ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆ ವಿಸ್ತರಿಸಿದ ಹೈಕೋರ್ಟ್

Update: 2023-03-18 14:20 GMT

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಹೊರಡಿಸಿರುವ ಆದೇಶವನ್ನು ಮಾ.24ರ ವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ. 

ಸಿಬಿಐ ತನಿಖೆ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಸಿಬಿಐ ಪರ ವಾದಿಸಿದ ವಕೀಲ ಪಿ.ಪ್ರಸನ್ನಕುಮಾರ್ ಅವರು, ಅರ್ಜಿದಾರರ ವಿರುದ್ಧದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ತನಿಖೆಗೆ ತೊಂದರೆಯಾಗುತ್ತಿದೆ. ಹೀಗಾಗಿ ತಡೆಯಾಜ್ಞೆ ತೆರವು ಕೋರಿ ಸಿಬಿಐ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಗಣಿಸಬೇಕು. ಜತೆಗೆ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಆದರೆ, ಈ ಮನವಿಯ ಕುರಿತು ವಿಚಾರಣೆ ನಡೆಸಲು ಕಾಲಾವಕಾಶದ ಕೊರತೆಯ ಕಾರಣ ಅರ್ಜಿ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿದ ನ್ಯಾಯಪೀಠ, ಅಲ್ಲಿಯವರೆಗೆ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿರುವ ತಡೆಯಾಜ್ಞೆ ಮುಂದುವರೆಯಲಿದೆ ಎಂದು ತಿಳಿಸಿತು.

ಪ್ರಕರಣವೇನು: ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಸೆಕ್ಷನ್‍ಗಳ ಅಡಿ ಸಿಬಿಐ 2020ರ ಅ.3ರಂದು ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಈ ಎಫ್‍ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಬಿಐ ತನಿಖೆಗೆ 2023ರ ಫೆ.10ರಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

Similar News