11 ದಿನಗಳಲ್ಲಿ 4 ಬ್ಯಾಂಕ್‌ಗಳ ಪತನ: ಪತನದತ್ತ ಐದನೇ ಬ್ಯಾಂಕ್

Update: 2023-03-21 09:15 GMT

ವಾಷಿಂಗ್ಟನ್: ಕೇವಲ 11 ದಿನಗಳಲ್ಲಿ ನಾಲ್ಕು ಬ್ಯಾಂಕ್‌ಗಳು ಪತನಗೊಂಡಿದ್ದು, ಐದನೆಯ ಬ್ಯಾಂಕ್ ಬದುಕುಳಿಯಲು ಹೋರಾಟ ನಡೆಸುತ್ತಿರುವುದರಿಂದ ಹೂಡಿಕೆದಾರರು ಪರಿತಪಿಸುವಂತಾಗಿದೆ. ಹನ್ನೊಂದು ದಿನಗಳಲ್ಲೇ ಇಂತಹ ಬಿಕ್ಕಟ್ಟಿನ ಪರಿಸ್ಥಿತಿ ಉದ್ಭವವಾಗಿದ್ದು, ಪತನಗೊಂಡ ಪ್ರತಿ ಬ್ಯಾಂಕ್‌ನ ಬಿಕ್ಕಟ್ಟೂ ಒಂದೇ ಬಗೆಯಾಗಿದೆ ಎಂದು Bloomberg ವರದಿ ಮಾಡಿದೆ.

ಬ್ಯಾಂಕ್‌ಗಳು ಹೇಗೆ ಪತನಗೊಂಡವು ಹಾಗೂ ಬ್ಯಾಂಕ್ ನಿಯಂತ್ರಣ ಪ್ರಾಧಿಕಾರಗಳು ಹೇಗೆ ಪ್ರತಿಸ್ಪಂದಿಸಿದವು ಎಂಬುದರ ಕುರಿತು ವಿವರಗಳು ಇಲ್ಲಿದ್ದು, ಈ ಬಿಕ್ಕಟ್ಟು ಮತ್ತಷ್ಟು ವಿಸ್ತರಿಸಬಹುದು ಎಂದು ಅಂದಾಜಿಸಲಾಗಿದೆ.

ಸಿಲ್ವರ್‌ಗೇಟ್ (Silvergate)

ಕ್ರಿಪ್ಟೊ ಕರೆನ್ಸಿ ವ್ಯವಹಾರವು ಕುಸಿದು ಬಿದ್ದಿದ್ದರಿಂದ ಅದರಲ್ಲಿ ಹೂಡಿಕೆ ಮಾಡಿದ್ದ ಸಿಲ್ವರ್‌ಗೇಟ್ ಕ್ಯಾಪಿಟಲ್ ಕಾರ್ಪೊರೇಷನ್ ಅಮೆರಿಕಾದಲ್ಲಿ ಪತನಗೊಂಡ ಪ್ರಥಮ ಬ್ಯಾಂಕ್ ಆಗಿತ್ತು. ಬ್ಯಾಂಕ್ ಸ್ಥಗಿತವನ್ನು ತಡೆಯಲು ಫೆಡರಲ್ ರಿಸರ್ವ್‌ನಿಂದ ಪರವಾನಗಿ ಪಡೆದ ಫೆಡರಲ್ ಡೆಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್ ಮಧ್ಯಪ್ರವೇಶಿಸಲು ಪ್ರಯತ್ನಿಸಿತ್ತು.

ಆದರೆ, ಕ್ಯಾಲಿಫೋರ್ನಿಯಾ ಮೂಲದ ಲಾ ಜೊಲ್ಲಾ ಕಂಪನಿಯ ವಿರುದ್ಧ ಬ್ಯಾಂಕ್ ನಿಯಂತ್ರಕರು ವಿಚಾರಣೆ ಕೈಗೊಂಡಿದ್ದರಿಂದ ಹಾಗೂ ಕ್ರಿಪ್ಟೊ ಕರೆನ್ಸಿ ವ್ಯವಹಾರದ ದೈತ್ಯ ಕಂಪನಿಗಳಾದ ಎಫ್‌ಟಿಎಕ್ಸ್ ಮತ್ತು ಅಲಮೇಡಾ ರಿಸರ್ಚ್ ಪತನಗೊಂಡಿದ್ದರಿಂದ, ಅವುಗಳೊಂದಿಗೆ ನಂಟು ಹೊಂದಿದ್ದ ಸ್ಯಾಮ್ ಬ್ಯಾಂಕ್‌ಮನ್-ಫ್ರೈಡ್ಸ್ ವಿರುದ್ಧ ನ್ಯಾಯಾಂಗ ಇಲಾಖೆಯ ವಂಚನೆ ಘಟಕವು ತನಿಖೆ ಕೈಗೊಂಡಿದ್ದರಿಂದ ಅದು ಚೇತರಿಸಿಕೊಳ್ಳಲೇ ಇಲ್ಲ.

ಯಾವುದೇ ಅಕ್ರಮಗಳು ಪತ್ತೆಯಾಗದಿದ್ದರೂ, ಅದರ ಭೀತಗೊಂಡ ಗ್ರಾಹಕರು ಠೇವಣಿಯನ್ನು ಹಿಂಪಡೆದಿದ್ದರಿಂದ ಸಿಲ್ವರ್‌ಗೇಟ್ ತನ್ನ ಸ್ವತ್ತುಗಳನ್ನು ನಷ್ಟದ ದರಕ್ಕೆ ಮಾರಾಟ ಮಾಡಬೇಕಾಯಿತು. ಮಾರ್ಚ್ 8ರಂದು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಹಾಗೂ ತನ್ನ ಸ್ವತ್ತುಗಳನ್ನು ನಗದೀಕರಣಗೊಳಿಸುವ ಕುರಿತು ಸಿಲ್ವರ್‌ಗೇಟ್ ಪ್ರಕಟಿಸಿತು.

ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank)

ಸಿಲ್ವರ್‌ಗೇಟ್‌ನ ಪತನ ಬಹುತೇಕ ನಿಶ್ಚಿತವಾಗುತ್ತಿದ್ದಂತೆಯೇ, ಮಾರ್ಚ್ 8ರಂದು ತನ್ನ 2.25 ಶತಕೋಟಿ ಡಾಲರ್ ಮೌಲ್ಯದ ಶೇರು ಮಾರಾಟ ಮಾಡುವ ಯೋಜನೆ ಹಾಗೂ ತನ್ನ ಹೂಡಿಕೆ ವಲಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿರುವ ಕುರಿತು ಎಸ್‌ವಿಬಿ ಫೈನಾನ್ಷಿಯಲ್ ಗ್ರೂಪ್ ಪ್ರಕಟಿಸುತ್ತಿದ್ದಂತೆಯೇ, ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ ಗ್ರಾಹಕರು ಅದನ್ನು ಮರಳಿ ಪಡೆಯಲು ತುದಿಗಾಲಲ್ಲಿ ನಿಂತಿದ್ದರು. ಇದರಿಂದ ಪ್ರಕಟಣೆಯ ಮರು ದಿನವೇ ಬ್ಯಾಂಕ್‌ನ ಶೇರು ಮೌಲ್ಯ ಶೇ. 60ರಷ್ಟು ಕುಸಿತ ಕಂಡಿತ್ತು.

ಸಿಗ್ನೇಚರ್ ಬ್ಯಾಂಕ್ (Signature Bank)

ಅಮೆರಿಕಾ ಇತಿಹಾಸದಲ್ಲಿಯೇ ಮಾರ್ಚ್ 12ರಂದು ಮೂರನೆ ಅತಿ ದೊಡ್ಡ ಬ್ಯಾಂಕ್ ಪತನ ಅನುಭವಿಸಿದ್ದು ಸಿಗ್ನೇಚರ್ ಬ್ಯಾಂಕ್. ಬ್ಯಾಂಕ್‌ನ ಒಟ್ಟು ಠೇವಣಿಯ ಶೇ. 20ರಷ್ಟು ಠೇವಣಿಯನ್ನು ಗ್ರಾಹಕರು ಹಿಂಪಡೆದಿದ್ದರಿಂದ ಸಿಗ್ನೇಚರ್ ಬ್ಯಾಂಕ್ ಪತನಗೊಳ್ಳುವಂತಾಯಿತು.

ರವಿವಾರ ಸಿಗ್ನೇಚರ್ ಬ್ಯಾಂಕ್‌ನ ಠೇವಣಿ ಹಾಗೂ ಅದರ ಕೆಲವು ಸಾಲವನ್ನು ನ್ಯೂಯಾರ್ಕ್ ಕಮ್ಯೂನಿಟಿ ಬ್ಯಾಂಕಾರ್ಪ್ಸ್ ಫ್ಲ್ಯಾಗ್‌ಸ್ಟಾರ್ ಬ್ಯಾಂಕ್ ವಹಿಸಿಕೊಂಡಿತು. ಈ ಬ್ಯಾಂಕ್ 25 ಶತಕೋಟಿ ಡಾಲರ್ ನಗದು ಹಾಗೂ 13 ಶತಕೋಟಿ ಡಾಲರ್ ಸಾಲ ಸೇರಿದಂತೆ ಒಟ್ಟು 38 ಶತಕೋಟಿ ಡಾಲರ್ ಮೌಲ್ಯದ ಸ್ವತ್ತುಗಳನ್ನು ಫೆಡರಲ್ ಡೆಪಾಸಿಟ್ ಇನ್ಷೂರೆನ್ಸ್ ಕಾರ್ಪೊರೇಷನ್‌ನಿಂದ ಖರೀದಿಸಲು ಸಮ್ಮತಿಸಿತು. ಇದರೊಂದಿಗೆ 34 ಶತಕೋಟಿ ಡಾಲರ್ ಠೇವಣಿಗಳು ಸೇರಿದಂತೆ ಅಂದಾಜು 36 ಶತಕೋಟಿ ಡಾಲರ್ ಉತ್ತರದಾಯಿತ್ವವನ್ನು ವಹಿಸಿಕೊಳ್ಳಲೂ ಸಮ್ಮತಿಸಿತು. ಸಿಗ್ನೇಚರ್ ಬ್ಯಾಂಕ್‌ನ ಶಾಖೆಗಳು ಇನ್ನು ಮುಂದೆ ಫ್ಲ್ಯಾಗ್‌ಸ್ಟಾರ್ ಬ್ಯಾಂಕ್ ಶಾಖೆಗಳಾಗಿ ಕಾರ್ಯನಿರ್ವಹಿಸಲಿವೆ.

ಕ್ರೆಡಿಟ್ ಸ್ಯೂಸ್ (Credit Suisse)

ತೀವ್ರ ಆರ್ಥಿಕ ಬಿಕ್ಕಟ್ಟನ್ನು ತಡೆಯುವ ಸಲುವಾಗಿ ಸ್ವಿಸ್ ಅಧಿಕಾರಿಗಳು ಯುಬಿಎಸ್ ಗ್ರೂಪ್ ಎಜಿಯೊಂದಿಗೆ 3 ಶತಕೋಟಿ ಫ್ರಾಂಕ್ (3.2 ಶತಕೋಟಿ ಡಾಲರ್) ವ್ಯವಹಾರವನ್ನು ಕುದುರಿಸಿದ ನಂತರ ರವಿವಾರ  ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಪತನಗೊಂಡಿತು. ಅದನ್ನು ತಡೆಯಲು ಇದ್ದ ಏಕೈಕ ಮಾರ್ಗ ಭಾಗಶಃ ಅಥವಾ ಪೂರ್ಣ ಪ್ರಮಾಣದ ರಾಷ್ಟ್ರೀಕರಣ ಮಾತ್ರ.

ಫಸ್ಟ್ ರಿಪಬ್ಲಿಕ್ (First Republic)

ಅಮೆರಿಕಾದ ತನ್ನ ಮೂರು ಪ್ರತಿಸ್ಪರ್ಧಿ ಬ್ಯಾಂಕ್‌ಗಳು ಪತನಗೊಳ್ಳಲು ಕಾರಣವಾದ ಗ್ರಾಹಕರ ಠೇವಣಿ ಹಿಂದೆಗೆತದ ಕಾರಣಕ್ಕೇ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡಾ ಬಲಿಯಾಯಿತು. ಈ ಠೇವಣಿಯ ಹೊರ ಹರಿಯುವಿಕೆಯಿಂದಾಗಿ 89 ಶತಕೋಟಿ ಡಾಲರ್‌ನಷ್ಟು ಹಣವನ್ನು ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕಳೆದುಕೊಂಡಿತು.

ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನಗೊಳ್ಳುವುದನ್ನು ತಡೆಯಲು ಕಳೆದ ವಾರ ಹನ್ನೊಂದು ಹಣಕಾಸು ನೆರವು ಸಂಸ್ಥೆಗಳು 30 ಶತಕೋಟಿ ಡಾಲರ್‌ನಷ್ಟು ಹಣವನ್ನು ಪೂರೈಸಿದವು. ಆದರೆ, ಹಲವು ರೇಟಿಂಗ್ ಸಂಸ್ಥೆಗಳು ಈ ಬ್ಯಾಂಕ್‌ನ ಸೂಚ್ಯಂಕವನ್ನು ತಗ್ಗಿಸಿದ್ದರಿಂದಾಗಿ ದೈತ್ಯ ತಂತ್ರಜ್ಞರು ಹಾಗೂ ಇನ್ನಿತರ ಸಿರಿವಂತ ವ್ಯಕ್ತಿಗಳಿಗೆ ವೈಯಕ್ತಿಕ ಸಾಲ ನೀಡುತ್ತಿದ್ದ ಈ ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಪತನಗೊಂಡಿತು.

ಇದನ್ನೂ ಓದಿ: ವಿಶ್ವದ ಅತ್ಯಂತ ಸಂತುಷ್ಟ ದೇಶ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ 126ನೇ ಸ್ಥಾನ

Similar News