ಸಲಿಂಗ ವಿವಾಹ ಭಾರತೀಯ ಕುಟುಂಬ ವ್ಯವಸ್ಥೆಗೆ ಹೊಂದುವುದಿಲ್ಲ ಸುಪ್ರೀಂಕೋರ್ಟ್ ನಲ್ಲಿ ಕೇಂದ್ರದ ವಾದ

Update: 2023-03-12 17:00 GMT

ಹೊಸದಿಲ್ಲಿ,ಮಾ.12:  ಸಲಿಂಗ ವಿವಾಹವು, ಭಾರತೀಯ ಕೌಟುಂಬಿಕ ವ್ಯವಸ್ಥೆಯ ಪರಿಕಲ್ಪನೆಗೆ ಅನುಗುಣವಾಗಿಲ್ಲವೆಂಬ ತನ್ನ ಈ ಹಿಂದಿನ ನಿಲುವನ್ನು ಕೇಂದ್ರ ಸರಕಾರವು ರವಿವಾರ ಸುಪ್ರೀಂಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ. ‘‘ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಜೈವಿಕವಾಗಿ ಪುರುಷನು ಪತಿಯಾಗಿದ್ದು, ಜೈವಿಕವಾಗಿ ಮಹಿಳೆಯು ಪತ್ನಿಯೆನಿಸಿಕೊಳ್ಳುತ್ತಾಳೆ ಮತ್ತು ಅವರ ಸಮಾಗಮದಿಂದ ಜನಿಸುವ ಮಕ್ಕಳನ್ನು ಜೈವಿಕವಾಗಿ ಪುರುಷನಾಗಿರುವ ತಂದೆ ಹಾಗೂ ಜೈವಿಕವಾಗಿ ಮಹಿಳೆಯಾಗಿರುವ ತಾಯಿ ಪೋಷಿಸುತ್ತಾರೆ ’’ಎಂದು ಅದು ಹೇಳಿದೆ.

ವಿವಾಹೇತರ ಸಹಜೀವನ (ಲಿವ್ ಇನ್ ರಿಲೇಶನ್ಶಿಪ್ ) ಹಾಗೂ  ಸಮಾನಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧವನ್ನು ಹೊಂದುವುದು ಭಾರತೀಯ ಕುಟುಂಬ ವ್ಯವಸ್ಥೆಯ ಪರಿಕಲ್ಪನೆಗೆ ಹೊಂದಿಕೆಯಾಗುವುದಿಲ್ಲವೆಂದು ಕೇಂದ್ರ ಸರಕಾರವು ಹೇಳಿದೆ.  ಭಾರತೀಯ ಕೌಟುಂಬಿಕ ವ್ಯವಸ್ಥೆಯ ಕುರಿತಾದ ಹಾಲಿ ಕಾನೂನು ಕಾರ್ಯಚೌಕಟ್ಟನ್ನು ಪ್ರಶ್ನಿಸಿ ಎಲ್ಜಿಬಿಟಿಕ್ಯೂ ದಂಪತಿ ಸಲ್ಲಿಸಿರುವ  ಅರ್ಜಿಯನ್ನು ತಿರಸ್ಕರಿಸುವಂತೆ  ಅದು ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ.

 ಸಮಾನಲಿಂಗದ ವ್ಯಕ್ತಿಗಳಿಂದ ವಿವಾಹದ ನೋಂದಣಿಯು ಪ್ರಸಕ್ತ ಚಾಲ್ತಿಯಲ್ಲಿರುವ  ‘ನಿಷೇಧಿತ ಸಂಬಂಧಗಳು’, ‘ವಿವಾಹದ ಶರತ್ತುಗಳು’, ‘  ವಿಧ್ಯುಕ್ತವಾದ ಹಾಗೂ ಆಚರಣಾತ್ಮಕ ಅಗತ್ಯಗಳು’ ಮತ್ತಿತರ ವೈಯಕ್ತಿಕ ಕಾನೂನುನಿಯಮಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಕೇಂದ್ರ ವಾದಿಸಿದೆ.

‘ ವಿರುದ್ಧ ಲಿಂಗದ ಇಬ್ಬರು ವ್ಯಕ್ತಿಗಳ ಸಮಾಗಮವು ವಿವಾಹದ ಪರಿಕಲ್ಪನೆಯಲ್ಲಿ ಅವಶ್ಯಕವಾಗಿರುತ್ತದೆ.  ಈ ವ್ಯಾಖ್ಯಾನವು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಕಾನೂನಾತ್ಮಕವಾಗಿ ವಿವಾಹದ ಪರಿಕಲ್ಪನೆಯಲ್ಲಿ ಹಾಸುಹೊಕ್ಕಾಗಿದೆ.  ಈ ಪರಿಕಲ್ಪನೆಯನ್ನು ನ್ಯಾಯಾಂಗ ನೀಡುವ ವ್ಯಾಖ್ಯಾನವು ವಿಚಲಿತಗೊಳಿಸಕೂಡದು ಅಥವಾ ದುರ್ಬಲಗೊಳಿಸಕೂಡದು’’ ಎಂದು ಕೇಂದ್ರ ಸರಕಾರವು ತಿಳಿಸಿದೆ.

‘‘ ವಿವಾಹಬಂಧಕ್ಕೆ ಅದರದ್ದೇ ಆದ ಸಾರ್ವಜನಿಕ ಮಹತ್ವವಿದೆ. ಈ ಸಾಮಾಜಿಕ ವ್ಯವಸ್ಥೆಯಿಂದ ಹಲವಾರು ಹಕ್ಕುಗಳು ಹಾಗೂ ಹೊಣೆಗಾರಿಕೆಗಳು ಹರಿದುಬರುತ್ತವೆ. ವಿವಾಹದ ನೋಂದಣಿ ಅಥವಾ ವಿವಾಹ ಸಮಾರಂಭವು, ಸರಳವಾದ ಕಾನೂನು ಮಾನ್ಯತೆಗಿಂತಲೂ ಹೆಚ್ಚು ಪರಿಣಾಮಕಾರಿತ್ವವನ್ನು ಹೊಂದಿದೆ. ಆದರೆ ಸಮಾನಲಿಂಗಕ್ಕೆ ಸೇರಿದ ವ್ಯಕ್ತಿಗಳ ವಿವಾಹಕ್ಕೆ ಮಾನ್ಯತೆ ನೀಡುವುದರಿಂದ ಹಾಗೂ ನೋಂದಣಿ ಮಾಡುವುದರಿಂದ ಕೌಟುಂಬಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಸರಕಾರ ವಾದಿಸಿದೆ.

Similar News