ಭಾರತದ ಸಾರಿಗೆ ಸುಧಾರಣೆಗೆ ಭರ್ಜರಿ ಶೇ.1.7ರಷ್ಟು ವೆಚ್ಚ: ʻದಿ ಎಕಾನಮಿಸ್ಟ್ʼ

5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ವೇದಿಕೆ

Update: 2023-03-22 03:24 GMT

ಭಾರತವು ಈ ವರ್ಷ ಸಾರಿಗೆ ಮೂಲಸೌಕರ್ಯಕ್ಕಾಗಿ ಅಗಾಧ ಪ್ರಮಾಣದಲ್ಲಿ, ತನ್ನ ಜಿಡಿಪಿಯ ಬರೋಬ್ಬರಿ ಶೇಕಡಾ 1.7ರಷ್ಟು ವೆಚ್ಚ ಮಾಡಲಿದೆ - ಇದು ಅಮೆರಿಕ ಮತ್ತು ಹೆಚ್ಚಿನ ಯುರೋಪಿಯನ್ ದೇಶಗಳಿಗಿಂತ ಎರಡು ಪಟ್ಟು ಅಧಿಕವೆನಿಸಿದೆ - ಈ ಸಾಧನೆಯನ್ನು ʻದಿ ಎಕಾನಮಿಸ್ಟ್ʼ ಸಹ ಗಮನಾರ್ಹ ಎಂದಿದ್ದು, ಇದು 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ವೇದಿಕೆಯನ್ನು ನಿರ್ಮಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಉದ್ಯೋಗ ಸೃಷ್ಟಿಗೆ ಬಲವಾದ ಉತ್ತೇಜನ ನೀಡಲು ಹಾಗೂ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರವು ಏಪ್ರಿಲ್ನಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಮೂಲಸೌಕರ್ಯದ ಮೇಲಿನ ಬಂಡವಾಳ ವಿನಿಯೋಗವನ್ನು 122 ಶತಕೋಟಿ ಡಾಲರ್ಗೆ ಹೆಚ್ಚಿಸಿದೆ. 

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಮೋದಿ ಸರಕಾರವು ರೈಲ್ವೆ ಬಂಡವಾಳ ವೆಚ್ಚಕ್ಕಾಗಿ 2.4 ಲಕ್ಷ ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು 2013-14ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಒಂಬತ್ತು ಪಟ್ಟು ಹೆಚ್ಚಾಗಿದೆ. ಹಳಿಗಳ ನಿರ್ಮಾಣ, ಹೊಸ ಬೋಗಿಗಳು, ವಿದ್ಯುದ್ದೀಕರಣ ಮತ್ತು ನಿಲ್ದಾಣಗಳಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಹಣವನ್ನು ಹೆಚ್ಚಾಗಿ ಖರ್ಚು ಮಾಡಲಾಗಿದೆ. 

2023-24ನೇ ಸಾಲಿನಲ್ಲಿ ರಸ್ತೆಗಳಿಗೆ ಅನುದಾನವು ಶೇ.36ರಷ್ಟು ಏರಿಕೆಯಾಗಿದ್ದು, 2.7 ಲಕ್ಷ ಕೋಟಿ ರೂ.ಗೆ ತಲುಪಿದೆ. ಪ್ರಾದೇಶಿಕ ವಾಯು ಸಂಪರ್ಕವನ್ನು ಸುಧಾರಿಸಲು 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್ಗಳು, ವಾಟರ್ ಏರೋಡ್ರೋನ್ಗಳು ಮತ್ತು ʻಅಡ್ವಾನ್ಸ್ ಲ್ಯಾಂಡಿಂಗ್ ಗ್ರೌಂಡ್ʼಗಳನ್ನು ಆಧುನೀಕರಣಗೊಳಿಸುವತ್ತ ಗಮನ ಹರಿಸಲಾಗಿದೆ. 

ಬಂದರುಗಳು, ಕಲ್ಲಿದ್ದಲು, ಉಕ್ಕು, ರಸಗೊಬ್ಬರ ಮತ್ತು ಆಹಾರ ಧಾನ್ಯಗಳ ಕ್ಷೇತ್ರಗಳಿಗೆ ಕಟ್ಟ ಕಡೆಯ ಮತ್ತು ಆರಂಭಿಕ ಸಂಪರ್ಕಕ್ಕಾಗಿ 100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಸರಕಾರ ಗುರುತಿಸಿದ್ದು, ಅಲ್ಲಿ ಹೂಡಿಕೆಗಳನ್ನು ಹೆಚ್ಚಿಸಲು ಉದ್ದೇಶಿಸಿದೆ. ಖಾಸಗಿ ಮೂಲಗಳಿಂದ 15,000 ಕೋಟಿ ರೂ. ಸೇರಿದಂತೆ 75,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಈ ಯೋಜನೆಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಮಂಡಿಸಿದ 2023-24ರ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. 

ಅಭೂತಪೂರ್ವವಾಗಿ, ಇಷ್ಟು ಅಗಾಧ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಮೂಲಸೌಕರ್ಯ ಸುಧಾರಣೆಯು 2025-26ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬದಲಾಗುವ ಭಾರತದ ಮಹತ್ವಾಕಾಂಕ್ಷೆಯನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ʻದಿ ಎಕನಾಮಿಸ್ಟ್ʼ ತನ್ನ ಇತ್ತೀಚಿನ ಸಂಚಿಕೆಯಲ್ಲಿ ತಿಳಿಸಿದೆ. 

ಮುಂಬರುವ ಏಪ್ರಿಲ್ನಲ್ಲಿ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರದ ಬಂಡವಾಳ ವೆಚ್ಚದಲ್ಲಿ ರಸ್ತೆ ಮತ್ತು ರೈಲು ಮಾರ್ಗದ ಪಾಲು ಶೇ.11 ರಷ್ಟು ಇರಲಿದೆ. 2014-15ರಲ್ಲಿದ್ದ ಶೇ.2.75ಕ್ಕೆ ಹೋಲಿಸಿದರೆ ಇದು ಹಲವು ಪಟ್ಟು ಹೆಚ್ಚಳವಾಗಿದೆ. 

ಮೂಲಸೌಕರ್ಯವು ಕೇಂದ್ರ ಸರಕಾರದ ಇಲಾಖೆಯಾಗಿದ್ದರೆ, ಹಣಕಾಸು ಮತ್ತು ರಕ್ಷಣಾ ಸಚಿವಾಲಯಗಳ ನಂತರ ಇದು ಮೂರನೇ ಅತಿದೊಡ್ಡ ಆಯವ್ಯಯ ಅನುದಾನ ಪಡೆದ ಇಲಾಖೆಯಾಗಿರುತ್ತಿತ್ತು. ಭಾರತದೊಳಗಿನ ಸರುಕು-ಸಾಗಣೆ ವೆಚ್ಚವು ಇಂದು ಜಿಡಿಪಿಯ ಶೇಕಡಾ 14ರಷ್ಟಿದ್ದು, ಅದನ್ನು 2030ರ ವೇಳೆಗೆ ಶೇಕಡಾ 8ಕ್ಕೆ ಇಳಿಸುವುದು ಈ "ಅಗಾಧ ವೆಚ್ಚದ" ಉದ್ದೇಶವಾಗಿದೆ ಎಂದು ವರದಿಯು ಹೇಳಿದೆ. 

ಮೂಲಸೌಕರ್ಯದ ಮೇಲಿನ ವೆಚ್ಚದ ಹೆಚ್ಚಳದ ಜೊತೆಗೆ, ಅಧಿಕಾರಶಾಹಿ ಸುಧಾರಣೆಗಳನ್ನು ಹಿಂದೆಂದೂ ಕಾಣದ ವೇಗದಲ್ಲಿ ಕೈಗೊಳ್ಳಲಾಗುತ್ತಿದೆ. ಹಣಕಾಸಿನ ಅಧಿಕಾರಗಳನ್ನು ನಿಯೋಜಿಸಲಾಗುತ್ತಿದೆ ಮತ್ತು ವಿಳಂಬ ನೀತಿಗೆ ತಿಲಾಂಜಲಿ ಇಡಲಾಗುತ್ತಿದೆ. 

ಗಂಟೆಗೆ 160 ಕಿ.ಮೀ ಶರವೇಗದಲ್ಲಿ ಚಲಿಸುವ, ಮೊದಲ ಬಾರಿಗೆ ದೇಶೀಯವಾಗಿ ವಿನ್ಯಾಸಗೊಳಿಸಿದ ಹಾಗೂ ನಿರ್ಮಿಸಲಾದ ʻವಂದೇ ಭಾರತ್ ಎಕ್ಸ್ಪ್ರೆಸ್ʼ ರೈಲಿನಿಂದ ಹಿಡಿದು; ಮುಂಬೈ ಮತ್ತು ದೆಹಲಿ,  ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ನಡುವೆ ಎರಡು ಹೊಸ ಸರಕು-ಸಾಗಣೆ ಕಾರಿಡಾರ್ಗಳು, ಸರಕುಗಳನ್ನು ವೇಗವಾಗಿ ಸಾಗಿಸಲು ಅನುವು ಮಾಡಿಕೊಡುವ ವಿದ್ಯುದ್ದೀಕರಿಸಿದ ಹಳಿಗಳು, ವರ್ಷಕ್ಕೆ 10,000 ಕಿಲೋಮೀಟರ್ ಉದ್ದದ ಹೆದ್ದಾರಿ ನಿರ್ಮಾಣ, ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಳ, ವಿದ್ಯುತ್ ಉತ್ಪಾದನೆ ಹೆಚ್ಚಳ ಮತ್ತು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕದ ಅಗಾಧ ವಿಸ್ತರಣೆವರೆಗೆ ಭಾರತದ ಮೂಲಸೌಕರ್ಯ ಹೂಡಿಕೆಯು ಕೇಂದ್ರೀಕರಣಗೊಂಡಿದೆ.

ಕಳೆದ ಎಂಟು ವರ್ಷಗಳಲ್ಲಿ ಭಾರತವು 50,000 ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ಸೇರಿಸಿದೆ, ಇದು ಹಿಂದಿನ ಎಂಟು ವರ್ಷಗಳಲ್ಲಿ ನಿರ್ವಹಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಗ್ರಾಮೀಣ ರಸ್ತೆ ಜಾಲದ ಉದ್ದವು 2014ರಲ್ಲಿ 3,81,000 ಕಿ.ಮೀ ಇದ್ದದ್ದು, 2023ರಲ್ಲಿ 7,29,000 ಕಿ.ಮೀ.ಗೆ ಹೆಚ್ಚಿದೆ. 

ಇದೇ ಅವಧಿಯಲ್ಲಿ, ವಿಮಾನ ನಿಲ್ದಾಣಗಳ ಸಂಖ್ಯೆ 148ಕ್ಕೆ ದ್ವಿಗುಣಗೊಂಡಿದೆ. ಅಲ್ಲದೆ 2013ರಲ್ಲಿ 60 ದಶಲಕ್ಷದಷ್ಟಿದ್ದ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ 2019ರಲ್ಲಿ 141 ದಶಲಕ್ಷಕ್ಕೆ ಜಿಗಿದಿದೆ. ಮುಂದಿನ 10 ವರ್ಷಗಳಲ್ಲಿ ಪ್ರಯಾಣಿಕರ ದಟ್ಟಣೆ 400 ದಶಲಕ್ಷಕ್ಕೆ ಏರುವ ನಿರೀಕ್ಷೆಯಿದೆ. 

ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಶೇಕಡಾ 22 ರಷ್ಟು ಏರಿಕೆಯಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ಐದು ವರ್ಷಗಳಲ್ಲಿ ಸುಮಾರು ದ್ವಿಗುಣಗೊಂಡಿದೆ. ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ದೇಶವು ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ. 

2014ರಲ್ಲಿ 61 ದಶಲಕ್ಷದಷ್ಟಿದ್ದ ಬ್ರಾಡ್ ಬ್ಯಾಂಡ್ ಸಂಪರ್ಕಗಳ ಸಂಖ್ಯೆ  ಕಳೆದ ವರ್ಷ 816 ದಶಲಕ್ಷಕ್ಕೆ ಏರಿದೆ. 2016 ರಲ್ಲಿ ಪ್ರಾರಂಭಿಸಲಾದ ಮೊಬೈಲ್ ಆಧಾರಿತ ಪಾವತಿ ವ್ಯವಸ್ಥೆಯು ಡಿಜಿಟಲ್ ವಹಿವಾಟಿನ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. 

"ಪರಿವರ್ತನಕಾರಿ ಹೊಸ ಸಾರಿಗೆ ಮೂಲಸೌಕರ್ಯದ ಶಕ್ತಿಯಲ್ಲಿ ಮೋದಿಯವರು ಹೊಂದಿರುವ ವಿಶ್ವಾಸವನ್ನು ಇದು ಚೆನ್ನಾಗಿ ಬಿಂಬಿಸುತ್ತದೆ,ʼʼ ಎಂದು ʻದಿ ಎಕನಾಮಿಸ್ಟ್ʼ ಹೇಳಿದೆ. 

ಭಾರತವು ಸಾಧಿಸಲು ಬಯಸುವ ಉನ್ನತ ಬೆಳವಣಿಗೆಗೆ ಇದು ವೇದಿಕೆ ಕಲ್ಪಿಸುತ್ತದೆ. ಅಭಿವೃದ್ಧಿಯ ಅಲೆಯ ಉಬ್ಬರವು ಭಾರತದ ಎಲ್ಲ ವಿಭಾಗಗಳನ್ನು ಮೇಲೆತ್ತಲಿದೆ.  

Similar News