ಚುನಾವಣೆಯ ಕಾಲವಿದು ಎಚ್ಚರ..!: 'ಉರಿಗೌಡ, ನಂಜೇಗೌಡ' ಬಗ್ಗೆ ನಟ ಕಿಶೋರ್ ಎಚ್ಚರಿಕೆಯ ಸಂದೇಶ

Update: 2023-03-22 06:23 GMT

ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರುವ ಟಿಪ್ಪು ಸುಲ್ತಾನರನ್ನು ಕೊಂದರು ಎಂದು ಬಿಜೆಪಿ ಹಾಗೂ ಸಂಘಪರಿವಾರ ಬಿಂಬಿಸುತ್ತಿರುವ ಉರಿಗೌಡ ಹಾಗೂ ನಂಜೇಗೌಡರ ಬಗ್ಗೆ ಕನ್ನಡದ ಹೆಸರಾಂತ ನಟ ಕಿಶೋರ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. 

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅವರು @actorkishore, 'ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು ಉರಿಗೌಡ, ನಂಜೇಗೌಡ ಹೆಸರಿನಲ್ಲಿ ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಟ ಕಿಶೋರ್ ಅವರ ಪೋಸ್ಟ್ ಹೀಗಿದೆ...

'ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ… ಇದು ಇಂದಿನ ಪ್ರಜಾಪ್ರಭುತ್ವ.'

''ನಂಜೇಗೌಡ ಉರಿಗೌಡರ ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ? ಇತ್ತ ಟಿಪ್ಪುವನ್ನು ಕೊಂದವರೆಂದು ಹೇಳಿ ಮುಸ್ಲಿಮರನ್ನೂ ಒಕ್ಕಲಿಗರನ್ನೂ ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುತ್ತಲೇ ಒಕ್ಕಲಿಗರು ಬ್ರಿಟೀಷರ ಪರವಾಗಿದ್ದರೆಂದು ಹೇಳಿ ಮುಂದೊಂದು ದಿನ ಒಕ್ಕಲಿಗರಿಗೂ ದೇಶದ್ರೋಹಿ ಪಟ್ಟಕಟ್ಟುವ ಹುನ್ನಾರವೇ?''

''ಮೊದಲು ಹಿಂದೂ ಮುಸ್ಲಿಂ ಅಂದರು ಮನೆಯ ಸದಸ್ಯರನ್ನು ಎತ್ತಿಕಟ್ಟಿದರು, ಗಾಂಧಿಯೆಂದರು, ಗಾಂಧಿ ಕೊಂದರು, ರೈತರನ್ನು ಭಯೋತ್ಪಾದಕರೆಂದರು, ಉರಿ ಹೊತ್ತಿಸಿದರು ನಂಜು ಕಾರಿದರು ಒಕ್ಕಲಿಗರೆಂದರು ಟಿಪ್ಪುವೆಂದರು ಬಿಹಾರಿಗಳೆಂದರು ತಮಿಳರೆಂದರು, ಧರ್ಮವೆಂದರು, ಜಾತಿಯೆಂದರು, ದಲಿತರೆಂದರು ಭಾಷೆಯೆಂದರು ದೇಶವೆಂದರು, ಇತಿಹಾಸ ತಿರುಚಿದರು, ಸುಳ್ಳು ಸುದ್ದಿ ಹರಡಿದರು''

''ಕೇವಲ ಅಧಿಕಾರದಾಸೆಯಿಂದ ಸರ್ವಜನಾಂಗದ ಶಾಂತಿಯ ತೋಟವನ್ನು ಕದಡಿ, ವಸುದೇವ ಕುಟುಂಬಕಂನ ಹೆಮ್ಮೆಯ ಕುಟುಂಬವನ್ನು ಮುರಿಯಲು ಬರುತ್ತಿದ್ದಾರೆ ಮಾಡಿದ ಕೆಲಸದ ಮೇಲೆ ಮತ ಯಾಚಿಸಲು ಯೋಗ್ಯತೆಯಿಲ್ಲದ ಧರ್ಮಾಂಧ ಮನೆಹಾಳರು.. ಚುನಾವಣೆಯ ಕಾಲವಿದು ಎಚ್ಚರ..'' ಎಂದು ಬರೆದುಕೊಂಡಿದ್ದಾರೆ. 

Similar News