ಆಂಧ್ರದಲ್ಲಿ ಮುಸ್ಲಿಮ್ ಮೀಸಲಾತಿ ರದ್ದಾಗಿದೆಯೇ?

ಕರ್ನಾಟಕದಲ್ಲಿ ಮುಸ್ಲಿಮ್ ಮೀಸಲಾತಿ ರದ್ದತಿ ವಿಷಯದಲ್ಲಿ ಸರಕಾರ ಹೇಳುತ್ತಿರುವ ಮತ್ತೊಂದು ಮಹಾ ಸುಳ್ಳು!

Update: 2023-03-30 04:29 GMT

ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಮೀಸಲಾತಿಯ ಭಾಗವಾಗಿ 2 (ಬಿ) ಪ್ರವರ್ಗದಡಿ ನೀಡಿದ್ದ ಶೇ.4 ಮೀಸಲಾತಿಯನ್ನು ರದ್ದು ಮಾಡಿದ್ದಕ್ಕೆ ಬೊಮ್ಮಾಯಿ ಸರಕಾರ ನೀಡಿರುವ ಕಾರಣ ಅರ್ಧ ಸತ್ಯ ಮಾತ್ರವಲ್ಲ ಮಹಾಸುಳ್ಳಿನಿಂದಲೂ ಕೂಡಿದೆ.

"ಆಂಧ್ರದಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಕೊಟ್ಟ ಮೀಸಲಾತಿಯನ್ನು ಆಂಧ್ರ ಹೈಕೋರ್ಟು ರದ್ದು ಮಾಡಿದೆ. ಆದ್ದರಿಂದ ನಾವು  ಕರ್ನಾಟಕದಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ರದ್ದು ಮಾಡಿದ್ದೇವೆ" ಎಂದು ಬಿಜೆಪಿ ಸರಕಾರ ಸಬೂಬು ನೀಡುತ್ತಿದೆಯಷ್ಟೆ.  ಕರ್ನಾಟದಲ್ಲಿ ಮುಸ್ಲಿಮರಿಗೆ ಕೊಡುತ್ತಿದ್ದ ಮೀಸಲಾತಿ ಧರ್ಮದ ಆಧಾರದಲ್ಲಿ ಅಲ್ಲ. ಬದಲಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಆದರೆ ಆಂಧ್ರದಲ್ಲಿ ಮುಸ್ಲಿಮರ ಮೀಸಲಾತಿ ರದ್ದಾಗಿದೆಯೇ? ಆಂಧ್ರದಲ್ಲಿ ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿತ್ತೇ? ಈ ಎರಡೂ ವಿಷಯಗಳ ಬಗ್ಗೆಯೂ ಬೊಮ್ಮಾಯಿ ಸರಕಾರ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದೆ.

2004ರಲ್ಲಿ ಆಂಧ್ರ ಸರಕಾರ ಮುಸ್ಲಿಮರಿಗೆ ಧರ್ಮಾದ ಆಧಾರಲ್ಲಿ ಶೇ.5ರಷ್ಟು ಮೀಸಲಾತಿಯನ್ನು ಕಲ್ಪಿಸಿ ಆದೇಶ ಹೊರಡಿಸಿತ್ತು. ಅದನ್ನು (ಟಿ.ಮುರಳೀಧರ ರಾವ್ ವರ್ಸಸ್ ಆಂಧ್ರ ಸರ್ಕಾರ ಪ್ರಕರಣದಲ್ಲಿ ) ಹೈಕೋರ್ಟು ರದ್ದು ಮಾಡಿತ್ತು.

ಆದರೆ ಅದಕ್ಕೆ ಕಾರಣ:

1) ಈ ಆದೇಶವನ್ನು ಮಾಡುವಾಗ ಸರಕಾರ ಹಿಂದುಳಿದ ವರ್ಗಗಳ ಆಯೋಗದ  ಅಭಿಪ್ರಾಯ ಪಡೆದಿಲ್ಲ ಮತ್ತು

2) ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50ರ ಮೇಲ್ಮಿತಿಯನ್ನು ಮೀರುತ್ತದೆ ಎಂಬ ಕಾರಣಕ್ಕೆ ಹೊರತು ಧಾರ್ಮಿಕ ಆಧಾರದ ಮೀಸಲಾತಿ ಸಲ್ಲದು ಎಂಬ ಕಾರಣಕ್ಕಾಗಿ ಅಲ್ಲ.

ಆನಂತರ 2005ರಲ್ಲಿ ಆಂಧ್ರ ಸರಕಾರ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕದಂತೆ ಇಡೀ ಮುಸ್ಲಿಮರನ್ನು ಹಿಂದುಳಿದ ವರ್ಗಗಳಾಗಿ ಪರಿಗಣಿಸಿ ಒಬಿಸಿ ಮೀಸಲಾತಿಯ ಭಾಗವಾಗಿ ಮತ್ತು ಅದರೊಳಗೆ ಶೇ.5ರಷ್ಟು ಮೀಸಲಾತಿಯನ್ನು ಕಲ್ಪಿಸಿತು. ಅದನ್ನು ಕೂಡ ಆಂಧ್ರ ಪ್ರದೇಶ ಹೈಕೋರ್ಟ್ (ಅರ್ಚನಾ ರೆಡ್ಡಿ ವರ್ಸಸ್ ಆಂಧ್ರ ಪ್ರದೇಶ ಸರಕಾರ ಪ್ರಕರಣದಲ್ಲಿ ) ರದ್ದು ಮಾಡಿತು. ಆಗಲೂ ಅದಕ್ಕೆ ಕಾರಣವಾದದ್ದು ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟಿದ್ದಾರೆ ಎಂಬುದಲ್ಲ. ಬದಲಿಗೆ ಇಡೀ ಮುಸ್ಲಿಮ್ ಸಮುದಾಯ ಹಿಂದುಳಿದ ವರ್ಗ ಎಂದು ಸರಿಯಾಗಿ ಸಾಬೀತಾಗಿಲ್ಲ ಎಂಬ ಕಾರಣಕ್ಕೆ.

ನಂತರ ಆಂಧ್ರ ಸರಕಾರ ಮುಸ್ಲಿಮರ ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಿ ಶಿಫಾರಸು ಮಾಡಲು ನಿವೃತ್ತ ಸರಕಾರಿ ಅಧಿಕಾರಿ ಮತ್ತು  ಹಿರಿಯ ಹಾಗೂ ಮೇಧಾವಿ ಸಾಮಾಜಿಕ ನ್ಯಾಯನೀತಿಜ್ಞ  ಪಿ.ಎಸ್. ಕೃಷ್ಣನ್ ಅವರ  ಸಮಿತಿಯನ್ನು ನೇಮಿಸಿತು. ಆ ಸಮಿತಿಯು ವಿಸ್ತೃತ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಿ ಮುಸ್ಲಿಮರಲ್ಲಿನ 14 ಪ್ರಮುಖ ಪ್ರವರ್ಗಗಳನ್ನು ಹಿಂದುಳಿದ ವರ್ಗಗಳಾನ್ನಾಗಿ ಪರಿಗಣಿಸಿ ಒಬಿಸಿ ಮೀಸಲಾತಿ ಸಮುದಾಯದೊಳಗೆ  ವಿಶೇಷ ಪ್ರವರ್ಗ 'E' ಕಲ್ಪಿಸಿ ಶೇ.4ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿತು. ಅದನ್ನು ಹಿಂದುಳಿದ ವರ್ಗದ ಆಯೋಗವೂ ಅನುಮೋದಿಸಿತು. ಇದನ್ನು ಆಂಧ್ರದ ಶಾಸನಸಭೆ ಹೆಚ್ಚೂ ಕಡಿಮೆ ಸರ್ವಸಮ್ಮತಿಯಿಂದ ಅನುಮೋದಿಸಿ ಕಾಯ್ದೆ ಮಾಡಿತು.

ಈ ಕಾಯ್ದೆಯನ್ನು ಹಲವರು ಆಂಧ್ರ ಹೈಕೋರ್ಟಿನಲ್ಲಿ ಪ್ರಶ್ನಿಸಿದರು. 2010ರ ಫೆಬ್ರವರಿಯಲ್ಲಿ ಹೈದರಾಬಾದ್ ಹೈಕೋರ್ಟಿನ ಪೂರ್ಣ ಪೀಠ 5-2 ಬಹುಮತದ ಮೇಲೆ ಈ ಆದೇಶವನ್ನು ರದ್ದು ಮಾಡಿತ್ತು.  ಅದಕ್ಕೆ ಹೈಕೋರ್ಟ್ ನೀಡಿದ ಕಾರಣ:

1) ಸರಕಾರ ಕೆಲವು ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ವೆಂಬುದು ಮತ್ತು

 2) ಮುಸ್ಲಿಮರಿಗೆ ನೀಡುವ ಮೀಸಲಾತಿಯಿಂದ ಮತಾಂತರ ಹೆಚ್ಚಬಹುದು ಎಂಬ ಆತಂಕ.

ಆದರೆ  ಹೈಕೋರ್ಟಿನ ಈ ಆದೇಶಕ್ಕೆ 2010ರ ಮಾರ್ಚ್ 25ರಂದೇ  ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತಡೆಯಾಜ್ಞೆ ನೀಡಿತು. ಅಷ್ಟು ಮಾತ್ರವಲ್ಲ, ಆಂಧ್ರ ಸರಕಾರವು 14 ಮುಸ್ಲಿಮ್ ಪ್ರವರ್ಗಗಳಿಗೆ ಸಮುದಾಯಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮುಂದುವರಿಸಲು ಆದೇಶ ನೀಡಿತು ಹಾಗೂ ಈ ವಿಷಯದಲ್ಲಿ ಹಲವಾರು ಸಾಂವಿಧಾನಿಕ ಅಂಶಗಳಿರುವುದರಿಂದ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿತು.

EWS ಮೀಸಲಾತಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸಾಂವಿಧಾನಿಕ ಪೀಠಕ್ಕೆ ಮುಸ್ಲಿಮ್ ಮೀಸಲಾತಿಯ ಪ್ರಕರಣವನ್ನು ವರ್ಗಾಯಿಸಲಾಯಿತು. ಈ ಸಾಂವಿಧಾನಿಕ ಪೀಠವು ಮುಸ್ಲಿಮ್ ಮೀಸಲಾತಿಯ ವಿಷಯದ ಬಗ್ಗೆ ಕೊಟ್ಟ ಕೊನೆಯ ಬಾರಿಗೆ ಅಹವಾಲು ಆಲಿಸಿದ್ದು 2022ರ ಸೆಪ್ಟಂಬರ್ 6ರಂದು. ಆಗಲೂ ಅದು ತ್ರಿಸದಸ್ಯ ಪೀಠದ ಆದೇಶವನ್ನು ಅರ್ಥಾತ್ ಮುಸ್ಲಿಮರಿಗೆ ಕೊಡುತ್ತಿದ್ದ ಮೀಸಲಾತಿಯನ್ನು ಮುಂದುವರಿಸುವ ಆದೇಶವನ್ನು ಚಾಲ್ತಿಯಲ್ಲಿಟ್ಟು ವಿಚಾರಣೆಯನ್ನು ಅನಿರ್ದಿಷ್ಟ ಕಾಲ ಮುಂದೂಡಿದೆ.

ಆಸಕ್ತರು ಸುಪ್ರೀಂ ಆದೇಶವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: 

 https://main.sci.gov.in/jonew/bosir/orderpdfold/1080534.pdf

ಅಂದರೆ ಸಾರಾಂಶದಲ್ಲಿ: ಆಂಧ್ರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿರುವುದು ಹಿಂದುಳಿದ ವರ್ಗದ ಆಧಾರದಲ್ಲಿಯೇ ವಿನಾ ಧರ್ಮದ ಆಧಾರದಲ್ಲಲ್ಲ. ಈ ವಿಷಯದ ಬಗ್ಗೆ ಆಂಧ್ರ ಹೈಕೋರ್ಟ್ ಕೊಟ್ಟ ವ್ಯತಿರಿಕ್ತ  ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದಲ್ಲದೆ, ಮುಸ್ಲಿಮರಿಗೆ ಹಿಂದುಳಿದ ವರ್ಗಗಳಾ ಗಿ ನೀಡುತ್ತಿದ್ದ ಮೀಸಲಾತಿಯನ್ನು ಚಾಲ್ತಿಯಲ್ಲಿಟ್ಟಿದೆ. ವಿಸ್ತೃತ ಸಾಂವಿಧಾನಿಕ ಪೀಠವೂ ಮೀಸಲಾತಿ ಮುಂದುವರಿಕೆಗೆ ತಡೆ ನೀಡಿಲ್ಲ. ಹೀಗಾಗಿ ಮೀಸಲಾತಿಯನ್ನು ಕೋರ್ಟ್ ರದ್ದುಗೊಳಿಸಿದೆ ಎಂಬ ಬೊಮ್ಮಾಯಿ ಸರಕಾರದ ವ್ಯಾಖ್ಯಾನ ಮತ್ತು ಆದೇಶಗಳು ಸುಪ್ರೀಂ ಕೋರ್ಟ್  ತೀರ್ಪಿನ ಅಪವ್ಯಾಖ್ಯಾನ ಮತ್ತು ಕೋರ್ಟ್ ನಿಂದನೆಯೂ ಆಗುತ್ತದೆ.

Similar News