾವಣಗೆರೆ ಮತ್ತು ಮೈಸೂರು ತಲಾ 6, ದಕ್ಷಿಣ ಕನ್ನಡ ಮತ್ತು ಕೋಲಾರ ತಲಾ 3 ಮಕ್ಕಳು ಹಲವು ವರ್ಷಗಳಿಂದ ಕಾಣೆಯಾದವರು ಈವರೆಗೆ ಸುಳಿವು ಸಿಕ್ಕಿಲ್ಲ.

‘ವಿಶೇಷ ತಂಡ ರಚಿಸಿ, ಪತ್ತೆ ಹೆಚ್ಚಲಿ’:

‘ಐದು ವರ್ಷಗಳಿಂದ 199 ಮಕ್ಕಳ ಪತ್ತೆಗೆ ಸರಕಾರ, ಪೊಲೀಸ್ ಇಲಾಖೆ ಮುಂದಾಗದಿರುವುದು ಅಚ್ಚರಿಯೇ ತಂದಿದೆ. ಈಗಾಗಲೇ ಪೋಷಕರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ಆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ.ಸದ್ಯ ಈಗಲಾದರೂ ರಾಜ್ಯ ಸರಕಾರ ವಿಶೇಷ ತಂಡ ರಚಿಸಿ ಪತ್ತೆಗೆ ಮುಂದಾಗಲಿ’

-ಅಸ್ಮಾ ಸ್ಯೆಯಿದಾ (ಬಳ್ಳಾರಿ), ಮಹಿಳಾ ಪರ ಹೋರಾಟಗಾರ್ತಿ

Similar News