ಕೊಡವ ಜನಾಂಗವನ್ನು ಬುಡಕಟ್ಟು ಪಟ್ಟಿಗೆ ಸೇರಿಸಲು ಆಗ್ರಹ

Update: 2023-03-24 16:13 GMT

ಮಂಗಳೂರು: ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸಲು ಹೈಕೋರ್ಟ್ ನೀಡಿರುವ ಆದೇಶ ಸಹಿತ ಎಲ್ಲ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಕೊಡವ ನ್ಯಾಶನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದರು.

ನಗರದ ಲೇಡಿಹಿಲ್ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ಕೊಡವರಲ್ಲದವರ ಸಮಾವೇಶ ನಡೆಸಿ, ಅವರನ್ನು ಕೊಡವರೆಂದು ಬಿಂಬಿಸಲು ಕುಲಶಾಸ್ತ್ರ ಅಧ್ಯಯನದ ಘೋಷಣೆ ಮಾಡಿರುವುದನ್ನು ಸ್ಥಗಿತಗೊಳಿಸಬೇಕು. ಈ ಅಧ್ಯಯನಕ್ಕೆ ಮುಂದಾಗಿರುವುದು ಅಕ್ಷಮ್ಯ. ಸರಕಾರದ ನಡೆ ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆ ಎಂದು ಎನ್.ಯು. ನಾಚಪ್ಪ  ಆರೋಪಿಸಿದರು.

ಕೊಡವರು ದೇಶ, ರಾಜ್ಯಕ್ಕೆ ವಿವಿಧ ಸಂಘಟನೆಗಳು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದರೂ ಜನಪ್ರತಿ ನಿಧಿಗಳಿಂದ ನಿರಂತರ ಅನ್ಯಾಯ ನಡೆಯುತ್ತಿದೆ. ಕೊಡವರ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ನಮ್ಮ ಭಾಗದ ಶಾಸಕರು ಇದರ ಬಗ್ಗೆ ಒಲವು ತೋರುತಿಲ್ಲ. ಆದರೆ ಮುಖ್ಯಮಂತ್ರಿಯವರಿಗೆ ಸೂಕ್ಷ್ಮ ಒಳನೋಟ ಇರಬೇಕು, ಇಲ್ಲದಿದ್ದರೆ ಅಧಿಕಾರಿಗಳಿಂದ ಕೇಳಿ ಪಡೆದುಕೊಳ್ಳಬೇಕು. ಸರಕಾರ ಈ ನಿಟ್ಟಿನಲ್ಲಿ ವಿಫಲವಾಗಿದೆ ಎಂದು ನಾಚಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೊಡವ ನ್ಯಾಶನಲ್ ಕೌನ್ಸಿಲ್ ಮುಖಂಡರಾದ ಕಲಿಯಂಡ ಪ್ರಕಾಶ್, ಚಂಬಂಡ ಜನತ್ ಕುಮಾರ್, ಅರೆಯಡ ಗಿರೀಶ್ ಹಾಗೂ ಮನೋಜ್ ಉಪಸ್ಥಿತರಿದ್ದರು.

Similar News